Showing posts with label ಕವಿತೆ. Show all posts
Showing posts with label ಕವಿತೆ. Show all posts

Wednesday, 27 June 2012

ಬಿಟ್ಟು ಬಿಡು ಈ ಮಂತ್ರ ಈ ಪೂಜೆ


ಬಿಟ್ಟು ಬಿಡು ಈ ಮಂತ್ರ, ಈ ಪೂಜೆ
ಈ ಜಪ ಮಣಿಗಳೆಣಿಕೆ,
ದೇಗುಲದ ಬಾಗಿಲಗಳೆಲ್ಲವನು ಮುಚ್ಚಿ
ಕತ್ತಲೆಯ ಮೂಲೆಯಲಿ ಓರ್ವನೇ ಕುಳಿತು
ಆರ ಪೂಜೆಯನು ಗೈಯುತಿರುವೆ?
ಕಣ್ತೆರೆದು ನೋಡು, ಓ ಭಕುತ,
ನಿನ್ನ ದೇವ ನಿನ್ನೆದುರಿನಲ್ಲಿಲ್ಲ.

ಅವನಿಹನು ಒಕ್ಕಲಿಗ ನೆಲವನುಳುತಿರುವಲ್ಲಿ,
ಅವನಿಹನು ಕಲ್ಲುಟಿಗ ಕಲ್ಲೊಡೆಯುತಿರುವಲ್ಲಿ,
ಅವನಿಹನು ಅವರೊಡನೆ ಬಿಸಿಲಿಲ್ಲಿ, ಮಳೆಯಲ್ಲಿ
ಅವನ ಉಡಿಗೆಗಳೆಲ್ಲ ಮಿಂದಿಹವು ಧೂಳಿನಲಿ
ಅವನಂತೆಯೇ ನೀನು,
ನಿನ್ನ ಮಡಿಯುಡಿಗೆಗಳ ತೊಡೆದು,
ಧೂಳುತುಂಬಿದ ಈ ಮಣ್ಣಿಗಿಳಿದು-ಬಾ.

ಮುಕ್ತಿ? ಎಲ್ಲಿಹುದು ಮುಕ್ತಿ?
ನಮ್ಮೊಡೆಯನೇ ಬಲು ಸಂತಸದಿಂ,
ಜಗದ ನಿರ್ಮಾಣಕಾರ್ಯದ ಬಂಧನವ
ಕೈಗೆತ್ತಿಕೊಂಡಿರಿವ.
ನಮ್ಮೆಲ್ಲರೊಡನೆ ಆತ,
ಅನಂತ ಬಂಧನದಲ್ಲಿರುವ.

ನಿನ್ನ ಧ್ಯಾನದೂಳಗಿಂದ ಎಚ್ಚೆತ್ತು ಬಾ
ಆ ಹೂವು ಆ ಧೂಪ ದೀಪಗಳ ಬಿಟ್ಟು ಬಾ.
ನಿನ್ನ ಮೈ ಮೇಣ್ ತೊಡಿಗೆಗಳು
ಕೊಳೆಯಾದರೇನು? ಹರಿದರೇನು?
ನಿನ್ನ ಹಣೆ ಬೆವರ ಸುರಿಸುತ್ತ,
ಶ್ರಮವ ಗೈಯುತ್ತ,
ಅವನೊಡನೆ ನಿಲ್ಲು, ಮೇಣ್
ಅವನ ಕಾಣು.
- ಡಾ.ರವೀಂದ್ರನಾಥ್ ಟ್ಯಾಗೂರ್

Friday, 30 March 2012

ನನ್ನ ಅವತಾರ

ಮತ್ತ ಬರ್ತೀನಂತ ಕೈಕೊಟ್ಟ
ಹೋದೆಲ್ಲೋ ಕಿಟ್ಟೂ,
ಬಾರೋ ಈಗ ಅಂಜುಬುರುಕಾ
ಯಾಕ ಕಲ್ಲಾಗೀದಿ ?

ಅಲ್ಲೋ, ಹನಿ ಹಾಲಿಲ್ಲದs ಸತ್ತ
ಮಕ್ಕಳ ಹೆಣದ ಮ್ಯಾಲ್ನಿಂತು
ಕ್ಷೀರಾಭಿಷೇಕಾ ಕೇಳ್ತೀಯಲ್ಲೋ
ನಾಚಿಗ್ಗೇಡಿ !

ಕೊಡೋ ಮಗನ ನಿನ್ನ ಪೀತಾಂಬರದ
ಚೂರು, ಬತ್ತಲೆ ನಡಗವಗ ?
ಹಾಕೋ ನೋಡೂನು ಕ್ಷೀರಸಾಗರದ
ಒಂದು ಲೋಟ ಹಾಲು
ಉಪಾಸ ಸಾಯವಗ ?

ಕೊಲೀಸುಲಿಗೀಗಿ ಕಣ್ಣ ಮಿಚ್ಚಿದ
ಹೇಡಿ ಆಗಿಯಲ್ಲೋ ಖೋಡಿ,
ಹೊಲಸ ತಿನ್ನೋ ಹೀನರ
ಜೋಡಿ ಪಾಲಾ ಕೂಡಿ,
ಬಂಗಾರ ಮೀಸಿ ಹಾಕೊತೇನೋ ಭಡವಾ
ನಿನಗ್ಯಾಕೋ ಮೀಸಿ
ಹುಡಿಗ್ಯಾರ ಸೀರಿ ಕದ್ದ ಹೇಸಿ,

ನಿನಗೆ ನಾಕ ನಾಕ ಕೈ
ಇರೂದೂ ನಿನ್ನ ದೇವೀ
ಮಕಮಲ್ಲಿನ ಮೈ ಬಳಸಿ
ಹಾಡಾಕಲ್ಲಪಾ ಮಾಮಾ,

ಎತ್ತೋ ಬದ್ದವ್ರನ್ನ
ಒತ್ತೋ ತುಳದವ್ರನ್ನ
ಗಂಡಸಾಗಿದ್ರೆ !!

ಕಾಗೀ ಕೈಯಾಗ ಕಛೇರಿ
ಕೊಟ್ಟಂಗಾಗೇತಿ ನಿನಗ
ಒಂದೇ ಒಂದಿನಾ ಛಾರ್ಜ
ಕೊಟ್ಟು ನೋಡೋ ನನಗ

ನಲ್ಲಿಯೊಳಗೆಲ್ಲಾ ಹಾಲ ಸುರಿಸಿ
ನೆಲಕ್ಕೆಲ್ಲಾ ಪೀತಾಂಬರಾ ಹಾಸ್ತೀನಿ
ಈ ಚಂಡಾಲರನ್ನೆಲ್ಲಾ ಚಂಡಾಡಿ
ರುಂಡಾ ಮಾಲಿ ಹಾಕ್ಕೊಂಡು
ಕುಣೀತೀನಿ.

ಎಣಿಸೆಣಿಸಿ ಹಲ್ಲು ಮುರದು
ನತ್ತ ಮಾಡಿ ಹಾಕೋತೀನೀ
ಹೊಟ್ಟಿ ಹರದು ಕಳ್ಳ ಹಿರದು
ಬಳೀ ಮಾಡಿ ಇಟಕೋತೀನೀ

ಆ ಮ್ಯಾಲೆ, ಆ ಮ್ಯಾಲೆ, ಆಮ್ಯಾಲೆ
ನಿನ್ನೂ ಒಂದು ಕೈ
ನೋಡೇ ಬಿಡ್ತಿನಿ.
 
                - ಶಶಿಕಲಾ ವೀರಯ್ಯಸ್ವಾಮಿ




Thursday, 8 March 2012

ಅಗ್ನಿ ಮತ್ತು ಮಹಿಳೆ


ಬೆಂಕಿ ಕಾಸುತ್ತ ಕುಳಿತಾಗ
ಒಲೆಮುಂದೆ
ಗೋಡೆ ತುಂಬೆಲ್ಲ ಚೆಲ್ಲಾಡುವ
ನೆರಳು ಬೆಂಕಿಯದು.


ನೋಡನೋಡುತ್ತ 
ತುಟಿ, ಕಟಿ, ಮಲೆ ಮೂಡುತ್ತ
ಹೆಣ್ಣಿನಾಕೃತಿ ಅರಳಿ
ಬೆಂಕಿಯೊಳಗಣ ಹೆಣ್ಣೊ
ಹೆಣ್ಣಿನೊಳಗಣ ಬೆಂಕಿಯೋ
ಬಿಚ್ಚಿ ಕೊಂಡಿತು ಜಿಜ್ಞಾಸೆ ಸುರುಳು.


ಕೈಗೆಟುಕಿದ ಮೊದಲ ಆಟಿಗೆ
ಊದುಗೊಳವೆ
ಮೊದಲ ಪಾಠ
ಒಲೆ ಹಚ್ಚುವುದು ಹೇಗೆ?
ಊದುತ್ತ ಊದುತ್ತ
ಪರಂಪರೆಯ ಪುಂಗಿಗೆ
ತೂಗುತ್ತ ತೂಗುತ್ತ
ತಲೆಯಳಿದು ಬರಿ
ಮೈಯುಳಿಯಿತು
ಬೆಂಬಿಡಲಿಲ್ಲ ಬೆಂಕಿ
ಸಪ್ತಪದಿ ತುಳಿವಾಗ
ಅಗ್ನಿ ಸಾಕ್ಷಿ ಹೇಳದ್ದು
ಭುಗಿಲೆದ್ದ ಸಂಶಯದ 
ಬೆಂಕಿಯಲಿ ಬೆಂದದ್ದು
ಅಗ್ನಿ ಧಿವ್ಯದಿಂದೆದ್ದು ಬಂದದ್ದು
ಅಪ ರೂಪಕ್ಕೊಮ್ಮೆ
ಅಗ್ನಿ ಕನ್ಯೆಯೂ
ಆಗಿ ಕಿಡಿಗಳನುಗುಳಿದ್ದು
ಅಜ್ಜಿ ಹೇಳಿದ ಕಥೆಯಲ್ಲ
ಎಲ್ಲ ಕಾಲಗಳ ವ್ಯಥೆ.


ಪರಮ ಪತಿವ್ರತೆಯಿವಳು
ಪತಿಯ ಚಿತೆಯ ಹಾದಳು
ಚಿಟ್ಟೆಯಂತೆ ಸೀದಳು
ಮಹಾಸತಿಯಾದಳು!


ಆ ಅಮ್ಮ, ಈ ಅಮ್ಮ, ನೆಟ್ಟ ಕಲ್ಲಮ್ಮ
ಕುಂಕುಮಾರ್ಚನೆಗೊಳ್ಳುತ್ತ
ಕರ್ಪೂರದುರಿಯಲ್ಲಿ ಹೊಳೆದಳು
ಜಾತ್ರೆಗೆ ಜನ ನೆರೆದು
ಬಳೆ, ರಿಬ್ಬನು ಸಂರ್ಭಮದಲ್ಲಿ
ಮರತೇ ಹೋದಳು.
                           - ಗೀತಾ ವಸಂತ