ಬೆಂಕಿ ಕಾಸುತ್ತ ಕುಳಿತಾಗ
ಒಲೆಮುಂದೆ
ಗೋಡೆ ತುಂಬೆಲ್ಲ ಚೆಲ್ಲಾಡುವ
ನೆರಳು ಬೆಂಕಿಯದು.
ನೋಡನೋಡುತ್ತ
ತುಟಿ, ಕಟಿ, ಮಲೆ ಮೂಡುತ್ತ
ಹೆಣ್ಣಿನಾಕೃತಿ ಅರಳಿ
ಬೆಂಕಿಯೊಳಗಣ ಹೆಣ್ಣೊ
ಹೆಣ್ಣಿನೊಳಗಣ ಬೆಂಕಿಯೋ
ಬಿಚ್ಚಿ ಕೊಂಡಿತು ಜಿಜ್ಞಾಸೆ ಸುರುಳು.
ಕೈಗೆಟುಕಿದ ಮೊದಲ ಆಟಿಗೆ
ಊದುಗೊಳವೆ
ಮೊದಲ ಪಾಠ
ಒಲೆ ಹಚ್ಚುವುದು ಹೇಗೆ?
ಊದುತ್ತ ಊದುತ್ತ
ಪರಂಪರೆಯ ಪುಂಗಿಗೆ
ತೂಗುತ್ತ ತೂಗುತ್ತ
ತಲೆಯಳಿದು ಬರಿ
ಮೈಯುಳಿಯಿತು
ಬೆಂಬಿಡಲಿಲ್ಲ ಬೆಂಕಿ
ಸಪ್ತಪದಿ ತುಳಿವಾಗ
ಅಗ್ನಿ ಸಾಕ್ಷಿ ಹೇಳದ್ದು
ಭುಗಿಲೆದ್ದ ಸಂಶಯದ
ಬೆಂಕಿಯಲಿ ಬೆಂದದ್ದು
ಅಗ್ನಿ ಧಿವ್ಯದಿಂದೆದ್ದು ಬಂದದ್ದು
ಅಪ ರೂಪಕ್ಕೊಮ್ಮೆ
ಅಗ್ನಿ ಕನ್ಯೆಯೂ
ಆಗಿ ಕಿಡಿಗಳನುಗುಳಿದ್ದು
ಅಜ್ಜಿ ಹೇಳಿದ ಕಥೆಯಲ್ಲ
ಎಲ್ಲ ಕಾಲಗಳ ವ್ಯಥೆ.
ಪರಮ ಪತಿವ್ರತೆಯಿವಳು
ಪತಿಯ ಚಿತೆಯ ಹಾದಳು
ಚಿಟ್ಟೆಯಂತೆ ಸೀದಳು
ಮಹಾಸತಿಯಾದಳು!
ಆ ಅಮ್ಮ, ಈ ಅಮ್ಮ, ನೆಟ್ಟ ಕಲ್ಲಮ್ಮ
ಕುಂಕುಮಾರ್ಚನೆಗೊಳ್ಳುತ್ತ
ಕರ್ಪೂರದುರಿಯಲ್ಲಿ ಹೊಳೆದಳು
ಜಾತ್ರೆಗೆ ಜನ ನೆರೆದು
ಬಳೆ, ರಿಬ್ಬನು ಸಂರ್ಭಮದಲ್ಲಿ
ಮರತೇ ಹೋದಳು.
- ಗೀತಾ ವಸಂತ
No comments:
Post a Comment