Saturday 23 June 2012

ಲೋಕ ತಿಳುವಳಿಕೆಯ ವಿಸ್ಮೃತಿಯಲ್ಲಿ ಕಮ್ಯುನಿಸ್ಟರು


`ಸರ್ಫರೋಶಿ ಕೀ ತಮ್ಹನ ಅಬ್ ಹಮಾರೆ ದಿಲ್ ಮೇಂ ಹೈ / ದೇಖನ ಹೈ ಜೋರ್ ಕಿತ್ನ ಬಾಜು-ಎ-ಖಾತಿಲ್ ಮೇಂ ಹೈ`
(ಪ್ರತಿರೋಧದ ರೊಚ್ಚು ಎದೆಯಲ್ಲಿ ಹುರಿಗಟ್ಟಿದೆ / ನೋಡೇ ಬಿಡುವ ಕೊಲೆಗಡುಕರ ಬಾಹುಬಲವೆಷ್ಟಿದೆ)
 ರಾಮ್‌ಪ್ರಸಾದ್ ಬಿಸ್ಮಿಲ್ಲ
 
ಸೋವಿಯತ್ ಯೂನಿಯನ್ ಅಸ್ತಿತ್ವದಲ್ಲಿದ್ದಾಗ, `ಮಾಸ್ಕೊದಲ್ಲಿ ಮಳೆ ಬಂದರೆ ಕಮ್ಯುನಿಸ್ಟರು ಇಲ್ಲಿ ಕೊಡೆ ಹಿಡಿಯುತ್ತಾರೆ` ಎನ್ನುವುದು ಭಾರತದ ಕಮ್ಯುನಿಸ್ಟರ ಕುರಿತಾಗಿ ಜನಜನಿತಗೊಳಿಸಲಾಗಿದ್ದ ವಿಡಂಬನೆಯಾಗಿತ್ತು. ಕಮ್ಯುನಿಸ್ಟ್ ಸಿದ್ಧಾಂತ ನಮ್ಮ ದೇಶಕ್ಕೆ `ಅನ್ಯ`ವಾದದ್ದು, ಕಮ್ಯುನಿಸ್ಟರು ದೇಶದ ರಾಜಕೀಯಕ್ಕೆ ಅಪ್ರಸ್ತುತರು ಎಂದು ಜನಮಾನಸದಲ್ಲಿ ಅಚ್ಚೊತ್ತುವುದು ಉಳ್ಳವರ ರಾಜಕೀಯದ ವರಸೆ ಎಂಬುದೇನೋ ಸರಿ. 

ಆದರೆ, ಈ ಬಗೆಯ ಸಹಮತದ ಉತ್ಪಾದನೆಯಲ್ಲಿ ಲಿಬರಲ್‌ಗಳು ಮತ್ತು ಕಮ್ಯುನಿಸ್ಟೇತರ ಸಮಾಜವಾದಿಗಳೂ ಪರೋಕ್ಷವಾಗಿ ತಮ್ಮ ಶಕ್ತ್ಯಾನುಸಾರ ಕೈಜೋಡಿಸಿರುವುದು ಕುತೂಹಲದ ಸಂಗತಿ. 

ನಮ್ಮ ದೇಶದಲ್ಲಿ, ಹಲವು ಬಗೆಯ ಸಿದ್ಧಾಂತಗಳನ್ನು ಆಧಾರವಾಗಿಟ್ಟುಕೊಂಡು ಕಾರ್ಯಾಚರಿಸುವ ರಾಜಕೀಯ ಬಣಗಳಿವೆ; ಇವುಗಳಲ್ಲಿ ಕಮ್ಯುನಿಸ್ಟರಷ್ಟು ಪ್ರಭುತ್ವದ ದಮನಕ್ಕೊಳಗಾದ ರಾಜಕೀಯ ಬಣ ಯಾವುದೂ ಇಲ್ಲ. ದೇಶಕ್ಕೆ ಸ್ವಾತಂತ್ರ್ಯ ಬಂದದ್ದೇ, ನಿಜಾಮನ ಆಳ್ವಿಕೆಯಿಂದ ಹೈದರಾಬಾದ್ ಪ್ರಾಂತ್ಯವನ್ನು ವಿಮೋಚನೆಗೊಳಿಸಲು ಕಳುಹಿಸಲಾದ ಭಾರತದ ಸೇನಾಪಡೆಯನ್ನು ಕಮ್ಯುನಿಸ್ಟರ ನಾಯಕತ್ವದ ತೆಲಂಗಾಣ ರೈತ ಹೋರಾಟವನ್ನು ದಮನ ಮಾಡಲು ಕೂಡ ಹರಿಬಿಡಲಾಯಿತು. 

ಅಲ್ಲಿ, ದೇಶದ ಮೊತ್ತಮೊದಲ ಕೂಡುದೊಡ್ಡಿಯಲ್ಲಿ ಭೂಹೀನರ ಭೂಮಿ ಹಕ್ಕಿಗೆ ಹೋರಾಡಿದ ಕಮ್ಯುನಿಸ್ಟರನ್ನು ಕೂಡಿ ಹಾಕಿ, ಚಿತ್ರಹಿಂಸೆ ನೀಡಿ ಕೊಲ್ಲಲಾಯಿತು; ಭೂಮಾಲೀಕರನ್ನು ಅಧಿಕಾರದ ಗದ್ದುಗೆಯಲ್ಲಿ ಕೂರಿಸಲಾಯಿತು (ಅಂಥ ಭೂಮಾಲೀಕರಲ್ಲಿ ಒಬ್ಬರಾದ ಪಿ.ವಿ. ನರಸಿಂಹರಾವ್ ದೇಶದ ಪ್ರಧಾನಿ ಕೂಡ ಆದರು). 

1962ರಲ್ಲಿ, ಚೀನಾದ ಜೊತೆ ಯುದ್ಧ ಶುರುವಾದಾಗ, ನಮ್ಮ ಪ್ರಭುತ್ವ ಊರೂರುಗಳಲ್ಲಿ ಕಮ್ಯುನಿಸ್ಟರನ್ನು `ಚೀನಾದ ಏಜೆಂಟರು` ಎಂಬ ಆರೋಪ ಹೋರಿಸಿ ಸೆರೆಗೆ ತಳ್ಳಿತು; ಯುದ್ಧಕಾಲದ ಅನಾವೃಷ್ಟಿಯನ್ನು ಬಳಸಿಕೊಂಡು ಕಾಳಸಂತೆಯಲ್ಲಿ ದವಸ ಧಾನ್ಯ ದಾಸ್ತಾನು ಮಾಡಿ ಮಾರಿದ ಖದೀಮರು `ದೇಶಪ್ರೇಮಿ`ಗಳಾಗಿ ಮೆರೆದರು! 

ಬಿ.ವಿ.ಕಕ್ಕಿಲಾಯ
ವಸಾಹತುಶಾಹಿ ಕಾಲದಲ್ಲಿ ದೊರೆಗಳಿಗೆ ಡೊಗ್ಗಿ ಬಡವರನ್ನು ಬಳಲಿಸುವ ವ್ಯವಸ್ಥೆಯನ್ನು ಕಾಪಾಡಿಕೊಂಡವರಿದ್ದರು; ಇಂದು, ದೇವರು- ಧರ್ಮದ ನೆಪದಲ್ಲಿ ಜಾತಿ-ಮತ-ಆಸ್ತಿ ತಾರತಮ್ಯಗಳನ್ನು ಭದ್ರಗೊಳಿಸುವ ಬಾಬ-ಮಠಾಧೀಶ-ಧರ್ಮದರ್ಶಿಗಳೂ ಇದ್ದಾರೆ; ಹಸಿದವರ ತಟ್ಟೆಯ ತುಂಡು ರೊಟ್ಟಿಗೂ ತತ್ವಾರವಾಗುವಂಥ ಮಿಣ್ಣನೆಯ ಕಲೆಯನ್ನು ಅಮೇರಿಕೆಯಿಂದ ಶಾಸ್ತ್ರಬದ್ಧವಾಗಿ ಕಲಿತು ತಮ್ಮ ಬಂಡವಾಳವನ್ನು ಕೊಬ್ಬಿಸುವ ಕಾರ್ಯದಲ್ಲಿ ತೊಡಗಿರುವ ಉದ್ಯಮ ವಿಭೂಷಣರೂ ಇದ್ದಾರೆ; ಈ ಮಂದಿ ಊರಿಗೆ ದೊಡ್ಡವರು! ಆದರೆ, ನಾವು ನಿತ್ಯ ಬದುಕುವ ಊರುಕೇರಿಗಳಲ್ಲಿ, ತಮ್ಮ ಜೀವಮಾನ ಪೂರ್ತಿ, ಕೆಳಸ್ತರದ ಜನರ ಬದುಕಿನ ನ್ಯಾಯಯುತ ಹಕ್ಕುಗಳನ್ನು ನಿರೂಪಿಸಿ, ಅವುಗಳನ್ನು ಸಾಕಾರಗೊಳಿಸಲು ಹೋರಾಡಿದ ಕಮ್ಯುನಿಸ್ಟರ ಬದುಕು, ನಮ್ಮ ಕಣ್ಣೆದುರಿಗಿದ್ದರೂ `ಅದೃಶ್ಯ`ವಾಗಿರುವುದು ಯಾಕೆ? ಇದು ಕಮ್ಯುನಿಸ್ಟರ ವಿರುದ್ಧ ನೇರ ಹಿಂಸಾತ್ಮಕ ಕಾರ್ಯಾಚರಣೆ ನಡೆಸುವ ಪ್ರಭುತ್ವಕ್ಕೆ ಸಹಯೋಗಿಯಾಗಿ ನಾಗರಿಕ ಸಮಾಜದಲ್ಲಿ ರೂಢಿಸಲಾಗಿರುವ ಸಹಮತವೋ? ಅಗ್ರಗಣಿ ಕಮ್ಯುನಿಸ್ಟ್ ನಾಯಕ ಕಾಂ. ಬಿ.ವಿ. ಕಕ್ಕಿಲ್ಲಾಯ ತೀರಿಕೊಂಡಿರುವ ಹೊತ್ತಿನಲ್ಲಿ (ಜೂನ್ 4, 2012) ನಾಡಿನ ಈ ವಿಪರ್ಯಾಸ ಮತ್ತೊಮ್ಮೆ ನಮ್ಮನ್ನು ಚುಚ್ಚಬೇಕು.

ಕಕ್ಕಿಲ್ಲಾಯರು ತಮ್ಮ ಯೌವನದಲ್ಲೇ ವಸಾಹತುಶಾಹಿ ವಿರೋಧಿ ಹೋರಾಟದಿಂದ ಸ್ಫೂರ್ತಿ ಪಡೆದು ಪೂರ್ಣ ಪ್ರಮಾಣದ ಸಾರ್ವಜನಿಕ ಜೀವನಕ್ಕೆ ಧುಮುಕಿದ ಕಮ್ಯುನಿಸ್ಟ್. ಅವರ ತಲೆಮಾರಿನ ಎಲ್ಲ ಕಮ್ಯುನಿಸ್ಟರೂ ಎರಡು ಜೊತೆ ಬಟ್ಟೆ, ದಕ್ಕಿದರೆ ಒಂದು ಹೊತ್ತಿನ ತುತ್ತು, ಇಡುಕಿರಿದ ಪಾರ್ಟಿ ಆಫೀಸಿನ ಮೂಲೆಯಲ್ಲಿ ಒಂದು ಚಾಪೆ- ಇಷ್ಟನ್ನೇ ಆಸ್ತಿಯಾಗಿಟ್ಟುಕೊಂಡು ಬದುಕಿದವರು. 

ಪಿತ್ರಾರ್ಜಿತವಾಗಿ ದಕ್ಕಿದ ಆಸ್ತಿಯ ಪಾಲೇನಾದರೂ ಇದ್ದಲ್ಲಿ, ಅವನ್ನು ಅವರ ಹೆಂಡತಿ ಮಕ್ಕಳು ತಮ್ಮ ಕನಿಷ್ಠ ಜೀವನ ನಿರ್ವಹಣೆಗೆ ಆಧಾರವಾಗಿ ಉಪಯೋಗಿಸಿದರೇ ಹೊರತಾಗಿ, ಈ ಕಮ್ಯುನಿಸ್ಟ್ ನಾಯಕರು ಅವುಗಳ ಹಂಗಿಗೆ ಬಿದ್ದವರಲ್ಲ. `ಇದೇನು ಕಮ್ಯುನಿಸ್ಟರ ಮೋಕ್ಷ ಸಾಧನೆಯ ಆತ್ಮನಿಗ್ರಹ ಮಾರ್ಗವೋ?` ಎಂದು ನಾನು ಹಾಸ್ಯದ ಹಗುರದಲ್ಲಿ, ಕಕ್ಕಿಲ್ಲಾಯರ ಸಹಕಮ್ಯುನಿಸ್ಟರಾಗಿದ್ದ ಪಿ.ರಾಮಚಂದ್ರರಾಯರನ್ನು ಕೇಳಿದ್ದೆ. 

ಸುಖವಾಗಿ ನಕ್ಕು ಅವರು ಹೇಳಿದರು- `ನೋಡು, ಜೀವ ಉಳಿಸಿಕೊಳ್ಳಲಿಕ್ಕೆ ಎಷ್ಟು ಅಗತ್ಯವೋ ಅಷ್ಟರಲ್ಲಿ ಬದುಕಿದರೆ ನಮಗೆ ಅಧಿಕಾರಸ್ಥರ ಹಂಗಿನಲ್ಲಿ ಬದುಕುವ ಪ್ರಸಂಗ ಬರುವುದಿಲ್ಲ. ಆಗ ನಿರ್ದಾಕ್ಷಿಣ್ಯವಾಗಿ ಅಧಿಕಾರದೆದಿರು ಹೋರಾಡಬಹುದು.This is the essence of Gandhian simple living; This we have learnt from life of A.K.Gopalan and Namboodripad’ಈ ಜೀವನ ಧ್ಯೇಯ `ಅನ್ಯ ದೇಶ`ದ್ದೋ? ಕಕ್ಕಿಲ್ಲಾಯರು ಹೇಗೆ ಕಮ್ಯುನಿಸ್ಟ್ ಮುತ್ಸದ್ದಿಯೋ ಹಾಗೇ ಸಿದ್ಧಾಂತಿ ಎಂದೂ ಹೆಸರು ಪಡೆದವರು. ಅವರು ಯೌವನದಲ್ಲಿ ಕಮ್ಯುನಿಸ್ಟ್ ಚಳವಳಿಗೆ ತಮ್ಮನ್ನು ಕೊಟ್ಟುಕೊಂಡರು. 

ಅವಿಭಜಿತ ಕಮ್ಯುನಿಸ್ಟ್ ಪಕ್ಷ `ಕ್ವಿಟ್ ಇಂಡಿಯ ಚಳವಳಿ`ಯಲ್ಲಿ ಭಾಗವಹಿಸಕೂಡದೆಂಬ ನಿರ್ಧಾರ ಮಾಡಿದಾಗ್ಯೂ ಆ ಚಳವಳಿಯಲ್ಲಿ ಮುಂದಾಗಿ ಭಾಗವಹಿಸಿ ಜೈಲು ಸೇರಿದರು. ಅವರು ಮಾರ್ಕ್ಸ್‌ವಾದದ ಸಿದ್ಧಾಂತಗಳನ್ನು ಗಂಭೀರವಾಗಿ ಅಧ್ಯಯನ ಮಾಡಿದ್ದು ಆ ಸೆರೆವಾಸದಲ್ಲಿ. ಆವರೆಗೂ ಅವರನ್ನು ಕಮ್ಯುನಿಸ್ಟರ ಸಂಗ ಮಾಡುವಂತೆ ಪ್ರೇರೇಪಿಸಿದ ವಿಚಾರಗಳು ಯಾವುವು ಎಂಬುದನ್ನು ಕಕ್ಕಿಲ್ಲಾಯರು ತಮ್ಮ ಆತ್ಮಚರಿತ್ರೆಯಲ್ಲಿ (`ಬರೆಯದ ದಿನಚರಿಯ ಮರೆಯದ ಪುಟಗಳು`) ಬರೆದಿದ್ದಾರೆ. 

ಅವೆಲ್ಲಾ ತಮ್ಮ ಸುತ್ತಣ ಬದುಕಿನಲ್ಲಿ ಅವರು ಕಂಡಿದ್ದ ಜಾತಿ, ಆಸ್ತಿ ತಾರತಮ್ಯ, ಮೇಲ್ಜಾತಿಗಳ ಶಟ ಸಂಪ್ರದಾಯಗಳನ್ನು ಪ್ರತಿರೋಧಿಸುವ ರೊಚ್ಚಿನಿಂದ (ಸರ್ಫರೋಶಿ) ಉದ್ದೀಪಿತವಾದವು; ಈ ರೊಚ್ಚು ವಸಾಹತುಶಾಹಿ ವಿರೋಧಿ ಹೋರಾಟದ ಅವಿಭಾಜ್ಯ ಅಂಗವಾಗಿದ್ದ ಸಾಮಾಜಿಕ ಜಾಗೃತಿಯ ಕೂಸು. ಇವುಗಳ ಜೊತೆ ಅವರ ವೈಚಾರಿಕತೆಯನ್ನು ಪ್ರೇರೇಪಿಸಿದ ಅನುಭವಿ ಕುಟುಂಬಸ್ಥರ ಲೋಕೋಕ್ತಿಗಳು ಸಾಕಾಷ್ಟಿವೆ. 

ಅವುಗಳಲ್ಲಿ, ಅವರ ತಾಯಿಯವರು ಹೇಳುತ್ತಿದ್ದದ್ದೆಂದು ಕಕ್ಕಿಲ್ಲಾಯರು ನೆನಪಿಸಿಕೊಳ್ಳುವ ಮಾತು ಹೀಗಿದೆ- `ಕೆನ್ನೆಗೆ ಹೊಡೆದರೆ ಕ್ಷಮೆ ಇದೆ; ಬೆನ್ನಿಗೆ ಹೊಡೆದರೆ ಕ್ಷಮೆ ಇದೆ; ಆದರೆ ಹೊಟ್ಟೆಗೆ ಹೊಡೆದರೆ ದೇವರೂ ಕ್ಷಮಿಸಲಾರ` (ಬಿ.ವಿ.ಕಕ್ಕಿಲ್ಲಾಯ ಸಂಭಾವನ ಗ್ರಂಥ `ನಿರಂತರ`ದಲ್ಲಿ ಉದ್ದೃತ, ಪು.14). ಕಮ್ಯುನಿಸ್ಟರ ರಾಜಕೀಯದಲ್ಲಿ ಈ ಬಗೆಯ ಯುಗಧರ್ಮ ಹಾಗೂ ಲೋಕಾನುಭವಗಳು ಬೆಸೆದಿವೆ ಎಂದೇ ಅವರಿಗೆ ಜನರ ಬವಣೆಯ ಸ್ವರೂಪಗಳನ್ನು ಗ್ರಹಿಸಿ ಹೋರಾಟಗಳನ್ನು ಸಂಘಟಿಸಲು ಸಾಧ್ಯವಾಯಿತು. 

ಕರ್ನಾಟಕದ ಕರಾವಳಿಯಲ್ಲಿ `ಬೀಡಿ ಕಟ್ಟಿ ಬದುಕುವುದು` ಎಂಬ ಮಾತು ಕಡುಬಡತನದ ನಿರೂಪಣೆ. ಈ ಉದ್ದಿಮೆಯಲ್ಲಿ ನಡೆಯುವ ಶೋಷಣೆ, ಆಧುನಿಕ ಕೈಗಾರಿಕಾ ವಲಯದಲ್ಲಿ ನಡೆಯುವ ಶ್ರಮಿಕರ ಶೋಷಣೆಗಿಂತ ಭಿನ್ನ ಬಗೆಯದು. 

ಕಕ್ಕಿಲ್ಲಾಯರು ಬೀಡಿ ಕಟ್ಟುವವರ ಸ್ಥಿತಿಯನ್ನು ಅರಿತ ಬಗೆ ನೋಡಿ- `ವಸತಿಗಳನ್ನೇ ಬೀಡಿ ಕಟ್ಟುವ ಕಾರ್ಖಾನೆಗಳನ್ನಾಗಿ ಮಾರ್ಪಡಿಸಿ ಹಿರಿಯ ಬಂಡವಾಳಗಾರರ ಮತ್ತು ಕಂಟ್ರಾಕ್ಟುದಾರರ ಸುಲಿಗೆಯ ಆಡುಂಬೊಲವಾಗಿಸಿ ಜೀತದಾಳುಗಳಂತೆ ಬಾಳಬೇಕಾದ ಸ್ಥಿತಿಗೆ ತಲುಪಿದಂತಹವರು` (ಅದೇ, ಪು.169). ಕರಾವಳಿಯ ಕಮ್ಯುನಿಸ್ಟರು ಮನೆಮನೆ ತಿರುಗಿ, ಬೀಡಿ ಕಟ್ಟುವ ಬಡವರಿಗೆ ಉದ್ದಿಮೆಯಲ್ಲಿರುವ ಶೋಷಣೆಯ ಸ್ವರೂಪವನ್ನು ಅರುಹಿ, `ಬೀಡಿ ಕಾರ್ಮಿಕರ ಸಂಘಟನೆ` ಕಟ್ಟಿದರು; ನ್ಯಾಯಯುತ ಹಕ್ಕಿನ ಹೊಸ ಭಾಷೆಯನ್ನೇ ರಚಿಸಿದರು- ಇದು ಸಾಮಾನ್ಯವಾದುದಲ್ಲ. 

ಹಾಗೆಯೇ ಭಾರತದಲ್ಲಿ ಕೃಷಿಭೂಮಿಯ ಸ್ವಾಮ್ಯ ಹಾಗು ಕೃಷಿ ಸಂಬಂಧಗಳಲ್ಲಿರುವ ಶೋಷಣೆಗಳು ಪ್ರದೇಶ ವಿಶಿಷ್ಟವಾದವು. ಗೇಣಿದಾರರು ಮತ್ತು ಭೂಮಿಹೀನ ಕೃಷಿಕಾರ್ಮಿಕರನ್ನು ಸಂಘಟಿಸಿ, ಅವರಿಗೆ ದಕ್ಕಬೇಕಾದ ಹಕ್ಕುಗಳನ್ನು ನಿರೂಪಿಸುವುದು, ಆ ಜನರ ಜೀವನದಲ್ಲಿ ಜೀವಂತವಾಗಿ ಹೆಣೆದುಕೊಂಡವರಿಗೆ ಮಾತ್ರ ಸಾಧ್ಯ. ಕಮ್ಯುನಿಸ್ಟರು ಇದನ್ನು ಸಾಧಿಸಿ ತೋರಿಸಿದ್ದಾರೆ. 

1972ರಲ್ಲಿ ದೇವರಾಜ ಅರಸು ಸರ್ಕಾರ ಭೂಸುಧಾರಣೆ ಮಸೂದೆ ಮಂಡಿಸುವ ಹೊತ್ತಿಗಾಗಲೇ ಸೋಶಿಯಲಿಸ್ಟರು ಹಾಗು ಕಮ್ಯುನಿಸ್ಟರ ಹೋರಾಟಗಳು ಗೇಣಿದಾರರು ಹಾಗು ಭೂಹೀನ ಕೃಷಿ ಕಾರ್ಮಿಕರ ಹಕ್ಕುಗಳನ್ನು ಅನುಷ್ಠಾನಯೋಗ್ಯ ಸ್ಪಷ್ಟತೆಯಲ್ಲಿ ನಿರೂಪಿಸಿದ್ದವು. 1962ರಲ್ಲಿ ಅಂಗೀಕಾರಗೊಂಡಿದ್ದ ಭೂಶಾಸನಗಳನ್ನು ಒಗ್ಗೂಡಿಸಿ, ಯಾವ ಪರಿಷ್ಕರಣೆಯೂ ಇಲ್ಲದ ಮಸೂದೆಯನ್ನು ಶಾಸನಸಭೆ ಅನುಮೋದಿಸಲು ಸಿದ್ಧವಾಗಿದ್ದಾಗ ಕಕ್ಕಿಲ್ಲಾಯರನ್ನೊಳಗೊಂಡ 5 ಕಮ್ಯುನಿಸ್ಟ್, 3 ಸೊಶಿಯಲಿಸ್ಟ್ ಹಾಗು ಒಬ್ಬ ಆರ್.ಪಿ.ಐ. ಶಾಸಕರು ಒಗ್ಗೂಡಿ ವಿರೋಧಿಸಿ, ಮಸೂದೆಯನ್ನು ಪರಿಶೀಲನಾ ಸಮಿತಿಗೆ ಒಪ್ಪಿಸುವಂತೆ ಮಾಡಿದರು.
 
ಸಮಿತಿಯ ಕಮ್ಯುನಿಸ್ಟ್ ಸದಸ್ಯರಾಗಿದ್ದ ಕಕ್ಕಿಲ್ಲಾಯರು ಕಮ್ಯುನಿಸ್ಟರು ಸಂಘಟಿಸಿದ ಭೂಹೋರಾಟಗಳ ಅನುಭವವನ್ನು ಧಾರೆ ಎರೆದು ಒಂದಿಷ್ಟಾದರೂ ಹಲ್ಲು, ಉಗುರುಗಳನ್ನುಳ್ಳ ಶಾಸನವನ್ನು ರೂಪಿಸುವಲ್ಲಿ ಯಶಸ್ವಿಯಾದರು. ಈ ಕಾರ್ಯದಲ್ಲಿ  ಸೋಶಿಯಲಿಸ್ಟ್ ಹಾಗೂ ಕೆಲವು ಕಾಂಗ್ರೆಸ್ ಸದಸ್ಯರು ನೀಡಿದ ಬೆಂಬಲವನ್ನು ಕಕ್ಕಿಲ್ಲಾಯರು ಮರೆಯದೆ ನೆನೆಯುತ್ತಾರೆ. ಆದರೆ ಕಮ್ಯುನಿಸ್ಟರ ಹೋರಾಟಗಳು ಮತ್ತು ಆ ಹೋರಾಟಗಳ ಪ್ರತಿಮೆಯಾದ ಕಕ್ಕಿಲ್ಲಾಯರೂ ನಮ್ಮ ಸಾರ್ವಜನಿಕ ಮನೋಭೂಮಿಕೆಯಲ್ಲಿ ಅದೃಶ್ಯರಾಗ್ದ್ದಿದಾರೆ!

ಇಪ್ಪತ್ತನೇ ಶತಮಾನದ ಈ ಬಹು ಮುಖ್ಯ ಕಾಲಘಟ್ಟದ ಕರಾವಳಿಯ ಜನಜೀವನವನ್ನು ಶಿವರಾಮ ಕಾರಂತರ ಕಾದಂಬರಿಗಳು ನೈಜವಾಗಿ ಚಿತ್ರಿಸುತ್ತವೆ ಎಂದು ನಂಬುತ್ತೇವಷ್ಟೇ. ಆದರೆ ಅವರ ಯಾವ ಕಾದಂಬರಿಯಲ್ಲೂ, ಕರಾವಳಿಯ ಊರೂರುಗಳಲ್ಲಿ ಹೋರಾಟ ನಡೆಸುತ್ತಿದ್ದ ಕಕ್ಕಿಲ್ಲಾಯರಂಥ ಕಮ್ಯುನಿಸ್ಟ್ ನಾಯಕರ ಬದುಕಿನ ಚಿತ್ರ ಯಾಕೆ ಕಾಣುವುದಿಲ್ಲ? ಎಂಬ ಪ್ರಶ್ನೆಯನ್ನು ಕಾರಂತರ ಕಥನ ಜಗತ್ತಿನ ಬಗ್ಗೆ ಗೌರವಿಟ್ಟುಕೊಂಡೇ ನಾವು ಕೇಳಬಹುದು.

ಅಪ್ಪಣ್ಣ ಹೆಗಡೆ
ಈ ಬಗೆಯ ಸಾರ್ವಜನಿಕ ವಿಸ್ಮೃತಿಗೆ ತಳ್ಳಲ್ಪಟ್ಟ ಮತ್ತೊಬ್ಬ ಧೀಮಂತ ಕಮ್ಯುನಿಸ್ಟ್ ನಾಯಕ ಅಪ್ಪಣ್ಣ ಹೆಗಡೆ. ಅವರ ಬದುಕನ್ನು ನಾವು ಸಾಂದರ್ಭಿಕವಾಗಿ ನೆನೆಯಬೇಕು. ಅವರು ಶಿವಮೊಗ್ಗದಲ್ಲಿ ವಕೀಲರಾಗಿದ್ದರು ಹಾಗೂ ಮಲೆನಾಡು ಪ್ರದೇಶದಲ್ಲಿ ಸಿ.ಪಿ.ಐ.(ಎಂ) ಪಕ್ಷದ ನಾಯಕರಾಗಿದ್ದರು. 

1964ರ ಹೊತ್ತಿಗೆ ತೀರ್ಥಹಳ್ಳಿಗೆ ಬಂದು ನೆಲೆಸಿ ಗೇಣಿದಾರರ ಸಂಘಟನೆಯನ್ನು ಕಟ್ಟಿದರು. ಗೇಣಿದಾರರ ಹೋರಾಟ ಕಾಗೋಡು ಸತ್ಯಾಗ್ರಹದ ಕೊಳಗ ಅಳತೆಯನ್ನೂ ಮೀರಿ, ಸಂಪೂರ್ಣ ಭೂಸ್ವಾಮ್ಯವನ್ನು ಪಡೆಯುವ ಪರಿವರ್ತನಾಶೀಲ ಹೋರಾಟವಾಗಬೇಕು ಎಂಬ ಸಂಕಲ್ಪದಲ್ಲಿ ಅಪ್ಪಣ್ಣ ಹೆಗಡೆ ಗೇಣಿದಾರರನ್ನು ಸಂಘಟಿಸತೊಡಗಿದರು. ಅವರು ತಮ್ಮ ಚಳವಳಿಯನ್ನು `ಬಿಳಿಯ ಗೌಡರ ವಿರುದ್ಧ ಕರಿಯ ಗೌಡರ ಹೋರಾಟ` ಎಂದು ಕರೆದು, ಇದು ಜಾತಿಯ ನೆಲೆಗಳನ್ನು ಮೀರಿದ ಹಕ್ಕಿನ ಹೋರಾಟವೆಂದು ಗೇಣಿದಾರರಿಗೆ ಮನದಟ್ಟು ಮಾಡಿದ್ದರು. 

ಅಪ್ಪಣ್ಣ ಹೆಗಡೆಯವರದ್ದು ಭೂಮಾಲೀಕರಿಗೆ ನೇರಾನೇರ ಸೆಡ್ಡು ಹೊಡೆದು ನಿಂತ ಜಟ್ಟಿಯ ಶೈಲಿ (ಮಿಲಿಟೆಂಟ್ ಸ್ಟ್ರಗ್ಲ್). ಗಿರಿಯಪ್ಪ ಗೌಡನೆಂಬ ಗೇಣಿದಾರನಿಗೆ ಭೂಮಾಲೀಕ ಕಿರುಕುಳ ಕೊಟ್ಟಾಗ, ಭೂಮಾಲೀಕನನ್ನು ಹೆಡಮುರಿಗೆ ಕಟ್ಟಿ ತೀರ್ಥಹಳ್ಳಿಯ ಬೀದಿಗಳಲ್ಲಿ ಅಪ್ಪಣ್ಣ ಹೆಗಡೆ ಮೆರವಣಿಗೆ ಮಾಡಿಸಿದ್ದರು. 

ಪೊಲೀಸರು ಭೂಮಾಲೀಕರ ಪರ ನಿಂತಾಗ, ಅಪ್ಪಣ್ಣ ಹೆಗಡೆ ತೀರ್ಥಹಳ್ಳಿಯ ಪೊಲೀಸು ಠಾಣೆಯ ಮೇಲೆ ಕಮ್ಯುನಿಸ್ಟ್ ಪಕ್ಷದ ಪತಾಕೆ ಹಾರಿಸಿ ಪಂಥಾಹ್ವಾನ ನೀಡಿದ್ದರು! ಗೋಪಾಲಗೌಡರು ತೀರ್ಥಹಳ್ಳಿಯಿಂದ ವಿಧಾನ ಸಭಾ ಚುನಾವಣೆಗೆ ಸ್ಪರ್ಧಿಸಿದಾಗ (1967) ಅಪ್ಪಣ್ಣ ಹೆಗಡೆ ಗೋಪಾಲಗೌಡರ ಪರವಾಗಿ ದುಡಿದರು. ಚುನಾವಣೆಯಲ್ಲಿ ಗೆದ್ದ ಗೋಪಾಲಗೌಡರು `ಇದು ಅಪ್ಪಣ್ಣ ಹೆಗಡೆಯವರ ಬೆಂಬಲದಿಂದ ಪಡೆದ ಜಯ`ವೆಂದು ಸಾರ್ವಜನಿಕವಾಗಿ ಹೇಳಿದ್ದರಂತೆ. 

1972ರ ಚುನಾವಣೆಯ ಹೊತ್ತಿಗೆ ಗೋಪಾಲಗೌಡರು ಅನಾರೋಗ್ಯಕ್ಕೆ ಈಡಾಗಿದ್ದರಿಂದ ಸ್ಪರ್ಧಿಸಲಿಲ್ಲ. ಅಪ್ಪಣ್ಣ ಹೆಗಡೆ ತೀರ್ಥಹಳ್ಳಿಯಿಂದ ಸ್ಪರ್ಧೆಗೆ ಇಳಿದಾಗ, ಗೌಡರು ತಮ್ಮ ಅನಾರೋಗ್ಯ ನಿಮಿತ್ತ ಪ್ರಚಾರಕ್ಕೆ ಬರಲಾಗದ ಅಳಲು ತೋಡಿಕೊಂಡು, ತಮ್ಮ ಟ್ರೇಡ್‌ಮಾರ್ಕ್ ಮಫ್ಲರನ್ನು ಹೆಗ್ಡೆಯವರ ಕೊರಳಿಗೆ ಹಾಕಿ ಹರಸಿದರಂತೆ. ಅಪ್ಪಣ್ಣ ಹೆಗಡೆ ಗೆಲ್ಲಲಿಲ್ಲ. 

ಕರ್ನಾಟಕದ ಕಮ್ಯುನಿಸ್ಟ್ ಚಳವಳಿಯ ಚರಿತ್ರೆಯಲ್ಲಿ ಅಪ್ಪಣ್ಣ ಹೆಗಡೆಯವರ ಹೋರಾಟದ ಬದುಕು, ತೆಲಂಗಾಣ ಹೋರಾಟ ಹಾಗೂ ನಕ್ಸಲೈಟ್ ಚಳವಳಿಯ ನಡುವಿನ ಒಂದು ಹೊನ್ನಿನ ಅಧ್ಯಾಯದಂತೆ ಕಾಣುತ್ತದೆ. ಅವರದ್ದು ತೀರ್ಥಹಳ್ಳಿಯ ಜನಜೀವನದಲ್ಲಿ ಸಮಗ್ರವಾಗಿ ಹೆಣೆದುಕೊಂಡ ಜೀವಚೇತನ. ಆದರೆ ಮಲೆನಾಡಿನ ಜನರ ಮತಿಯಲ್ಲಿ ಅವರ ಬದುಕು ಅಳಿಸಿ ಹೋಗಿದೆ.
 
ಯು.ಆರ್.ಅನಂತಮೂರ್ತಿಯವರ ಗದ್ಯ ಸಾಹಿತ್ಯದಲ್ಲಿ ಮಲೆನಾಡಿನ, ಅದರಲ್ಲೂ ತೀರ್ಥಹಳ್ಳಿ ಪ್ರದೇಶದ, ಜನಜೀವನದ ನಿರೂಪಣೆ ಮೈದುಂಬಿಕೊಂಡು ಹರಿಯುತ್ತದೆ. ಕಾಂಗ್ರೆಸ್ ಹಾಗೂ ಸೋಶಿಯಲಿಸ್ಟ್ ರಾಜಕೀಯದಲ್ಲಿ ಮುಳುಗೇಳುವ, ಲೇಖಕನ ಇಚ್ಛೆಯ ಪರಿಮಿತಿಯನ್ನೂ ಉಲ್ಲಂಘಿಸಿ ಲೋಕಕಾಂತಿಯಲ್ಲಿ ಬೆಳಗುವ ಜೀವಂತ ಪಾತ್ರಗಳು ಅವರ ಕಥನದಲ್ಲಿ ಸಾಕಷ್ಟಿವೆ. 

ಆದರೆ, ಅನಂತಮೂರ್ತಿ ಅವರ ಕಥಾಲೋಕದ ಕಮ್ಯುನಿಸ್ಟ್ ಪಾತ್ರಗಳು ಮಾತ್ರ, ಲೇಖಕನ ಇಷ್ಟಾಕೃತಿಗೆ ತಕ್ಕಂತೆ ಕತ್ತರಿಸಲ್ಪಟ್ಟ, ಸ್ವತಂತ್ರ ಅಸ್ತಿತ್ವವಿಲ್ಲದ ಅಣಕುಪಾತ್ರಗಳು (ಕ್ಯಾರಿಕೇಚರ್ಸ್). `ಅವಸ್ಥೆ`ಯ ಅಣ್ಣಾಜಿ, `ಆಕಾಶ ಮತ್ತು ಬೆಕ್ಕು`ವಿನ ಗೋವಿಂದನ್ ನಾಯರ್, ಯಾರಿಗೂ ಯಾಕೆ ಅಪ್ಪಣ್ಣ ಹೆಗಡೆಯವರ ಜೀವಂತಿಕೆ ಇಲ್ಲ.` ಅನಂತಮೂರ್ತಿಯವರ ಕಥಾಲೋಕದ ಬಗ್ಗೆ ಗೌರವವಿಟ್ಟುಕೊಂಡೇ, ಈ ಪ್ರಶ್ನೆ ಕೇಳಬೇಕು. 
ಕಮ್ಯುನಿಸ್ಟ್ ಪಕ್ಷಗಳ ಲಾಗಾಯ್ತಿನ ಧೋರಣೆ ಹಾಗೂ ರಾಜಕೀಯ ವರಸೆಗಳನ್ನು ವಿಮರ್ಶಿಸಬೇಕು, ಅವರು ಎಸಗುವ ತಪ್ಪುಗಳನ್ನು ಟೀಕಿಸಬೇಕು- ಇದರಲ್ಲಿ ಎರಡು ಮಾತಿಲ್ಲ. ಹಾಗಂತ, ಭಾರತದ ಕಮ್ಯುನಿಸ್ಟರ ಬದುಕು ಮತ್ತು ರಾಜಕೀಯಗಳ ಪ್ರಸ್ತುತತೆಯನ್ನು ಕಡೆಗಣಿಸಕೂಡದು; ಹಾಗೆ ಮಾಡಿದಲ್ಲಿ ಬಡವರ ಬದುಕಿನ ಬವಣೆ, ಅವರ ಹಕ್ಕಿನ ನಿರೂಪಣೆ ಮತ್ತು ಹೋರಾಟಗಳಿಗೆ ನಾವು ಕುರುಡಾಗಿಬಿಡುತ್ತೇವೆ. 

ಊರಲ್ಲಿ ಬಾಳಿ ಬದುಕಿ, ಹೋರಾಡಿದ ಕಕ್ಕಿಲ್ಲಾಯ, ಅಪ್ಪಣ್ಣ ಹೆಗಡೆಯಂಥವರ ಬದುಕೇ ಜನರ ಲೋಕತಿಳಿವಳಿಕೆಯಿಂದ `ಅದೃಶ್ಯ`ವಾಗಿದೆ; ಇನ್ನು ನಾಡಿನಿಂದ `ಅದೃಶ್ಯ`ರಾಗಿ, ಕಾಡಿನಲ್ಲಿರುವ ಆದಿವಾಸಿಗಳನ್ನು, ತಮ್ಮ ಬದುಕಿನ ಹಕ್ಕನ್ನು ಕಿತ್ತುಕೊಳ್ಳುವ ಉಳ್ಳವರ ಯೋಜನೆಗಳ ವಿರುದ್ಧದ ಹೋರಾಟಕ್ಕೆ ಸಂಘಟಿಸುತ್ತಿರುವ ನಕ್ಸಲೈಟರು `ದೇಶದ ಭದ್ರತೆಗೆ ಒದಗಿರುವ ಏಕೈಕ ದೊಡ್ಡ ಅಪಾಯ`ವೆಂದು ಮನಮೋಹನ್ ಸಿಂಗ್ ಹೇಳದೇ ಇರುತ್ತಾರೆಯೇ!

                                                                                          ಕೆ. ಫಣಿರಾಜ್  (ಕೃಪೆ, ಪ್ರಜಾವಾಣಿ)

No comments:

Post a Comment