ನಿಮಗೆ ಫುಟ್ಬಾಲ್ ಜಗತ್ತಿನ ದಂತಕತೆ ...ಅರ್ಜೆಂಟೈನಾದ ಮರಡೋನಾ ಗೊತ್ತಲ್ವ? ಅಹಾ! ಗೊತ್ತಿದ್ರೆ ಅವರ ಬಲಗೈ ತೋಳನ್ನು ಗಮನಿಸಿದ್ದಿರಾ? ಹೌದು ಜಗತ್ತಿನ ಕ್ರಾಂತಿಕಾರಿಗಳಿಗೆಲ್ಲಾ ಈಗಲೂ ಸ್ಪೂರ್ತಿಯ ಚಿಲುಮೆಯಾದ ಚೇ ನ ಮುಖವನ್ನು ಅಚ್ಚೆ...ಯನ್ನಾಗಿ ಮರಡೊ ನಾ ತನ್ನ ತೋಳಿನ ಮೇಲೆ ಹಾಕಿಸಿಕೊಂಡಿದ್ದಾರೆ.
ಭಾರತೀಯ ಕ್ರಿಕೆಟ್ ತಂಡದ ಕ್ಯಾಪ್ಟನ್ ಮಹೇಂದ್ರಸಿಂಗ್ ದೋನಿ ಕೂಡ ಆಗಾಗ ಚೇ ಮುಖಚಿತ್ರವಿರುವ ಟೀಶರ್ಟ್ ಧರಿಸಿಕೊಂಡು ಓಡಾಡುತ್ತಿರುವುದನ್ನು ನೀವು ಗಮನಿಸಿರಬೇಕು. ಬಹುಶ: ಅದೇ ಕಾರಣಕ್ಕೆ ನೂರಾರು ಕ್ರಿಕೆಟ್ ಅಭಿಮಾನಿಗಳು ಕೂಡ ಎಷ್ಟೋ ಬಾರಿ ಅದನ್ನೇ ಅನುಕರಣೆ ಮಾಡುತ್ತಿರುವುದನ್ನು ನಾವು ಕಾಣುತ್ತೇವೆ.
ಹೌದು ಜಗತ್ತಿನ ಯಾವುದೋ ಒಂದು ಮೂಲೆಯಲ್ಲಿ ಹುಟ್ಟಿ..ಇನ್ನೇಲ್ಲೋ ಬೆಳೆಯುತ್ತಾ..ಸಮಾನತೆ ಬೆಳೆಯನ್ನು ಬೆಳೆದು, ಮತ್ತೆಲ್ಲೋ ಕ್ರಾಂತಿ ಬೀಜ ಬಿತ್ತುವ ಕನಸು ಕಾಣುತ್ತಾ ಸಾಮ್ರಾಜ್ಯಶಾಹಿ ಹೆಣೆದ ಪಿತೂರಿಗೆ ಬಲಿಯಾದ ಚೇ, ಅಂದರೆ ಆರ್ನೆಸ್ಟೊ ಚೆಗುವಾರ ಅಂದು...ಇಂದು..ಮಾತ್ರವಲ್ಲ...ಮುಂದೆಯೂ ಯುವಜನರಿಗೆ ಐಕಾನ್ ಆಗಿ ಯಾಕೆ ಕಾಡುತ್ತಾರೆ.. ?
|
ಫುಟ್ ಬಾಲ್ ದಂತಕಥೆ ಮರಡೊನಾ |
ಇದಕ್ಕೆ ಮೂರು ರೀತಿಯಲ್ಲಿ ಉತ್ತರವಿದೆ. ಒಂದು, ಆಧುನಿಕ ಜಗತ್ತಿನಲ್ಲಿ ಚೆಗುವಾರನನ್ನು ಫ್ಯಾಶನ್ನ್ನಾಗಿ ಬಳಸುವ ಯುವಜನರನ್ನು ನಮ್ಮ ಸಮಾಜದಲ್ಲಿ ಕಾಣಸಿಗುತ್ತಾರೆ. ಇವರಿಗೆ ಚೆ ಎಂದರೆ ಒಂದು ಫ್ಯಾಶನ್ ಆದರೂ ಅರೆ-ಬರೆ ಅಲ್ಲಿ ಇಲ್ಲಿ ಸಿಗುವ ಮಾಹಿತಿಯಿಂದ ಸ್ಪೂರ್ತಿಗೊಂಡು ಚೆ ನ ಆಕರ್ಷಕ ಟೀ ಶರ್ಟ್, ಕೀ ಚೈನ್ ಇತ್ಯಾದಿಗಳ ಮೂಲಕ ಚೆ ಯನ್ನು ಆರಾಧಿಸುವವರು. ಅದರಾಚೆ ಊಹ ಅವರಿಗೆ ಏನೇನೂ ಗೊತ್ತಿಲ್ಲ. ನೀವು ಬೆಂಗಳೂರಿನ ಪ್ರತಿಷ್ಠಿತ ಎಂಜಿ ರಸ್ತೆ, ಬ್ರೀಗೆಡ್ ರಸ್ತೆ, ಮಂಗಳೂರು, ಮಾತ್ರವಲ್ಲ ಗೋವಾ, ಮುಂಬೈ, ದೆಹಲಿ, ಕೋಲ್ಕತ್ತಾ ದಂತಹ ಮಹಾನಗರಗಳಲ್ಲಿ ಇಂತಹ ಯುವಜನರು ಕಾಣುತ್ತಾರೆ. ಇವರು ಬಹತೇಕ ಜಾಹಿರಾತು, ಬ್ಲಾಗು ಮತ್ತು ವೆಬ್ಸೈಟ್ಗಳ ಮೂಲಕ ಚೆ ನತ್ತ ಆಕರ್ಷಕವಾದವರು. ಎರಡನೆಯದು ನಮ್ಮ ದೇಶದ ಹಾಗೂ ಜಗತ್ತಿನ ಹೆಸರಾಂತ ವಿಶ್ವವಿದ್ಯಾನಿಲಯಗಳಲ್ಲಿ ನಡೆಯುತ್ತಿರುವ ನಿರಂತರ ಪ್ರಗತಿಪರ ಹಾಗೂ ಕ್ರಾಂತಿಕಾರಕ ಚರ್ಚೆಗಳಿಗೆಲ್ಲಾ ಚೆ..ನ ಬರಹ..ಭಾಷಣಗಳು ಸಾಕಷ್ಟು ಸ್ಪೂರ್ತಿಯಾಗುತ್ತವೆ. ಹಾಗಾಗಿ ಚೆ ನ ಬರಹ, ಅವನ ಕುರಿತಾದ ಸಿನಿಮಾಗಳನ್ನು ನೋಡುತ್ತಾ ಬದಲಾವಣೆಯತ್ತ ಮುಖಮಾಡುವ ವಿಭಾಗವೊಂದಿದೆ. ಇನ್ನೂ ಮೂರನೆಯದಾಗಿ ಸಮಾಜ ಬದಲಾವಣೆಯ ಕನಸುಗಳನ್ನು ಹರಸುತ್ತಾ ಚಳುವಳಿ ಕಟ್ಟುತ್ತಾ ಅದಕ್ಕೆ ಪೂರಕವಾಗಿ ಶೋಷಿತ ಜನರೆಲ್ಲರನ್ನು ಒಂದಾಗಿಸುವ ಕಾಯಕದಲ್ಲಿ ನಿರತರಾಗಿರುವ ಮತ್ತೊಂದು ವಿಭಾಗ ಹೀಗೆ..ಒಟ್ಟಿನಲ್ಲಿ ಜಗದಗಲ ಹರಡಿಕೊಂಡಿರುವ ಈ ಮೂರು ಜನವಿಭಾಗಗಳಿಗೂ ಯಾವುದೊ ಒಂದು ರೀತಿಯಲ್ಲಿ ಚೆ ಸ್ಪೂರ್ತಿಯೇ!
ಯಾರು ಈ ಚೆಗೆವಾರ ?
ಅರ್ಜೆಂಟೈನಾದಲ್ಲಿ 1928 ರ ಜೂನ್ 14 ರಂದು ಜನಿಸಿದ ಆರ್ನೆಸ್ಟೊ ಚೆಗೆವಾರ ನಿಜ ಹೇಳಬೇಕೆಂದರೆ ಹುಟ್ಟಿನಿಂದಲೇ ಆಸ್ತಮರೋಗಿ! ಹಾಗಿಗ್ಯೂ ಚೆಗೆವಾರನೊಳಗೊಬ್ಬ ಡಾಕ್ಟರ್ ಇದ್ದ, ಬರಹಗಾರನಿದ್ದ, ಬುದ್ದಿಜೀವಿ ಇದ್ದ, ಸಹಾಸಗಾರನಿದ್ದ, ರಾಜತಾಂತ್ರಿಕನಿದ್ದ, ಸಮಾನತೆಗಾಗಿ ಹಾತೊರೆಯುವ ಕ್ರಾಂತಿಕಾರಿ ಯೋಧ, ಗೆರಿಲ್ಲಾ ಕಮಾಂಡರ್..ಹೀಗೆ ಎಲ್ಲವೂ ಅಡಗಿಕುಳಿತ್ತಿದ್ದ.
ಹುಟ್ಟಿದ್ದು ಲ್ಯಾಟೀನ್ ಅಮೇರಿಕಾದ ಅರ್ಜೆಂಟೈನಾವಾದರೂ..ನಂತರ. ಗ್ವಾಟೆಮಾಲದಿಂದ ಆರಂಭಗೊಳ್ಳುವ ಚೆಗೆವಾರನ ಪಯಣ ಬೋರಿಸ್ ಐರಿಸ್, ಮೆಕ್ಸಿಕೊ, ಕ್ಯೂಬಾ ದಾಟಿ ನಂತರ ಕಾಂಗೋ, ಆಫ್ರಿಕಾ ತಲುಪಿ ಅಂತಿಮವಾಗಿ ಬೋಲಿವಿಯಾದಲ್ಲಿ ಕೊನೆಗೊಳ್ಳುವ ತನಕ ನಿರಂತರ ದುಡಿತ. ಓದಿದ್ದು ವೈದ್ಯಕೀಯವಾದರೂ ಚೆಗುವಾರನ ಮನಸು ಸದಾ ಹಾರುವ ಕುದುರೆ. ವೈದ್ಯಕೀಯ ಶಿಕ್ಷಣ ಮುಗಿಯುತ್ತಿದ್ದಂತೆ ಚೆ, ಇಡೀ ಲ್ಯಾಟಿನ್ ಅಮೇರಿಕಾವನ್ನೆ ಸುತ್ತಾಡಲು ತನ್ನ ಮೋಟರ್ ಬೈಕ್ ಏರಿಯೇ ಬಿಟ್ಟ! ಆಗಲೇ ಅಲ್ಲಿನ ಬಡತನದ ಕ್ರೂರ ದರ್ಶನ, ಆರ್ಥಿಕ ಅಸಮಾನತೆ, ವಸಹಾತುಶಾಹಿ ಹಾಗೂ ಸಾಮ್ರಾಜ್ಯಶಾಹಿಗಳು ಮತ್ತವರ ಏಜೆಂಟರು ನಡೆಸುತ್ತಿದ್ದ ಕ್ರೂರ ದಬ್ಬಾಳಕೆಗಳು ಚೆಗೆವಾರನ ಮನಸಿನೊಳಗೆ ಬೆಂಕಿಯ ಜ್ವಾಲೆಯನ್ನೆಬ್ಬಿಸಿದವು. ಹೀಗಾಗಿಯೇ ಲ್ಯಾಟೀನ್ ಅಮೇರಿಕಾದ ತನ್ನ ತಿರುಗಾಟದಿಂದ ವಾಪಸ್ಸಾದ ಚೆ, ಅಲ್ಲಿಂದ ಅಮೇರಿಕಾದ ಕೈಗೊಂಬೆಯಾಗಿ ಜನರ ಶೋಷಣೆ ಯಲ್ಲಿ ನಿರತನಾಗಿದ್ದ ಗ್ವಾಟೆಮಾಲದ ಸರ್ವಾಧಿಕಾರಿ ವಿರುದ್ದ, ನಂತರ ಮೆಕ್ಸಿಕೊಗಳಲ್ಲಿ ಹೋರಾಟಗಳನ್ನು ನಡೆಸುತ್ತಾ ಬಂದರು. ಆಗ ಮೆಕ್ಸಿಕೊದಲ್ಲಿ ಭೂಗತರಾಗಿದ್ದುಕೊಂಡೆ ಅಮೇರಿಕಾದ ಸಿಐಎ ಏಜೆಂಟನಾಗಿ ಅಧಿಕಾರ ನಡೆಸುತ್ತಿದ್ದ ಕ್ಯೂಬಾದ ಬಾಟಿಸ್ಟ್ ಆಡಳಿತ ಕೊನೆಗಾಣಿಸಲು ಹೋರಾಟನಿರತರಾಗಿದ್ದ ಫಿಡೆಲ್ಕ್ಯಾಸ್ಟ್ರೋ ಹಾಗೂ ರಾವುಲ್ ಕ್ಯಾಸ್ಟ್ರೊರನ್ನು ಚೆ ಕೊಡಿಕೊಂಡರು.
ನನಸಾದ ಕ್ರಾಂತಿಯ ಕನಸು.
ಲ್ಯಾಟೀನ್ ಅಮೇರಿಕಾದಲ್ಲಿ ಸಾಮ್ರಾಜ್ಯಶಾಹಿಯ ಕ್ರೂರಮುಖವನ್ನು ತನ್ನ ತಿರುಗಾಟದಲ್ಲಿ ಕಂಡಿದ್ದ ಚೆಗುವಾರನ ಮನಸು ಸದಾ ಕ್ರಾಂತಿಗಾಗಿ ಹಂಬಲಿಸುತ್ತಿತ್ತು. ಹಾಗಾಗಿ ಚೇ ಜಗತ್ತಿನ ಯಾವುದೇ ಮೂಲೆಯಲ್ಲಿ ಅನ್ಯಾಯ ನಡೆಯಲಿ ಅದನ್ನು ನೀನು ಪ್ರತಿಭಟಿಸುವೆಯಾದರೆ ನೀನು ನನ್ನ ಸಂಗಾತಿ' ಎಂದು ಕರೆ ನೀಡಿದ್ದರು. ಇದಕ್ಕೆ ಪೂರಕವೆಂಬಂತೆ ಫಿಡೆಲ್ಕ್ಯಾಸ್ಟ್ರೋ ಹಾಗೂ ರಾವುಲ್ ಕ್ಯಾಸ್ಟ್ರೊ ಮತ್ತಿತರೆ ಸಂಗಾತಿಗಳು ಕ್ಯೂಬಾವನ್ನು ಸರ್ವಾಧಿಕಾರಿ ಬಾಟಿಸ್ಟ್ ನಿಂದ ವಿಮೋಚನೆಗೊಳಿಸಲು ಯುದ್ದವನ್ನೇ ಸಾರಿದ್ದರು. ಅವರೊಂದಿಗೆ ಸಿಯೆರ್ರಾ ಮೆಸ್ತಾ ಅರಣ್ಯ ಸೇರಿದ ಚೆಗೆವಾರ ಕ್ಯೂಬಾ ವಿಮೋಚನಾ ಪಡೆಯ ಕಮಾಂಡರ್ ಆಗಿ ಸತತ ಎರಡು ವರ್ಷಗಳ ಕಾಲ ಬಾಟಿಸ್ಟ್ನ ಸೈನ್ಯವನ್ನು ಎದುರಿಸಿ ಅಪಾರ ಕಷ್ಟಗಳನ್ನು ಅನುಭವಿಸಿದರು. ನಂತರ ಅಂತಿಮವಾಗಿ 'ಗ್ರಾನ್ಮ' ಎನ್ನುವ ನೌಕೆಯೊಂದಿಗೆ ತನ್ನ ಯಾನ ಆರಂಭಿಸಿ ಕ್ಯೂಬಾ ರಾಜಧಾನಿ'ಹವನಾ' ತಲುಪುತ್ತಿದ್ದಂತೆ ಬಾಟಿಸ್ಟ ನ ವಿರುದ್ದ ಹೋರಾಡುತ್ತಿದ್ದ ಜನರಿಂದ ಫಿಡಲ್, ರಾಹುಲ್ ಜೊತೆಗೆ ಚೆ ಗೂ ವಿರೋಚಿತ ಸ್ವಾಗತ ದೊರೆಕಿತು. ಅಂತಿಮವಾಗಿ 1959 ಜನವರಿ 1 ರಂದು ಕ್ಯೂಬಾ ವಿಮೋಚನೆಗೊಂಡು ಸಮಾಜವಾದಕ್ಕೆ ತನನ್ನು ಅಪರ್ಿಸಿಕೊಂಡಿತು. ಬದಲಾವಣೆಗಾಗಿ ಸದಾ ತುಡಿಯುತ್ತದ್ದ ಚೇ ಮುಖದಲ್ಲಿ ಒಂದು ಸುತ್ತಿನ ಗೆಲುವಿನ ನಗು..
ಕ್ಯೂಬಾದ ನಾಗರಿಕತ್ವ...ವಿದೇಶಿ ತಿರುಗಾಟ..
ಅರ್ಜೆಂಟೈನಾದಲ್ಲಿ ಹುಟ್ಟಿ ಬೋರಿಸ್ ಐರಿಸ್ನಲ್ಲಿ ವೈದ್ಯಕೀಯ ಪದವಿ ಪಡೆದು ಇಡೀ ಲ್ಯಾಟೀನ್ ಅಮೇರಿಕಾವನ್ನೇ ಮೋಟರ್ಬೈಕ್ನಲ್ಲಿ ಎರಡು ಸುತ್ತು ಹಾಕಿದ (ಮೊದಲನೆ ಬಾರಿ ಕ್ರಮಿಸಿದ ದಾರಿ 4500 ಕೀ.ಮೀಟರ್, ಎರಡನೆ ಬಾರಿ ಸುತ್ತಾಡಿದ ದಾರಿ 8000 ಕೀ.ಮೀಟರ್) ಹಾಗೂ ಗ್ವಾಟೆಮಾಲ ಹಾಗೂ ಮೆಕ್ಸಿಕೊಗಳಲ್ಲಿ ನಡೆದ ಚಳುವಳಿಗಳಲ್ಲಿ ಪಾಲ್ಗೊಂಡ ಯುವ ಚೆಗುವಾರನಿಗೆ ಅಂತಿಮವಾಗಿ ತಾನು ಕಂಡ ಕ್ರಾಂತಿಯ ಕನಸನ್ನು ಕ್ಯೂಬಾ ಮಣ್ಣಿನಲ್ಲಿ ನನಸಾಗಿಸಲು ಸಾಧ್ಯವಾದದ್ದು ಒಂದು ವಿಚಿತ್ರವೇ. ಆದರೆ ಬಾಫಿಸ್ಟನ ದುರಾಡಳಿತವನ್ನು ಕಿತ್ತೊಗೆಲು ತನ್ನನ್ನೇ ಸಮರ್ಪಿಸಿಕೊಂಡ ಚೆಗೆವಾರನನ್ನು ಕ್ಯೂಬಾ ಮತ್ತು ಆ ದೇಶದ ಜನತೆ ಮಾತ್ರ ಕೈ ಬಿಡಲಿಲ್ಲ. ಕ್ರಾಂತಿಯ ನಂತರದ ಕೆಲವೇ ದಿನಗಳಲ್ಲಿ ಚೆ ಮತ್ತು ಆತನ ಕುಟುಂಬಕ್ಕೆ ತನ್ನ ದೇಶದ ಪೌರತ್ವವನು ನೀಡಿ ಕ್ಯೂಬಾಕ್ಕೆ ಬರಮಾಡಿಕೊಂಡಿತು. ಮಾತ್ರವಲ್ಲ ಅವರ ಕುಟುಂಬವನ್ನು ಸಾಕುವ ಜವಾಬ್ದಾರಿಯನ್ನು ಸ್ವತ: ಕ್ಯೂಬಾದ ಹೂಸಸರ್ಕಾರ ವಹಿಸಿಕೊಂಡಿತು. ನಂತರ ಫಿಡಲ್ ಕ್ಯಾಸ್ಟ್ರೋ ನೇತೃತ್ವದಲ್ಲಿ ರಚನೆಯಾದ ಸರ್ಕಾರದಲ್ಲಿ ಚೆಗೆವಾರ ಆಥರ್ಿಕ ಮತ್ತು ಕೈಗಾರಿಕಾ ಸಚಿವರಾಗಿ ಅಲ್ಲದೆ ಕ್ಯೂಬಾ ರಿಜರ್ವಬ್ಯಾಂಕ್ನ ಗವರ್ನರ್ ಆಗಿ ನೇಮಕವಾದರು. ಬಾಫಿಸ್ಟನ ದುರಾಡಳಿತವು ಕ್ಯೂಬಾದ ಆರ್ಥಿಕತೆಯನ್ನು ನಾಶಮಾಡಿತ್ತು. ಇರುವ ಸಂಪತ್ತೆಲ್ಲವನ್ನೂ ಕೂಗಳತೆ ದೂರದಲ್ಲಿದ್ದ ಅಮೇರಿಕಾದ ಆಳರಸರ ದುರಾಸೆಧಾರೆ ಎರೆಯಲಾಗಿತ್ತು. ಇಂತಹ ಸನ್ನಿವೇಶದಲ್ಲಿ ಸಂಕಷ್ಟದಲ್ಲಿದ್ದ ಕ್ಯೂಬಾ ಜನರಿಗೆ ಶಿಕ್ಷಣ, ಉದ್ಯೋಗ, ಆಹಾರ, ವಸತಿಯಂತಹ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ತುತರ್ು ಕರ್ತವ್ಯಗಳು ಫಿಡೆಲ್ ಸಕರ್ಾರದ ಮುಂದಿದ್ದವು. ಬಹುಶ: ಆ ಸಂಕಷ್ಟದ ದಿನಗಳಲ್ಲಿ ಫಿಡಲ್ಗೆ ಚೆ ನಿಜವಾದ ಸಂಗಾತಿಯಾಗಿ ಕೆಲಸ ಮಾಡಿದರು. ಕ್ಯೂಬಾದ ಕೈಗಾರಿಕಾ ಮತ್ತು ಆರ್ಥಿಕ ಅಭಿವೃದ್ದಿಗಾಗಿ ಅವರು ಅಂದಿನ ಸೋವಿಯತ್ ರಷ್ಯಾಕ್ಕೆ ಹಲವು ಸಲ ಭೇಟಿ ನೀಡಿ ಕ್ಯೂಬಾಕ್ಕೆ ಅಗತ್ಯವಿದ್ದ ವಿಜ್ಞಾನ ಹಾಗೂ ತಂತ್ರಜ್ಞಾನದ ನೆರವನ್ನು ಪಡೆದರು. ಅಲ್ಲದೆ ಕ್ಯೂಬಾದಲ್ಲಿ ವಿಪುಲವಾಗಿ ಬೆಳೆಯುತ್ತಿದ್ದ ಅತ್ಯತ್ತಮ ಸಿಹಿಗುಣ ಹೊಂದಿದ ಕಬ್ಬಿನ ಸಕ್ಕರೆಗೆ ಉತ್ತಮ ಮಾರುಕಟ್ಟೆ ಕಲ್ಪಿಸಲು ಯೋರೋಪ್, ಏಷ್ಯಾ ಹಾಗೂ ಅಫ್ರಿಕಾದ ಹಲವು ದೇಶಗಳಲ್ಲಿ ಸಂಚರಿಸಿದರು. ಆ ಮೂಲಕ ದೇಶದ ವಿದೇಶಿ ವಿನಿಮಯವನ್ನು ಹೆಚ್ಚಿಸಿದರು. ಆದರೆ, ಬಾಫಿಸ್ಟನ ಆಡಳಿದಿಂದ ಕ್ಯೂಬಾವನ್ನು ಲೂಟಿಹೊಡೆದ ಅಮೇರಿಕಾ ಮಾತ್ರ ಕ್ರಾಂತಿಯಾಗಿ ಫಿಡಲ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಕ್ಯೂಬಾದ ಮೇಲೆ ಎಲ್ಲಾ ರೀತಿಯ ನಿರ್ಬಂಧಗಳನ್ನು ವಿಧಿಸಿತು. ವಿಶ್ವಸಂಸ್ಥೆಯಲ್ಲಿ ಸ್ವತ: ಚೆಗೆವಾರ ಕ್ಯೂಬಾ ಸೇರಿದಂತೆ ಲ್ಯಾಟೀನ್ಅಮೆರಿಕಾದ ವಿವಧ ದೇಶಗಳಲ್ಲಿ ಹೇಗೆ ಅಮೇರಿಕನ್ ಸಾಮ್ರಾಜ್ಯಶಾಹಿ ತನ್ನ ಬಹುರಾಷ್ಟ್ರೀಯ ಕಂಪನಿಗಳ ಮೂಲಕ ನಡೆಸುತ್ತಿದ್ದ ಸುಲಿಗೆಕೋರತವನ್ನು ಅಂಕಿ ಸಂಖ್ಯೆಯ ಮೂಲಕ ಬಯಲು ಮಾಡಿ ಜಗತ್ತಿನ ಇತರೆ ದೇಶಗಳ ಬೆಂಬಲವನ್ನು ಕ್ಯೂಬಾದ ಕಡೆ ಸೆಳೆಯುವಲ್ಲಿ ಅವರು ಯಶಸ್ವಿಯಾದರು. ಬಹುಶ: ಕ್ರಾಂತಿಯಾದ ಎರಡೇ ವರ್ಷದಲ್ಲಿ ಕ್ಯೂಬಾದಲ್ಲಿ ಪ್ರತಿಯೊಬ್ಬ ಅನಕ್ಷರಸ್ಥರನ್ನು ಸಂಪೂರ್ಣ ಅಕ್ಷರಸ್ಥರನ್ನಾಗಿ ಮಾಡಿದ್ದು ಹಾಗೂ ಕೇಲವೇ ವರ್ಷಗಳಲ್ಲಿ ಕ್ಯೂಬಾಕ್ಕೆ 'ಜಗತ್ತಿನ ಸಕ್ಕರೆ ಬಟ್ಟಲು' ಎಂಬ ಖ್ಯಾತಿ ಬರುವಂತೆ ಮಾಡುವಲ್ಲಿ `ಚೆ' ನಿರ್ಣಾಯಕ ಪಾತ್ರವಹಿಸಿದರು ಮಾತ್ರವಲ್ಲ ಅದಕ್ಕಾಗಿ ತನ್ನ ದೇಹ-ಮನಸ್ಸನ್ನು ದಂಡಿಸಿದರು.
ತೀರಲಿಲ್ಲ ಕ್ರಾಂತಿಯ ದಾಹ..
ಹೀಗೆ..ಒಂದೆಡೆ ಸನಿಹದಲ್ಲೇ ಅಮೇರಿಕನ್ ಸಾಮ್ರಾಜ್ಯಶಾಹಿ ನೀಡುತ್ತಿದ್ದ ನಿತ್ಯ ಕಿರುಕುಳಗಳ ಮಧ್ಯೆಯೂ ಜಗದಗಲ ತನ್ನ ಪ್ರಭಾವವನ್ನು ಹೆಚ್ಚಿಸಿಕೊಳ್ಳುತ್ತಿರುವಾಗಲೇ ಮತ್ತೊಂದು ಕಡೆ `ಚೆ' ನ ಕ್ರಾಂತಿಕಾರಿ ಮನಸ್ಸು ತೀವ್ರ ಶೋಷಣೆಗೊಳಗಾಗಿದ್ದ ಆಫ್ರಿಕಾದ ಕಾಂಗೋ ಹಾಗೂ ಲ್ಯಾಟೀನ್ ಅಮೇರಿಕಾದ ಬೊಲಿವಿಯಾದ ಜನರತ್ತ ಮುಖಮಾಡಿತ್ತು. 1955 ಸುಮಾರಿನಲ್ಲಿ ಚೆ ಇದ್ದಕ್ಕಿದ್ದಂತೆ ಕ್ಯೂಬಾದಿಂದ ಕೆಲದಿನಗಳ ಕಾಲ ನಾಪತ್ತೆಯಾಗಿದ್ದರು. ಅವರು ಎಲ್ಲಿದ್ದರು ಎಂಬುದೂ ಸ್ವತ: ಫಿಡೆಲ್ ಕ್ಯಾಸ್ಟ್ರೋಗೂ ಗೊತ್ತಿರಲಿಲ್ಲ. ಸಾಮ್ರಾಜ್ಯಶಾಹಿ ಮಾಧ್ಯಮಗಳೆಲ್ಲಾ ಚೆ, ಸತ್ತೆ ಹೋಗಿದ್ದಾರೆಂಬ ಪ್ರಚಾರ ನಡೆಸಿದರು. ಆಗ ಕ್ಯಾಸ್ಟ್ರೋ ನೀಡಿದ ಉತ್ತರ ಹೀಗಿತ್ತು. ಚೆಗೆವಾರ ಎಲ್ಲಿದ್ದಾರೆ ಏನು ಮಾಡುತ್ತಿದ್ದಾರೆ ಎಂಬುದು ನಮಗೆ ಗೊತ್ತಿಲ್ಲ. ಆದರೆ ಒಂದಂತೂ ಸತ್ಯ ಎಲ್ಲಿ ಜನ ಅವರ ಸಹಾಯ ಬಯಸುತ್ತಿದ್ದಾರೋ ಅಲ್ಲಿ ಚೆ ಖಂಡಿತಾ ಇರುತ್ತಾರೆ.! ಇದಾದ ಕೆಲವೆ ದಿನಗಳಲ್ಲಿ ಚೆ ಕ್ಯೂಬಾಕ್ಕೆ ವಾಪಸ್ಸಾದರು. ಒಂದು ಮೂಲದ ಪ್ರಕಾರ ಅವರು ಕಾಂಗೋದಲ್ಲಿದ್ದರು ಎನ್ನಲಾಗಿತ್ತು. ಆದರೆ ಒಂದಂತೂ ಸತ್ಯವಾಗಿತ್ತು. ನನ್ನ ಮುಂದಿನ ಕ್ರಾಂತಿಯ ಹಾದಿ ಯಾವುದು ಎಂಬುದನ್ನು ಚೆ ಆಗಲೆ ನಿರ್ಧರಿಸಿಕೊಂಡಿದ್ದರು..!
ಹೌದು ಚೆ ಕ್ಯೂಬಾಕ್ಕೆ ವಾಪಸ್ಸಾದ ಮೇಲೂ ಒಂದು ರೀತಿಯಲ್ಲಿ ದೈಹಿಕವಾಗಿ ಮಾತ್ರವೇ ಅಲ್ಲಿದ್ದರು. ಕ್ಯೂಬಾದಲ್ಲಿದ್ದರೂ ಅವರು ಯಾರೊಂದಿಗೂ ಕಾಣಿಸಿಕೊಳ್ಳದೆ ಒಂದು ರೀತಿಯಲ್ಲಿ ಭೂಗತರಾಗೇ ಇದ್ದರು. ಅವರ ಇಡೀ ಮನಸ್ಸೆಲ್ಲಾ ಬೋಲಿವಿಯಾದ ಕಡೆ ಅಲ್ಲಿ ಮುಂಬರುವ ದಿನಗಳಲ್ಲಿ ನಡೆಸಬೇಕಿದ್ದ ಗೆರಿಲ್ಲಾಯುದ್ದದ ಸುತ್ತನೇ ತಿರುಗುತ್ತಿತ್ತು. ಅಂತಿಮವಾಗಿ ಶೋಷಣೆಯಿಂದ ಮುಕ್ತವಾದ ಸುಂದರ ಸಮಾಜ ಈ ಜಗದಗಲ ಸೃಷ್ಠಿಯಾಗಬೇಕೆಂಬ ಹಂಬಲ ಮತ್ತು ದೃಢ ವಿಶ್ವಾಸದೊಂದಿಗೆ 1965 ಏಪ್ರಿಲ್ ನಲ್ಲಿ ಕ್ಯೂಬಾವನ್ನು ತೊರೆದರು. ಮತ್ತು, ಮತ್ತೊಂದು ಕ್ರಾಂತಿಕಾರಿ ಕರ್ತವ್ಯದ ಕನಸಿನೊಂದಿಗೆ ಬೊಲಿವಿಯದತ್ತ ಹೆಜ್ಜೆ ಹಾಕಿದರು.
ವಿದಾಯದ ಪತ್ರಗಳು
ಚೆ ಕ್ಯೂಬಾದಿಂದ ಹೊರಡುವಾಗ ಅವರು ತನ್ನ ಕ್ರಾಂತಿಕಾರಿ ಹೋರಾಟದ ಹಾಗೂ ಜೀವದ ಗೆಳೆಯ ಫಿಡಲ್ ಕ್ಯಾಸ್ಟ್ರೋಗೆ ಹಾಗೂ ತನ್ನ ಪ್ರೀತಿಯ ಮಕ್ಕಳಿಗೆ ಎರಡು ವಿದಾಯದ ಪತ್ರಗಳನ್ನು ಬರೆದರು. ಫಿಡಲ್ಗೆ ಬರೆದ ಪತ್ರದಲ್ಲಿ ಅವರ ಜೊತೆಗಿನ ಒಡನಾಟದ ದಿನಗಳು ಸಿಯೆರ್ರಾ ಮೇಸ್ತಾ ಕಾಡಿನಲ್ಲಿ ಕ್ರಾಂತಿಗೆ ಮುನ್ನ ಜೊತೆಯಾಗಿ ಕಳೆದ, ಹತ್ತಾರು ವಿಷಯವಾಗಿ ಚರ್ಚಿಸಿದ ನಿದ್ರೆಯಿಲ್ಲದೆ ಕಳೆದ ಆ ದಿನಗಳ ಬಗ್ಗೆ, ಬಡದೇಶಗಳ ಮೇಲೆ ಸಾಮ್ರಾಜ್ಯಶಾಹಿ ನಡೆಸುತ್ತಿರುವ ಶೋಷಣೆಯನ್ನು ಕೊನೆಗಾಣಿಸಲು ನಡೆಸಬೇಕಾದ ಹೋರಾಟಗಳ ಬಗ್ಗೆ ಹಾಗೂ ಕ್ಯೂಬಾದಲ್ಲಿನ ಸಕರ್ಾರವನ್ನು ಮುನ್ನಡೆಸುವ ಕುರಿತು ಹಲವು ವಿಚಾರಗಳನ್ನು ಚೆ ಚರ್ಚಿಸುತ್ತಾರೆ. ಇನ್ನೂ ಮಕ್ಕಳಿಗೆ ಅದರಲ್ಲೂ ಹಿರಿಯ ಮಗಳಾದ ಹಿಲ್ಡಾನಾಗೆ ಸುಮಾರು ಮೂರು ಪತ್ರಗಳನ್ನು ಚೆ ಬರೆಯುತ್ತಾರೆ. ಅದರಲ್ಲಿ ಪತ್ರದಲ್ಲಿ ಯಾವ್ಯವ ಮಕ್ಕಳದ್ದು ಯಾವ ಸ್ವಾಭಾವವೆಂದು ತಿಳಿದಿದ್ದ ಚೆ ಅದಕ್ಕೆ ಪೂರಕವಾದ ಸಲಹೆಗಳನ್ನು ನೀಡುತ್ತಾರೆ ಅಲ್ಲದೆ ದೊಡ್ಡ ಮಗಳಾಗಿ ಹಿಲ್ಡಾನಾ ಮಾಡಬೇಕಾದ ಜವಾಬ್ದಾರಿಗಳ ಬಗ್ಗೆ ಅವರು ಹೇಗೆ ಬದುಕಬೇಕು ಪರಸ್ಪರ ಬೆಳೆದು ದೊಡ್ಡ ಕ್ರಾಂತಿಕಾರಿಗಳಾಬೇಕು ಅದಕ್ಕಾಗಿ ಉತ್ತಮವಾದ ಹಾಗೂ ಸಮಾಜ ಬದಲಾವಣೆಗೆ ಪೂರಕವಾದ ತಾಂತ್ರಿಕ ಕೌಶಲ್ಯ ಇರುವ ಶಿಕ್ಷಣ ಪಡೆಯಬೇಕು ಎಂಬ ಆಶಯವನ್ನು ವ್ಯಕ್ತಪಡಿಸಿದ್ದರು. ಅಲ್ಲದೆ ಬೊಲಿವಿಯಾದಲ್ಲಿ ಅವರು ಶತ್ರುಗಳ ವಿರುದ್ದ ನಡೆಸುತ್ತಿರುವ ಹೋರಾಟ; ಅದು ಕ್ರಮಿಸಬೇಕಾದ ದಾರಿ ಹಾಗೂ ತಂದೆಯ ಕ್ರಾಂತಿಕಾರಿ ಆದರ್ಶಗಳನ್ನು ಗೌರವಿಸುವ ಮತ್ತು ಅದನ್ನು ತಮ್ಮ ಬದುಕಿನಲ್ಲಿ ಅಳವಡಿಸುವ ಕುರಿತು; ಮನೆಯಲ್ಲಿ ತಾಯಿಗೆ; ಶಾಲೆಯಲ್ಲಿ ಶಿಕ್ಷಕರಿಗೆ ಹಾಗೂ ಗೌರವ ನೀಡುವುದು ಹಾಗೂ ಸಂಗಾತಿ ಭಾವ ಬೆಳೆಸಿಕೊಳ್ಳುವುದು; ಮಾತ್ರವಲ್ಲ ಮಗಳು ಬೆಳೆದು ದೊಡ್ಡವಳಾಗುತ್ತಿರುವುದು ಹೀಗೆ ಹಲವು ವಿಷಯಗಳ ಬಗ್ಗೆ ಬರೆಯುತ್ತಾರೆ.
ಬೋಲಿವಿಯಾದಲ್ಲಿ ವಿಮೋಚನಾ ಹೋರಾಟ
ನಂತರ ಬೋಲಿವಿಯಾದ ಸರ್ವಾಧಿಕಾರಿ ಸಿಐಎ ಕೈಗೊಂಬೆ ಸಕರ್ಾರದ ವಿರುದ್ದದ ಹೋರಾಟವನ್ನು ಬೆಳೆಸುವಲ್ಲಿ ಚೆ ಇಡೀ ತನ್ನ ಸಮಯವನ್ನೆಲ್ಲಾ ಮಿಸಲಿಟ್ಟು ಅಪಾರವಾದ ಕಷ್ಟಗಳನ್ನು ಎದುರಿಸಿದರು. ಎಷ್ಟೋ ಸಂದರ್ಭದಲ್ಲಿ ಅಹಾರ, ನೀರಿಗಾಗಿ ಆ ಕಾಡಿನ ನಡುವೆ ಪರಿತಪಿಸಿ ಕೊನೆಗೆ ಸವಾರಿಗಾಗಿ ಜೊತೆಗಿದ್ದ ಕುದುರೆಯನ್ನೇ ಆಹಾರವಾಗಿ ತಿನ್ನಬೇಕಾದ ಪರಿಸ್ಥಿತಿಗಳನ್ನು ಚೆ ಎದುರಿಸಿದರು. ಆದಾಗ್ಯೂ ಬೊಲಿವಿಯಾ ಸರ್ಕಾರದ ಸೇನೆ ಹಾಗೂ ಆಡಳಿತದ ವಿರುದ್ದ ಎಡಬಿಡದೆ ಹೋರಾಟಗಳನ್ನು ನಡೆಸುತ್ತಲೇ ಮುನ್ನೆಡೆದರು. ಕಾಡು ಮೇಡುಗಳನ್ನು ದಾಟುತ್ತಾ ಜನರನ್ನು ಸಂಘಟಿಸಿತ್ತಾ ಅವರಿಗೆ ಸಮಯಸಿಕ್ಕಾಗಲೆಲ್ಲಾ ಅಕ್ಷರಭ್ಯಾಸ ಮಾಡಿಸುತ್ತಾ, ಅವರ ತಿಳುವಳಿಕೆ ಹೆಚ್ಚೆಸುತ್ತಾ, ಅವರ ಜೊತೆ ಸಂವಾದಿಸುತ್ತಾ ಆ ಬಡವರ ಮನೆಗಳಲ್ಲೇ ಸಿಕ್ಕಿದ್ದನ್ನು ತಿನ್ನುತ್ತಾ ಕೆಲವೂಮ್ಮೆ ಖಾಲಿ ಹೊಟ್ಟೆಯಲ್ಲೇ ಮಲಗುತ್ತಾ ತನ್ನ ಚಳುವಳಿಯನ್ನು `ಚೆ' ಮತ್ತು ಆತನ ಹಲವು ಸಂಗಾತಿಗಳು ನಡೆಸುತ್ತಾರೆ.
ಆದರೆ..ಇಡೀ ಲ್ಯಾಟೀನ್ ಅಮೇರಿಕಾದಲ್ಲೆ ಸಾಮ್ರಾಜ್ಯಶಾಹಿಗಳಿಗೆ ಸಿಂಹ ಸ್ವಪ್ನವಾಗಿದ್ದ `ಚೆ' ಯನ್ನು ಸಾಯಿಸಿಯಾದರೂ ಸರಿಯೆ ಅಥವಾ ಜೀವಂತವಾದರೂ ಸರಿಯೇ ಸೆರೆಹಿಡಿಯಲೇಬೇಕೆಂದು ಹಟ ತೊಟ್ಟದ್ದ ಸಿಐಎ (ಅಮೇರಿಕಾದ ಗೂಡಾಚಾರಿ ಸಂಸ್ಥೆ)ಗೆ ಅಂತಿಮ ಜಯ ಸಿಕ್ಕಿತ್ತು.! 1967 ರ ಅಕ್ಟೋಬರ್ 8 ರಂದು `ಚೆ' ಯನ್ನು ಸುತ್ತುವರೆದ ಅಮೆರಿಕಾದ ಸಿಐಎ ಬೆಂಬಲಿತ ಬೊಲಿವಿಯಾ ಸಕರ್ಾರದ ಪಡೆ ಅದೇ ದಿನವೇ ಅವರನ್ನು ಗುಂಡಿಕ್ಕಿ ಕೊಂದಿತು. ಆದರೆ ಅಷ್ಟೋತ್ತಿಗಾಗಲೆ ಚೆಗುವಾರನ ಹೆಸರು ಜಗದಗಲ ಹರಡಿತ್ತು. ಅದರಲ್ಲೂ ಲ್ಯಾಟೀನ್ ಅಮೆರಿಕಾದ ಜನರ ಮನೆ-ಮನಗಳನ್ನು ಹೊಕ್ಕಿತ್ತು. ಹಾಗಾಗಿ `ಚೆ' ಸತ್ತಿದ್ದಾನೆ ಎಂಬ ಸಂಗತಿಯನ್ನು ಅವರು ಹೇಳಿದರೆ ಜನರು ನಂಬುವುದಿಲ್ಲ ಎಂಬ ಕಟು ಸತ್ಯ ಅವರನ್ನು ಕಾಡಿತು. ಹಾಗಾಗಿಯೆ `ಚೆ' ನ ಕಳೆಬರವನ್ನು ಕ್ಯೂಬಾಕ್ಕೆ ಅಥವಾ ಅವರ ಕುಟುಂಬಕ್ಕೂ ನೀಡದೆ ಕೇವಲ ಅವರ ಮುಂಗೈಯನ್ನು ಕತ್ತರಿಸಿ ಜಗತ್ತಿಗೆ `ಚೆ' ಸಾವಿನ ಸುದ್ದಿಯನ್ನು ಖಾತ್ರಿಪಡಿಸಿದರು. ಸಾಮ್ರಾಜ್ಯಶಾಹಿಗಳಿಗೆ ಹಾಗೂ ಅವರ ಹಿಂಬಾಲಿಕರಿಗೆ ಒಟ್ಟಿನಲ್ಲಿ `ಚೆ' ನ ಕ್ರಾಂತಿಕಾರಿ ಸಿದ್ದಾಂತವನ್ನು ಸಾಯಿಸಲು ಸಾಧ್ಯವಿರಲಿಲ್ಲ ಹಾಗಾಗಿ ಅವರು ಚೆ ಯನ್ನೆ ದೈಹಿಕವಾಗಿ ಇಲ್ಲವಾಗಿಸಿದರು!
ಚೆಗೆವಾರ ಇಲ್ಲ.. ಆದರೆ ಸ್ಪೂರ್ತಿಗೆ ಕೊರತೆಯಿಲ್ಲ..
ಆರ್ನೆಸ್ಟೋ ಚೆಗೆವಾರ ಜಗತ್ತಿನಿಂದ ದೂರವಾಗಿ ಸುಮಾರು ನಾಲ್ಕು ದಶಕಗಳು ಕಳೆದಿವೆ. ಆದರೆ ಯಾವ ಸಾಮ್ರಾಜ್ಯಶಾಹಿ ದೇಶಗಳಿಗೂ `ಚೆ' ನ ಪ್ರಭಾವದಿಂದ ಅಲ್ಲಿನ ಯುವಜನರನ್ನು ದೂರ ಮಾಡಲು ಸಾಧ್ಯವಾಗಿಲ್ಲ. ಚೆಯನ್ನು ಕೊಂದ ಅಮೇರಿಕದ ವಾಷಿಂಗ್ಟನ್ ಡಿಸಿಯ ರಸ್ತೆಗಳಿಂದ ಹಿಡಿದು ಯೂರೋಪ್-ಇಂಡಿಯಾದ ಬೀದಿ ಬೀದಿಗಳಲ್ಲಿ `ಚೆ' ನ ಆಕರ್ಷಕ ಮುಖಚಿತ್ರ ಹೊಂದಿದ ಅಚ್ಚೆಗಳನ್ನು, ಟೀ ಶರ್ಟಗಳನ್ನು, ಕೀ ಚೈನ್ಗಳನ್ನು ತಮ್ಮದಾಗಿಸಲು ಈಗಲೂ ಯುವ ಜನರು ಮುಗಿಬೀಳುತ್ತಾರೆ. ಬ್ರಿಟಿಷ್ ಜೈಲಿನಲ್ಲಿ ರಾಜಕೀಯ ಖೈದಿಯಾಗಿ ಬಂಧಿಸಲ್ಪಟ್ಟಿದ್ದ ರಾಜಕೀಯ ಯುವಕನೊರ್ವ ನನಗೆ `ಚೆ' ಭಾವಚಿತ್ರವಿರುವ ಟೀ ಶರ್ಟ್ ಬೇಕೆಂದು ಅಧಿಕಾರಿಗಳ ಮುಂದೆ ಬೇಡಿಕೆಯನ್ನಿಟ್ಟಿದ್ದ. ಚೆಗೆವಾರನ ಅಭಿಮಾನಿಗಳ ಯುವಕರ ದಂಡೊಂದು ಪ್ರೀತಿಯಿಂದ `ಚೆ' ನ ಟೀಶರ್ಟ್ವೂಂದನ್ನು ಮೆರವಣಿಗೆ ಮಾಡಿಕೊಂಡು ಆ ಯುವಕನಿಗೆ ನೀಡಲು ಜೈಲಿನ ಬಾಗಿಲಿಗೆ ಬಂತು. ಆದರೆ.. ಅದನ್ನು ಆ ಖೈದಿಗೆ ನೀಡಲು ಜೈಲಾಧಿಕಾರಿಗಳು ನಿರಾಕರಿಸಿದರು. ಕಾರಣವೇನು ಗೊತ್ತೇ? ಅದರಲ್ಲಿ ರಾಜಕೀಯ ಸಂದೇಶವಿದೆ ಎಂಬುದು ಅವರ ಆರೋಪ. ಅಂದರೆ ಚೆಗೆವಾರ ಈ ಜಗತ್ತಿನಿಂದ ದೂರವಾಗಿ 44 ವರ್ಷಗಳೇ ಕಳೆದರೂ ಸಾಮ್ರಾಜ್ಯಶಾಹಿಗಳಿಗೆ ಅವನ ಬಗ್ಗೆ ಇದ್ದ ನಡುಕ ಇನ್ನೂ ದೂರವಾಗಿಲ್ಲ. ಈಗ ಹೇಳಿ ಚೆಗುವಾರ ಸತ್ತಿದ್ದಾರಾ? ತನ್ನ ಅಸಂಖ್ಯಾತ ಬರಹಗಳು ಹಾಗೂ ತಾನೂ ಮಾಡಿದ ಭಾಷಣಗಳ ಮೂಲಕ ಜಗದಗಲ ಸ್ಪೂರ್ತಿ ನೀಡುತ್ತಾ ಸರ್ವಾಂತರಗಾಮಿಯಾಗಿದ್ದಾರೆ. ಫಿಡಲ್ಗೆ `ಚೆ' ಸಾವಿನ ಸುದ್ದಿ ಗೊತ್ತಾದಾಗ ಅವರು ನೀಡಿದ ಹೇಳಿಕೆ ಎಂದರೆ...ಚೆ ನಮ್ಮಿಂದ ದೈಹಿಕವಾಗಿ ಮಾತ್ರವೇ ದೂರವಾಗಿದ್ದಾರೆ ಆದರೆ, ಜಗತ್ತಿನ ಯಾವುದೇ ಮೂಲೆಯಲ್ಲಿ ಅನ್ಯಾಯ ನಡೆದರೆ ಅಲ್ಲಿ ಚೆ. ಇದ್ದೆ ಇರುತ್ತಾರೆ.
ಹೌದು! ಜಗತ್ತಿನ ಮೂಲೆ ಮೂಲೆಗಳಲ್ಲಿ ನಡೆಯುವ ಹೋರಾಟಗಳಿಗೆಲ್ಲಾ `ಚೆ', ಈಗಲೂ ಸ್ಪೂರ್ತಿಯೇ .ಬಹುಶಃ ಜಗತ್ತಿನಲ್ಲಿ `ಚೆ' ಗಿರುವಷ್ಟು ಅಭಿಮಾನಿಗಳು, ಅವರ ಹೆಸರಿನಲ್ಲಿರುವಷ್ಟು ವೆಬ್ಸೈಟ್ ಹಾಗೂ ಬ್ಲಾಗ್ಗಳಿಗೆ ಲೆಕ್ಕವೇ ಇಲ್ಲ. ಅದು ಉತ್ತರ-ದಕ್ಷಿಣ ಅಮೆರಿಕಾವೇ ಇರಲಿ, ಆಫ್ರಿಕಾ-ಯುರೋಪ್ಗಳಾಗಲಿ ಅಥವಾ ಏಷ್ಯಾ- ಆಸ್ಟ್ರೇಲಿಯಾ ಖಂಡಗಳೇ ಆಗಲಿ ಯಾವುದೇ ಸಾಮ್ರಾಜ್ಯಶಾಹಿ ವಿರುದ್ದದ ಅಂತರಾಷ್ಟ್ರೀಯ ಸೆಮಿನಾರುಗಳು, ಉತ್ಸವಗಳು ಹಾಗೂ ಕಾರ್ಯ ಕ್ರಮಗಳು ಚೆ ಗೈರುಹಾಜರಿಯಲ್ಲಿ ನಡೆಯುವುದೆ ಇಲ್ಲ.! ಯಾಕ್ಕೆಂದರೆ ಸಮಾನತೆಯ ಸಮಾಜವನ್ನು ಕಟ್ಟುವ ಕನಸು ಕಾಣುತ್ತಿರುವವರಿಗೆ, ಅನ್ಯಾಯವನ್ನು ಪ್ರತಿಭಟಿಸುತ್ತಿರುವವರಿಗೆ ಹಾಗೂ ಜಗದಗಲ ನಡೆಯುವ ಶೋಷಣೆಯನ್ನು ಕೊನೆಗಾಣಿಸಬೇಕೆಂದು ಹಂಬಲಸುತ್ತಿರುವ ಎಲ್ಲರಿಗೂ...ಇಂದಿಗೂ..ಎಂದೆಂದಿಗೂ ಚೇ ಸ್ಪೂರ್ತಿ.
27 ವರ್ಷಗಳ ಸುದೀರ್ಘ ಜೈಲುವಾಸದಿಂದ ಬಿಡುಗಡೆ ಹೊಂದಿದ ನೆಲ್ಸನ್ ಮಂಡೆಲಾ ಗೆಳೆತನದ ಪದಕ ಪಡೆಯಲು ಕ್ಯೂಬಾಕ್ಕೆ ಬಂದಾಗ ಹೇಳಿದ ಮಾತಿದು.. 'ಈ ಜಗತ್ತಿನ ಯಾವ ಬಂಧಿಖಾನೆಗಳಿಗೂ, ಸೆನ್ಸಾರ್ಶಿಪ್ ಗಳಿಗೂ ಚೆಗುವಾರನನ್ನು ನಮ್ಮಿಂದ ಅಡಗಿಸಿಡಲು ಸಾಧ್ಯವಿಲ್ಲ.!
- ಕೆ.ಮಹಾಂತೇಶ
(ಕೃಪೆ, ವಿದ್ಯಾರ್ಥಿ ಧ್ವನಿ)
( ಚೆಗೆವಾರ ರನ್ನು ಕುರಿತು ಆಸಕ್ತಿ ಹಾಗೂ ಓದಬೇಕೆನ್ನುವವರಿಗೆ ಕನ್ನಡದಲ್ಲಿ ನವಕರ್ನಾಟಕ ಪ್ರಕಾಶನ ಪ್ರಕಟಿಸಿರುವ 'ಆರ್ನೆಸ್ಟೋ ಚೆಗೆವಾರ' ಹಾಗೂ ಬಳ್ಳಾರಿಯ ಲೋಹಿಯಾ ಪ್ರಕಾಶನದ ಜಿ.ಎನ್ ಮೋಹನ್ ಬರೆದಿರುವ ನನ್ನೊಳಗಿನ ಹಾಡು ಕ್ಯೂಬಾ' ಕೃತಿಗಳು ಲಭ್ಯ ಇವೆ. ಇಂಗ್ಲೀಷ್ ನಲ್ಲಂತೂ ಚೆ ಕುರಿತ ಸಾಹಿತ್ಯ ಅವರ ಭಾಷಣ, ಬರಹಗಳು, ಪುಸ್ತಕಗಳು ಸಾಕಷ್ಟಿವೆ. ಇನ್ನೂ ಇಂಟರ್ನೆಟ್ನಲ್ಲಿ ಗೂಗಲ್ ಡಾಟ್ ಕಾಂ ಗೆ ಹೋದರಂತೂ ಚೆ ಕುರಿತಂತೆ ರಾಶಿ ರಾಶಿ ಮಾಹಿತಿಗಳು ಫೋಟೋಗಳು ಸಿಗುತ್ತವೆ.)