Friday 30 March 2012

ನನ್ನ ಅವತಾರ

ಮತ್ತ ಬರ್ತೀನಂತ ಕೈಕೊಟ್ಟ
ಹೋದೆಲ್ಲೋ ಕಿಟ್ಟೂ,
ಬಾರೋ ಈಗ ಅಂಜುಬುರುಕಾ
ಯಾಕ ಕಲ್ಲಾಗೀದಿ ?

ಅಲ್ಲೋ, ಹನಿ ಹಾಲಿಲ್ಲದs ಸತ್ತ
ಮಕ್ಕಳ ಹೆಣದ ಮ್ಯಾಲ್ನಿಂತು
ಕ್ಷೀರಾಭಿಷೇಕಾ ಕೇಳ್ತೀಯಲ್ಲೋ
ನಾಚಿಗ್ಗೇಡಿ !

ಕೊಡೋ ಮಗನ ನಿನ್ನ ಪೀತಾಂಬರದ
ಚೂರು, ಬತ್ತಲೆ ನಡಗವಗ ?
ಹಾಕೋ ನೋಡೂನು ಕ್ಷೀರಸಾಗರದ
ಒಂದು ಲೋಟ ಹಾಲು
ಉಪಾಸ ಸಾಯವಗ ?

ಕೊಲೀಸುಲಿಗೀಗಿ ಕಣ್ಣ ಮಿಚ್ಚಿದ
ಹೇಡಿ ಆಗಿಯಲ್ಲೋ ಖೋಡಿ,
ಹೊಲಸ ತಿನ್ನೋ ಹೀನರ
ಜೋಡಿ ಪಾಲಾ ಕೂಡಿ,
ಬಂಗಾರ ಮೀಸಿ ಹಾಕೊತೇನೋ ಭಡವಾ
ನಿನಗ್ಯಾಕೋ ಮೀಸಿ
ಹುಡಿಗ್ಯಾರ ಸೀರಿ ಕದ್ದ ಹೇಸಿ,

ನಿನಗೆ ನಾಕ ನಾಕ ಕೈ
ಇರೂದೂ ನಿನ್ನ ದೇವೀ
ಮಕಮಲ್ಲಿನ ಮೈ ಬಳಸಿ
ಹಾಡಾಕಲ್ಲಪಾ ಮಾಮಾ,

ಎತ್ತೋ ಬದ್ದವ್ರನ್ನ
ಒತ್ತೋ ತುಳದವ್ರನ್ನ
ಗಂಡಸಾಗಿದ್ರೆ !!

ಕಾಗೀ ಕೈಯಾಗ ಕಛೇರಿ
ಕೊಟ್ಟಂಗಾಗೇತಿ ನಿನಗ
ಒಂದೇ ಒಂದಿನಾ ಛಾರ್ಜ
ಕೊಟ್ಟು ನೋಡೋ ನನಗ

ನಲ್ಲಿಯೊಳಗೆಲ್ಲಾ ಹಾಲ ಸುರಿಸಿ
ನೆಲಕ್ಕೆಲ್ಲಾ ಪೀತಾಂಬರಾ ಹಾಸ್ತೀನಿ
ಈ ಚಂಡಾಲರನ್ನೆಲ್ಲಾ ಚಂಡಾಡಿ
ರುಂಡಾ ಮಾಲಿ ಹಾಕ್ಕೊಂಡು
ಕುಣೀತೀನಿ.

ಎಣಿಸೆಣಿಸಿ ಹಲ್ಲು ಮುರದು
ನತ್ತ ಮಾಡಿ ಹಾಕೋತೀನೀ
ಹೊಟ್ಟಿ ಹರದು ಕಳ್ಳ ಹಿರದು
ಬಳೀ ಮಾಡಿ ಇಟಕೋತೀನೀ

ಆ ಮ್ಯಾಲೆ, ಆ ಮ್ಯಾಲೆ, ಆಮ್ಯಾಲೆ
ನಿನ್ನೂ ಒಂದು ಕೈ
ನೋಡೇ ಬಿಡ್ತಿನಿ.
 
                - ಶಶಿಕಲಾ ವೀರಯ್ಯಸ್ವಾಮಿ
Thursday 29 March 2012

ನಿಜವಾದ ಧರ್ಮ ಕಾರ್ಯ


ಮಾರ್ಚ್ 26. 2012 ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನ ವನದಲ್ಲಿ ನೂರಾರು ಮಠಾದೀಶರು ಧರಣಿ ಕುಳಿತಿದ್ದರು. ಇತ್ತೀಚೆಗೆ ಮಠಾದೀಶರು ಮಾಜಿ ಮುಖ್ಯ ಮಂತ್ರಿ ಯಡಿಯೂರಪ್ಪ ಪರವೋ ಅಥವ ಮುಖ್ಯಮಂತ್ರಿ ಸದಾನಂದಗೌಡರ ಪರವೋ ರಾಜಕೀಯ ಲಾಭಿ ನಡೆಸಲು ಇಲ್ಲಿ ಸೇರಿರಬಹುದೆಂದುಕೊಂಡವರಿಗೆ ಅಲ್ಲೊಂದು ಶಾಕ್ ಕಾದಿತ್ತು. ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ನಾಡಿನ ನೂರಾರು ಮಠಾದೀಶರುಗಳು ಅತ್ಯಂತ ಅಮಾನವೀಯವಾಗಿರುವ ಪಂಕ್ತಿ ಭೇದ ಮತ್ತು ಮಡೆಸ್ನಾನ ಪದ್ದತಿಯನ್ನು ನಿಶೇಧಿಸಬೇಕೆಂದು ಆಗ್ರಹಿಸಿ ಧರಣಿ ಕುಳಿತ್ತಿದ್ದರು. ಅಂದು ಅಲ್ಲಿ ಸೇರಿದ್ದ ಎಲ್ಲಾ ಮಠಾದೀಶರ ಧ್ವನಿ ಒಂದೇ ಆಗಿತ್ತು ಅದು ಪ್ರಸ್ತುತ ಮಾನವ ಸಮಾಜವನ್ನು ಬಾದಿಸುತ್ತಿರುವ ಪುರೋಹಿತ ಶಾಹಿಯ ನಿರಂತರ ಶೋಷಣೆ, ಜ್ಯೋತಿಷ್ಯ, ಮುಡನಂಬಿಕೆ ವಾಸ್ತುಗಳನ್ನು ಹಿಮ್ಮೆಟ್ಟಸಬೇಕು ಮತ್ತು ಸಂವಿಧಾನದ ಮೌಲ್ಯಗಳಿಗೆ ವಿರುದ್ದವಾಗಿರುವ ಮಡೆಸ್ನಾನ ಮತ್ತು ಪಂಕ್ತಿಭೇದವನ್ನು ಸರ್ಕಾರ ಕೂಡಲೇ ನಿಷೇಧಿಸಬೇಕೆಂದು ಆಗ್ರಹಿಸಿದರು. ಧರಣಿಯನ್ನು ಆಯೋಜಿಸಿದ್ದ ನಿಡುಮಾಮುಡಿ ಮಠದ ವೀರಭದ್ರ ಚನ್ನಮಲ್ಲ ಸ್ವಾಮಿಯವರು ಮಾತನಾಡುತ್ತಾ ದೇಶದ ಎಲ್ಲ ನಾಗರೀಕರಿಗು ಸಂವಿಧಾನವೇ ಮುಖ್ಯವಾಗಬೇಕೇ ಹೊರತು ಯಾವುದೇ ಶಾಸ್ತ್ರಗಳಲ್ಲ, ಮನುಷ್ಯ ಮನುಷ್ಯನ ನಡುವೆ ಭೇದವನ್ನು ಉಂಟುಮಾಡುವ ಧರ್ಮ ಧರ್ಮವೇ ಅಲ್ಲ ಎಂದರು. ಈ ಧರಣಿಯಲ್ಲಿ ಪಂಡಿತಾರಾಧ್ಯ ಸ್ವಾಮಿ, ತೋಂಟದ ಸಿದ್ದಲಿಂಗ ಸ್ವಾಮಿ, ಕುಮಾರ ಚಂದ್ರಶೇಖರನಾಥ ಸ್ವಾಮಿ, ಕಾಗಿನೆಲೆ ಸ್ವಾಮಿ, ಪಂಚಮಸಾಲಿ ಜಯಮೃತ್ಯುಂಜಯ ಸ್ವಾಮಿ ಸೇರಿದಂತೆ ಹಲವು ಚಿಂತನಾಶೀಲ ಶರಣರು ಧರಣಿಯಲ್ಲಿ ಭಾಗವಹಿಸಿದ್ದರು.
ಇದೇ ವೇದಿಕೆಯಲ್ಲಿ ನಾಡಿನ ಪ್ರಗತಿಪರ ಸಾಹಿತಿಗಳು, ದಲಿತ, ಪ್ರಗತಿಪರ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಈ ಪ್ರತಿಭಟನಾ ಸ್ಥಳಕ್ಕೆ ಬೇಟಿ ನೀಡಿದ್ದ ಮುಖ್ಯಮಂತ್ರಿ ಸದಾನಂದಗೌಡ ಮತ್ತು ಕಾನೂನು ಸಚಿವ ಸುರೇಶ್ ಕುಮಾರ್ ಎರಡು ತಿಂಗಳಲ್ಲಿ ಮಡೆಸ್ನಾನ ಮತ್ತು ಪಂಕ್ತಿಬೇದವನ್ನು ನಿಷೇಧಿಸುವ ಭರವಸೆ ನೀಡಿದ್ದಾರೆ. 
ಈ ಸ್ವಾಮೀಜಿಗಳು ಮಾಡುತ್ತಿರುವುದು ನಿಜವಾದ ಧರ್ಮದ ಕೆಲಸ. ಈ ರೀತಿ ಅಂದಶ್ರದ್ದೆಯ ವಿರುದ್ದದ ಹೋರಾಟ ಮುಂದುವರೆಯಲಿ.

Thursday 8 March 2012

ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್ ಸಫಾರಿ

ಅಗ್ನಿ ಮತ್ತು ಮಹಿಳೆ


ಬೆಂಕಿ ಕಾಸುತ್ತ ಕುಳಿತಾಗ
ಒಲೆಮುಂದೆ
ಗೋಡೆ ತುಂಬೆಲ್ಲ ಚೆಲ್ಲಾಡುವ
ನೆರಳು ಬೆಂಕಿಯದು.


ನೋಡನೋಡುತ್ತ 
ತುಟಿ, ಕಟಿ, ಮಲೆ ಮೂಡುತ್ತ
ಹೆಣ್ಣಿನಾಕೃತಿ ಅರಳಿ
ಬೆಂಕಿಯೊಳಗಣ ಹೆಣ್ಣೊ
ಹೆಣ್ಣಿನೊಳಗಣ ಬೆಂಕಿಯೋ
ಬಿಚ್ಚಿ ಕೊಂಡಿತು ಜಿಜ್ಞಾಸೆ ಸುರುಳು.


ಕೈಗೆಟುಕಿದ ಮೊದಲ ಆಟಿಗೆ
ಊದುಗೊಳವೆ
ಮೊದಲ ಪಾಠ
ಒಲೆ ಹಚ್ಚುವುದು ಹೇಗೆ?
ಊದುತ್ತ ಊದುತ್ತ
ಪರಂಪರೆಯ ಪುಂಗಿಗೆ
ತೂಗುತ್ತ ತೂಗುತ್ತ
ತಲೆಯಳಿದು ಬರಿ
ಮೈಯುಳಿಯಿತು
ಬೆಂಬಿಡಲಿಲ್ಲ ಬೆಂಕಿ
ಸಪ್ತಪದಿ ತುಳಿವಾಗ
ಅಗ್ನಿ ಸಾಕ್ಷಿ ಹೇಳದ್ದು
ಭುಗಿಲೆದ್ದ ಸಂಶಯದ 
ಬೆಂಕಿಯಲಿ ಬೆಂದದ್ದು
ಅಗ್ನಿ ಧಿವ್ಯದಿಂದೆದ್ದು ಬಂದದ್ದು
ಅಪ ರೂಪಕ್ಕೊಮ್ಮೆ
ಅಗ್ನಿ ಕನ್ಯೆಯೂ
ಆಗಿ ಕಿಡಿಗಳನುಗುಳಿದ್ದು
ಅಜ್ಜಿ ಹೇಳಿದ ಕಥೆಯಲ್ಲ
ಎಲ್ಲ ಕಾಲಗಳ ವ್ಯಥೆ.


ಪರಮ ಪತಿವ್ರತೆಯಿವಳು
ಪತಿಯ ಚಿತೆಯ ಹಾದಳು
ಚಿಟ್ಟೆಯಂತೆ ಸೀದಳು
ಮಹಾಸತಿಯಾದಳು!


ಆ ಅಮ್ಮ, ಈ ಅಮ್ಮ, ನೆಟ್ಟ ಕಲ್ಲಮ್ಮ
ಕುಂಕುಮಾರ್ಚನೆಗೊಳ್ಳುತ್ತ
ಕರ್ಪೂರದುರಿಯಲ್ಲಿ ಹೊಳೆದಳು
ಜಾತ್ರೆಗೆ ಜನ ನೆರೆದು
ಬಳೆ, ರಿಬ್ಬನು ಸಂರ್ಭಮದಲ್ಲಿ
ಮರತೇ ಹೋದಳು.
                           - ಗೀತಾ ವಸಂತ