Thursday 5 April 2012

ಈ ಹುಡುಗ ನಕ್ಸಲೈಟ್ ಇರಬಹುದೇ...?


 
  ಮಂಗಳೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಸ್ನಾತಕೋತ್ತರ ವಿಭಾಗದಲ್ಲಿ ಓದುತ್ತಿರುವ ಈ ಹುಡುಗನನ್ನು ಪೊಲೀಸರು ಬಂಧಿಸಿದ್ದಾರೆ. ಈತ `ನಕ್ಸಲೀಯ` ಎಂಬ ಹಣೆಪಟ್ಟಿಯನ್ನು ಕಟ್ಟಿದ್ದಾರೆ.
ಬೆಳ್ತಂಗಡಿಯಿಂದ ಬಸ್ಸಿಳಿದು ದುರ್ಗಮ ಕಾಡಿನಲ್ಲಿ ಎರಡು ಗಂಟೆಗಳ ಕಾಲ ಬೆಟ್ಟಗುಡ್ಡಗಳ ದಾರಿಯಲ್ಲಿ ನಡೆದರೆ ಕುತ್ಲೂರು ಎಂಬ ಮಲೆಕುಡಿಯರ ಹಾಡಿ ಸಿಗುತ್ತದೆ. ಆದಿವಾಸಿ ಗಿರಿಜನರ ಈ ಹಾಡಿಯಲ್ಲಿ ಏಕೈಕ ವಿದ್ಯಾವಂತ ವಿಠಲ ಮಲೆಕುಡಿಯ. ಈತ ಬಿ.ಎ ಓದಿ ಪತ್ರಿಕೋದ್ಯಮದಲ್ಲಿ ಎಂ.ಎ ಮಾಡುತ್ತಿದ್ದಾನೆ.
ಈಚೆಗೆ ಆರ್ಟ್ ಆಫ್ ಲಿವಿಂಗ್‌ನ ಶ್ರೀಶ್ರೀ ರವಿಶಂಕರ ಗುರೂಜಿ `ಸರ್ಕಾರಿ ಶಾಲೆಗಳಲ್ಲಿ ಓದುವವರು ನಕ್ಸಲೀಯರಾಗುತ್ತಾರೆ`ಎಂಬ ಹೇಳಿಕೆಯನ್ನು ದಯಪಾಲಿಸಿದ್ದರು. ಈ ವಿಠಲ ಮಲೆಕುಡಿಯ ಪ್ರೈಮರಿಯಿಂದ ಹೈಸ್ಕೂಲಿನ ತನಕ ಓದಿದ್ದು ಸರ್ಕಾರಿ ಶಾಲೆಯಲ್ಲಿ. ಸರ್ಕಾರಿ ಕಾಲೇಜಿನಲ್ಲೂ ಓದಿ ಪದವಿ ಪಡೆದ `ಅಪರಾಧ` ಬೇರೆ ಮಾಡಿರುವ ಈ ವಿಠಲ ಈಗ ಸರ್ಕಾರಿ ಅನುದಾನದಲ್ಲಿ ನಡೆಯುವ ವಿಶ್ವವಿದ್ಯಾಲಯದಲ್ಲೇ ಎಂ.ಎ. ಓದುತ್ತಿದ್ದಾನೆ ಅಂದರೆ ಈತ ಖಡಕ್ ನಕ್ಸಲೀಯನೇ ಆಗಿರಬೇಕಲ್ಲವೇ? 
ವಾಸ್ತವ ಸ್ಥಿತಿ ಬೇರೆಯೇ ಇದೆ; ಆದಿವಾಸಿ ಮಲೆಕುಡಿಯರು ತಲೆತಲಾಂತರಗಳಿಂದ ಇಲ್ಲಿ ಜೀವಿಸುತ್ತಿದ್ದಾರೆ. ಕಾಡಿನ ಉತ್ಪನ್ನಗಳನ್ನು ಸಂಗ್ರಹಿಸಿ ನಾಡಲ್ಲಿ ಮಾರಿ ಬದುಕು ಸವೆಸುತ್ತಿದ್ದಾರೆ. ಇವರಿಗೆ ಕಾಡೇ ಜೀವನಾಡಿ. ನಾಗರಿಕತೆಯಿಂದ ಬಲುದೂರವಿರುವ ಇವರು ಇಂದಿಗೂ ಶಿಕ್ಷಣದ ಕಡೆ ಮುಖ ಮಾಡಿಲ್ಲ.
ಈ ಪರಿಸರದಲ್ಲಿ ಹುಟ್ಟಿದ ವಿಠಲ ಹೇಗೋ ಸರ್ಕಾರಿ ಶಾಲೆಗೆ ಸೇರಿದ. ಮಲೆಕುಡಿಯರಿಗೆ ಅರಣ್ಯ ಇಲಾಖೆಯಿಂದ, ಇನ್ನಿತರೆ `ಕಾಡುರಕ್ಷಕ`ರಿಂದ ತೊಂದರೆ ಶುರುವಿಟ್ಟ ಮೇಲೆ ಪ್ರಮುಖ ಪತ್ರಿಕೆಗಳ ಬಂದಿಬ್ಬರು ವರದಿಗಾರರು ಈ ಹಾಡಿಗೆ ಹೋಗಿ ಸುದ್ದಿ ಸಂಗ್ರಹಿಸಿ ಮಲೆಕುಡಿಯರ ಸಮಸ್ಯೆಗಳ ಬಗ್ಗೆ ಆಗಾಗ ಬರೆಯತೊಡಗಿದರು. 
ಈ ಪತ್ರಕರ್ತರನ್ನು ಕಂಡ ವಿಠಲ ಆಕರ್ಷಿತನಾಗಿ ತಾನೂ ಪತ್ರಕರ್ತನಾಗಬೇಕೆಂದು ಹೊರಟ, ಈ ಪತ್ರಕರ್ತರಿಗೆ ಕಿರಿಯ ಮಿತ್ರನಾದ. ಈ ಕಾರಣಕ್ಕೆ ತನ್ನ ಪತ್ರಕರ್ತ ಮಿತ್ರರೊಂದಿಗೆ ಪ್ರಗತಿಪರ ಚಟುವಟಿಕೆಗಳಲ್ಲಿ ಭಾಗಿಯಾಗತೊಡಗಿದ. ನಿಧಾನವಾಗಿ ಎಸ್ಎಫ್ಐ, ಡಿವೈಎಫ್‌ಐಗಳಲ್ಲಿ ಕೆಲಸ ಮಾಡತೊಡಗಿದ. ಈ ಹುಡುಗನನ್ನು ಬಿ.ಎ. ಮಾಡಿಸಿ ಪತ್ರಿಕೋದ್ಯಮ ಎಂ.ಎ.ಗೆ ಸೇರಿಸಿದ್ದೂ ಈ ಪತ್ರಕರ್ತರೇ.
ಹೀಗಿರುವಾಗ ನ್ಯಾಷನಲ್ ಪಾರ್ಕ್‌ಗಾಗಿ ಈ ಕುತ್ಲೂರಿನ ಮೂಲ ನಿವಾಸಿ ಮಲೆಕುಡಿಯರನ್ನು ಒಕ್ಕಲೆಬ್ಬಿಸಲು ಸರ್ಕಾರ ಕೈ ಹಾಕಿತು. ಜಿಲ್ಲಾಧಿಕಾರಿಯ ಕಚೇರಿಯಲ್ಲಿ ಸಭೆ ಕರೆದು ಒಂದೊಂದೇ ಮಲೆಕುಡಿಯರ ಕುಟುಂಬವನ್ನು ಓಲೈಸುತ್ತಾ ಆ ಮುಗ್ಧ ಆದಿವಾಸಿಗಳು ವಾಸಿಸುವ ಗುಡಿಸಲು, ಮರಮಟ್ಟು, ಹಸು ಎಮ್ಮೆಗಳೊಂದಿಗೆ ಅಷ್ಟಿಷ್ಟು ಆಹಾರ ಧಾನ್ಯ ಬೆಳೆಯುತ್ತಿದ್ದ ಸಣ್ಣಪುಟ್ಟ ಜಮೀನು (ಮಲೆಕುಡಿಯರಿಗೆ ಸೇರಿದೆ ಎಂಬ ದಾಖಲಾತಿಯಂತೆ) ಎಲ್ಲವನ್ನೂ ಲೆಕ್ಕ ಹಾಕಿದರೆ ಸುಮಾರು 30 ರಿಂದ 40 ಲಕ್ಷ ಬೆಲೆ ಬಾಳುತ್ತದೆ.
ಈ ಲೆಕ್ಕವನ್ನೆಲ್ಲ ಪ್ರಾಮಾಣಿಕವಾಗಿ ಒಪ್ಪಿಸುವ ಅಧಿಕಾರಿಗಳು ಕಡೆಗೆ 10 ಲಕ್ಷ ಪರಿಹಾರಕ್ಕೆ ಆ ಮುಗ್ಧರನ್ನು ಒಪ್ಪಿಸಿ ಎತ್ತಂಗಂಡಿಗೆ ಪುಸಲಾಯಿಸುತ್ತಿದ್ದರು. ಈ ಶೋಷಣೆಯನ್ನು ಅರ್ಥಮಾಡಿಕೊಂಡ ವಿಠಲ ಪತ್ರಕರ್ತ ಮಿತ್ರರೊಂದಿಗೆ ಸೇರಿ ಪ್ರತಿಭಟಿಸಿದ.
ಸರ್ಕಾರದ ಬಲವಂತಕ್ಕೆ ಮಣಿದು ಕುತ್ಲೂರಿನ ನಲವತ್ತು ಗುಡಿಸಲುಗಳ 24 ಕುಟುಂಬಗಳು ಹಾಡಿ ತೊರೆದು ಅಲೆಮಾರಿಗಳಾಗಿ ಹೊರಟು ಹೋದವು. ಮಿಕ್ಕ ಗುಡಿಸಲುವಾಸಿ ಮಲೆಕುಡಿಯರು ವಿಠಲನೊಂದಿಗೆ ನಿಂತರು.
ಸುಪ್ರೀಂ ಕೋರ್ಟಿನ ತೀರ್ಪುಗಳ ಪ್ರಕಾರ ಆದಿವಾಸಿಗಳನ್ನು ಬಲವಂತದಿಂದ ಎತ್ತಂಗಡಿ ಮಾಡುವಂತಿಲ್ಲ. ಅಂತೆಯೇ ಕಾಡಿನ ಉತ್ಪನ್ನ ಸಂಗ್ರಹಿಸಲೂ ಅಡ್ಡಿಪಡಿಸುವಂತಿಲ್ಲ. ಈ ಕಾರಣಕ್ಕೆ ಸರ್ಕಾರಿ ಅಧಿಕಾರಿಗಳು ಅಸಹಾಯಕರಾದರು. ಪೊಲೀಸ್ `ಸಹಕಾರ` ಪಡೆಯುವುದು ಇವರಿಗೆ ಅನಿವಾರ್ಯವಾಯಿತು, ವಿಠಲನೊಬ್ಬನೇ ಅಡ್ಡಿ ಆಗಿದ್ದರಿಂದ ಅವನ ಮೇಲೆ ಕಣ್ಣಿಟ್ಟರು. 
ಇವನ ಹೋರಾಟಕ್ಕೆ ಬೆಂಬಲವಾಗಿ ನಿಂತ ಅವರ ಮುದಿ ಅಪ್ಪನನ್ನು ಬೆದರಿಸಿ ನಕ್ಸಲೀಯ ಬೆಂಬಲಿಗ ಎಂದು ಹಣೆ ಪಟ್ಟಿ ಕಟ್ಟಿ ಕಾಲು ಮುರಿಯುವಂತೆ ಹೊಡೆದರು. ಅಪ್ಪನ ಮೇಲೆ ಪೊಲೀಸ್ ದೌರ್ಜನ್ಯ ನಡೆಯುತ್ತಿರುವುದನ್ನು ತಿಳಿದು ವಿಶ್ವವಿದ್ಯಾಲಯದ ಹಾಸ್ಟೆಲ್‌ನಲ್ಲಿ ಓದುತ್ತಿದ್ದ ವಿಠಲ ಹಾಡಿಗೆ ಓಡಿ ಬಂದ. 
ಪೊಲೀಸರು ವಿಠಲನನ್ನು ಬಂಧಿಸಿ ಜೈಲಲ್ಲಿಟ್ಟರು. ಹಾಸ್ಟೆಲ್ ಮತ್ತು ಕಾಲೇಜಿನಲ್ಲಿ ನೂರಕ್ಕೆ ನೂರು ಪರ್ಸೆಂಟ್ ಅಟೆಂಡೆನ್ಸ್ ಇದ್ದ ವಿಠಲನನ್ನು `ವಿಕ್ಟಿಮೈಸ್` ಮಾಡಲು ಪೊಲೀಸರ ಬಳಿ ದಾಖಲೆಯಿರಲಿಲ್ಲ. ಇದಕ್ಕೆ ಪೊಲೀಸರ ಜತೆ ಸಖ್ಯವಿದ್ದ ಪತ್ರಿಕೆಯೊಂದನ್ನು ಬಳಸಿಕೊಂಡ ಪೊಲೀಸರು `ವಿಠಲ 2011ರಲ್ಲಿ ನಕ್ಸಲೀಯರ ಸಭೆಯಲ್ಲಿ ಭಾಗವಹಿಸಿದ್ದ` ಎಂದು ಬರೆಸಿದರು. 
ರಾತ್ರಿ ಹಗಲು ವಿಶ್ವವಿದ್ಯಾಲಯವನ್ನು ಬಿಟ್ಟು, ಹೊರ ಹೋಗದ ವಿಠಲನ ದಾಖಲಾತಿಯನ್ನು ಕಂಡು ಆ ಪತ್ರಿಕೆ ಮತ್ತೆ ತಿದ್ದುಪಡಿ ಹಾಕಿ `2001ರಲ್ಲಿ ವಿಠಲ ನಕ್ಸಲೀಯ ಚಟುವಟಿಕೆಯಲ್ಲಿ ಸಕ್ರಿಯನಾಗಿ ಪಾಲುಗೊಂಡಿದ್ದ` ಎಂದು ಬರೆಯಿತು. ಇದೀಗ 23 ವರ್ಷ ವಯಸ್ಸಾಗಿರುವ ವಿಠಲ 12 ವರ್ಷಗಳ ಹಿಂದೆ 6ನೇ ತರಗತಿಯಲ್ಲಿ ಓದುತಿದ್ದ 11 ವರ್ಷದ ಬಾಲಕ ಎಂಬ ಸತ್ಯ ಆ ಪತ್ರಿಕೆಗೂ, ಪೊಲೀಸರಿಗೂ ಅರಿವಿಗೆ ಬಾರದಾಯಿತು!
 ವಿಠಲನ ಹಾಗೂ ತಂದೆಯನ್ನು ಬಂಧಿಸಿದಾಗ ಈ `ನಕ್ಸಲೀಯ`ರ ಮನೆಯಲ್ಲಿ 200 ಗ್ರಾಂ ಸಕ್ಕರೆ ಹಾಗೂ 150 ಗ್ರಾಂ ಚಾ ಪುಡಿಯೊಂದಿಗೆ `ಭಗತ್‌ಸಿಂಗ್`ರ ಪುಸ್ತಕವೊಂದನ್ನು ವಶಪಡಿಸಿಕೊಳ್ಳಲಾಯಿತು. `ಈ ಬಡವರು 200 ಗ್ರಾಂ ಸಕ್ಕರೆ, 150 ಗ್ರಾಂ ಚಾ ಪುಡಿಯನ್ನು ಯಾಕೆ ಇಟ್ಟುಕೊಂಡಿದ್ದರು?` ಎನ್ನುವುದು ಪೊಲೀಸರ ಅನುಮಾನಕ್ಕೆ ಗ್ರಾಸವಾದರೆ ಭಗತ್‌ಸಿಂಗ್ ಪುಸ್ತಕ ವಿಠಲ `ನಕ್ಸಲೀಯ`ಎಂದು ನಿರೂಪಿಸಲು ಆಧಾರವಾಯಿತು! 
 ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮೇಲ್ಜಾತಿಯವರು ತಿಂದುಬಿಟ್ಟ ಎಂಜಲೆಲೆಗಳ ಮೇಲೆ ಹೊರಳಾಡುವವರು ಬಹುತೇಕ ಈ ಮಲೆಕುಡಿಯರೆ. ಶಿಕ್ಷಣದಿಂದ, ನಾಗರಿಕತೆಯಿಂದ ವಂಚಿತರಾದ ಈ ನಿರ್ಗತಿಕ ಆದಿವಾಸಿ ಜನಾಂಗದಲ್ಲಿ ಹುಟ್ಟಿ ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ಶಿಕ್ಷಣ ಪಡೆದು ಸಂವಿಧಾನಬದ್ಧವಾಗಿ ತನ್ನ ಹಕ್ಕುಗಳನ್ನು ಪಡೆಯಲು ಯತ್ನಿಸಿದ ಏಕೈಕ ವಿದ್ಯಾವಂತ ವಿಠಲ ಇಂದು `ನಕ್ಸಲೀಯ`ನಾಗಿ ಮಂಗಳೂರು ಜೈಲಿನಲ್ಲಿ ಕೊಳೆಯುತ್ತಿದ್ದಾನೆ. ಇವನು ಪತ್ರಕರ್ತನಾಗಬೇಕೆಂಬ ಅಭಿಲಾಷೆ ಜೈಲಿನ ಗೋಡೆಗಳ ನಡುವೆ ಕಮರುತ್ತಿದೆ..                                                         

                                                         ಡಾ.ಸಿ.ಎಸ್.ದ್ವಾರಕಾನಾಥ್, ಬೆಂಗಳೂರು