ಬಿಟ್ಟು ಬಿಡು ಈ ಮಂತ್ರ, ಈ ಪೂಜೆ
ಈ ಜಪ ಮಣಿಗಳೆಣಿಕೆ,
ದೇಗುಲದ ಬಾಗಿಲಗಳೆಲ್ಲವನು ಮುಚ್ಚಿ
ಕತ್ತಲೆಯ ಮೂಲೆಯಲಿ ಓರ್ವನೇ ಕುಳಿತು
ಆರ ಪೂಜೆಯನು ಗೈಯುತಿರುವೆ?
ಕಣ್ತೆರೆದು ನೋಡು, ಓ ಭಕುತ,
ನಿನ್ನ ದೇವ ನಿನ್ನೆದುರಿನಲ್ಲಿಲ್ಲ.
ಅವನಿಹನು ಒಕ್ಕಲಿಗ ನೆಲವನುಳುತಿರುವಲ್ಲಿ,
ಅವನಿಹನು ಕಲ್ಲುಟಿಗ ಕಲ್ಲೊಡೆಯುತಿರುವಲ್ಲಿ,
ಅವನಿಹನು ಅವರೊಡನೆ ಬಿಸಿಲಿಲ್ಲಿ, ಮಳೆಯಲ್ಲಿ
ಅವನ ಉಡಿಗೆಗಳೆಲ್ಲ ಮಿಂದಿಹವು ಧೂಳಿನಲಿ
ಅವನಂತೆಯೇ ನೀನು,
ನಿನ್ನ ಮಡಿಯುಡಿಗೆಗಳ ತೊಡೆದು,
ಧೂಳುತುಂಬಿದ ಈ ಮಣ್ಣಿಗಿಳಿದು-ಬಾ.
ಮುಕ್ತಿ? ಎಲ್ಲಿಹುದು ಮುಕ್ತಿ?
ನಮ್ಮೊಡೆಯನೇ ಬಲು ಸಂತಸದಿಂ,
ಜಗದ ನಿರ್ಮಾಣಕಾರ್ಯದ ಬಂಧನವ
ಕೈಗೆತ್ತಿಕೊಂಡಿರಿವ.
ನಮ್ಮೆಲ್ಲರೊಡನೆ ಆತ,
ಅನಂತ ಬಂಧನದಲ್ಲಿರುವ.
ನಿನ್ನ ಧ್ಯಾನದೂಳಗಿಂದ ಎಚ್ಚೆತ್ತು ಬಾ
ಆ ಹೂವು ಆ ಧೂಪ ದೀಪಗಳ ಬಿಟ್ಟು ಬಾ.
ನಿನ್ನ ಮೈ ಮೇಣ್ ತೊಡಿಗೆಗಳು
ಕೊಳೆಯಾದರೇನು? ಹರಿದರೇನು?
ನಿನ್ನ ಹಣೆ ಬೆವರ ಸುರಿಸುತ್ತ,
ಶ್ರಮವ ಗೈಯುತ್ತ,
ಅವನೊಡನೆ ನಿಲ್ಲು, ಮೇಣ್
ಅವನ ಕಾಣು.
- ಡಾ.ರವೀಂದ್ರನಾಥ್ ಟ್ಯಾಗೂರ್
No comments:
Post a Comment