Sunday 1 July 2012

ಸಮಾಜವಾದದ ಕತೆ ಮುಗಿಯಲಿಲ್ಲ, ಹೊಸದಾಗಿ ಆರಂಭವಾಗಿದೆ


ರಡು ದಶಕಗಳ ಹಿಂದೆ ಸೋವಿಯೆತ್ ಒಕ್ಕೂಟ ವಿಘಟನೆ ಹೊಂದಿದಾಗ ನಮಗೆಲ್ಲ ದೊಡ್ಡ ಆಘಾತವೇ ಆಗಿತ್ತು- ಮಾನವ ಇತಿಹಾಸದಲ್ಲಿ, ಸಮಾನತೆಗಾಗಿ ಹೋರಾಟದಲ್ಲಿ ಹೊಸ ಅಧ್ಯಾಯವನ್ನು ತೆರೆದ ದೇಶವೊಂದು ಹೀಗೇಕೆ ಕಣ್ಮರೆಯಾಯಿತು ಎಂಬ ಆಘಾತ ಮಾತ್ರವಲ್ಲ ಅದು- ಮಾನವನಿಂದ ಮಾನವನ ಶೋಷಣೆಯಿಲ್ಲದ ಸಮಾಜದ ಕನಸು ಕಟ್ಟಿ ಕೊಟ್ಟ ಸಮಾಜವಾದವೆಂಬ ಪರಿಕಲ್ಪನೆ ಕೇವಲ ಕಲ್ಪನೆಯಾಗಿಯೇ ಉಳಿಯುವಂತದ್ದೇ ಎಂಬ ಯಕ್ಷಪ್ರಶ್ನೆ  ಎದುರಾದ ಆಘಾತ ಅದು. ಆದರೆ ಇದು ಬಹಳ ಕಾಲ ಯಕ್ಷಪ್ರಶ್ನೆಯಾಗಿ ಉಳಿಯಲಿಲ್ಲ. ಮಾನವನ ಇತಿಹಾಸದಲ್ಲಿ ಎರಡು ದಶಕಗಳು ಎಂಬುದು ಬಹಳ ಸಣ್ಣ ಅವಧಿ  ತಾನೇ?
ಈ ಎರಡು ದಶಕಗಳಲ್ಲಿ ವೋಲ್ಗಾ, ಮಿಸಿಸಿಪಿಗಳಲ್ಲಿ, ಲ್ಯಾಟಿನ್ ಅಮೆರಿಕಾದ ಅಮೆಝೊನ್ ನದಿಯಲ್ಲಿ, ಈಜಿಪ್ಟಿನ ನೈಲ್ ನದಿಯಲ್ಲೂ, ನಂತರ ಯುರೋಪಿನ ರೈನ್, ಸೆನ್, ಥೇಮ್ಸ್ಗಳಲ್ಲೂ, ನಮ್ಮ ಕಾವೇರಿ-ಗಂಗೆಯಂತೆ ಬಹಳಷ್ಟು ನೀರು ಹರಿದು ಹೋಗಿದೆ. ಸಮಾಜವಾದ ಸತ್ತಿತು, ಇತಿಹಾಸ ಕೊನೆಗೊಂಡಿತು, ಬಂಡವಾಳ ವ್ಯವಸ್ಥೆಯೇ ಮಾನವ ಕುಲದ ಅಂತಿಮ ನಿಯತಿ ಎಂಬ ಆಡಂಬರದ ಮಾತುಗಳೆಲ್ಲ ಈ ಅಲ್ಪ ಅವಧಿಯಲ್ಲೆ ಇತಿಹಾಸದ ಕಸದ ಬುಟ್ಟಿ ಸೇರಿವೆ. ಇದು ದುರಾಸೆಯ ವ್ಯವಸ್ಥೆ, ಈ ವ್ಯವಸ್ಥೆಯೇ ದೋಷಯುಕ್ತ, ಅಮಾನವೀಯ, ಈ ವ್ಯವಸ್ಥೆ ಕೊನೆಗೊಳ್ಳದೆ ಮಾನವ ಕುಲಕ್ಕೆ ಮುಕ್ತಿಯಿಲ್ಲ ಎಂಬ ಘೋಷಣೆಗಳು ಮತ್ತೆ, ದ್ವಿಗುಣ ಉತ್ಸಾಹದಿಂದ ಕೇಳಿ ಬರಲಾರಂಭಿಸಿವೆ. ಈ ವ್ಯವಸ್ಥೆಯ ಪ್ರತೀಕವಾದ ವಾಲ್ ಸ್ಟ್ರೀಟ್ಅನ್ನೇ ಆಕ್ರಮಿಸಿಕೊಳ್ಳಿ, ಏಕೆಂದರೆ ಇದು 1% ಮಂದಿಗಾಗಿ ಇರುವಂತದ್ದು, ನಾವು 99% ಎಂಬ ಸ್ವತಃ ಅಮೆರಿಕಾದ ಜನತೆಯ ಕೂಗಿಗೆ ಈಗ ಇಡೀ ವಿಶ್ವವೇ ಸ್ಪಂದಿಸಲಾರಂಭಿಸಿದೆ.  

ಲ್ಯಾಟಿನ್ ಅಮೆರಿಕಾದ ಸವಾಲು
ಸೋವಿಯೆತ್ ಒಕ್ಕೂಟದ ಕುಸಿದ ಮೇಲೆ ಇನ್ನು ಮುಂದೆ ತಾನೇ ಜಗತ್ತಿನ ಏಕೈಕ ಸೂಪರ್ ಪವರ್ ಎಂದು ಅಮೆರಿಕನ್ ಆಳರಸರು ಮತ್ತು ಅಂತರ್ರಾಷ್ಟ್ರೀಯ ಹಣಕಾಸು ಬಂಡವಾಳ ಕುಣಿದಾಡಿಕೊಂಡು ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಜಾಗತೀಕರಣದ ಹೆಸರಿನಲ್ಲಿ ಕುಪ್ಪಳಿಸುತ್ತಿದ್ದಾಗ, ಇದಕ್ಕೆ ಮೊದಲು ಸಡ್ಡು ಹೊಡೆದು ನಿಂತದ್ದು ಅದುವರೆಗೆ ಅಮೆರಿಕಾ ತನ್ನ ಹಿತ್ತಿಲು ಎಂದು ಭಾವಿಸಿದ್ದ ಲ್ಯಾಟಿನ್ ಅಮೆರಿಕಾ. ತನ್ನ ಹುಟ್ಟಿನಿಂದಲೇ ಅಮೆರಿಕಾದ ಯಜಮಾನಿಕೆಗೆ ಏಕಾಂಗಿಯಾಗಿ ಸವಾಲು ಹಾಕುತ್ತಾ ಬಂದಿದ್ದ ಪುಟ್ಟ ಕ್ಯೂಬಾದಿಂದ ಸ್ಫೂರ್ತಿ ಪಡೆದ ಲ್ಯಾಟಿನ್ ಅಮೆರಿಕಾದ ದೇಶಗಳಲ್ಲಿ ಒಂದೊಂದಾಗಿ ಸಮಾಜವಾದಿ-ಒಲವಿನ ಸರಕಾರಗಳು ಅಧಿಕಾರಕ್ಕೆ ಬರಲಾರಂಭಿಸಿದವು. 

ಬಂಡವಾಳವೇ ಸರ್ವಶಕ್ತ, ಅದನ್ನು ಸಂತುಷ್ಟಗೊಳಿಸಿದರೆ ಎಲ್ಲವೂ ಸರಿಯಾಗುತ್ತದೆ, ಜನಸಾಮಾನ್ಯರಿಗೂ ಅದರ ಪ್ರಯೋಜನ ಇಳಿದು ಬರುತ್ತದೆ ಎಂದು ಪ್ರತಿಪಾದಿಸುವ ನವ-ಉದಾರವಾದ ಎಂಬ ಧೋರಣೆ ಸೋವಿಯೆತ್ ಒಕ್ಕೂಟದ ಪತನದ ನಂತರ ಉಳಿದಿರುವ ಏಕಮಾತ್ರ ಮಾರ್ಗ ಎಂದು ಭಾರತವೂ ಸೇರಿದಂತೆ ಹಲವಾರು ದೇಶಗಳ ಆಳುವ ಮಂದಿ ಈಗ ಅನುಸರಿಸುತ್ತಿರುವ ವಿಶ್ವಬ್ಯಾಂಕ್ ಮತ್ತು ಐಎಂಎಫ್ ಪ್ರತಿಪಾದಿಸುತ್ತಿರುವ ಆಥರ್ಿಕ ಧೋರಣೆಗಳು ವಾಸ್ತವವಾಗಿ ಸಾಮ್ರಾಜ್ಯಶಾಹಿ ಜಾಗತೀಕರಣದ ಧೋರಣೆಗಳು, ಅವು ಈ ದೇಶಗಳ ಶ್ರೀಮಂತರ ಲಾಭದಾಹಗಳನ್ನು ತಣಿಸಬಹುದೇ ಹೊರತು, ಜನಸಾಮಾನ್ಯರ ಬದುಕನ್ನು ಹಸನು ಮಾಡಲಾರವು, ಬದಲಿಗೆ ಅದನ್ನು ಮತ್ತಷ್ಟು ಸಂಕಟಮಯಗೊಳಿಸುತ್ತವೆ ಎಂದು ಈ ದೇಶಗಳ ಜನರು ತಮ್ಮ ಸ್ವಂತ ಅನುಭವಗಳಿಂದ ಅರಿಯುತ್ತಿರುವಾಗಲೇ, ಅದಕ್ಕೆ ಜನಪರವಾದ ಪಯರ್ಾಯ ಅಭಿವೃದ್ಧಿ ಮಾರ್ಗ ಇದೆ ಎಂದು ಲ್ಯಾಟಿನ್ ಅಮೆರಿಕಾದ ದೇಶಗಳು ತೋರಿಸಿ ಕೊಡುತ್ತಿವೆ. 

ಇನ್ನೊಂದೆಡೆ 2008ರಲ್ಲಿ ಅಮೆರಿಕಾ ಮತ್ತು ಇತರ ಮುಂದುವರೆದ ಪಾಶ್ಚಿಮಾತ್ಯ ದೇಶಗಳನ್ನು ಅಲುಗಾಡಿಸಿ ಬಿಟ್ಟ ಜಾಗತಿಕ ಹಣಕಾಸು ಕುಸಿತದ ಬಿಕ್ಕಟ್ಟು ಒಂದೆಡೆ ಬಂಡವಾಳಶಾಹಿ ವಿಜಯೋತ್ಸಾಹವನ್ನು  ತಣ್ಣಗಾಗಿಸಿ, ಅದರ ಸ್ಥಾನದಲ್ಲಿ ಆಳುವ ವರ್ಗಗಳ ನಡುವೆ  ಬಂಡವಾಳಶಾಹಿಯ ಭವಿಷ್ಯದ ದಾರಿಯ ಬಗ್ಗೆ ಚರ್ಚೆ ನಡೆಯುವಂತೆ ಮಾಡಿದೆ. ಇನ್ನೊಂದೆಡೆ,  ತಮ್ಮ ಆರ್ಥಿಕ ಹಕ್ಕುಗಳಿಗಾಗಿ ಮತ್ತು ತಾವು ಈ ಹಿಂದೆ ಗಳಿಸಿದ್ದ ಹಕ್ಕುಗಳ ರಕ್ಷಣೆಗಾಗಿ ವಿಶ್ವಾದ್ಯಂತ ಹೆಚ್ಚು ಹೆಚ್ಚು ಜನತೆ ಪ್ರತಿಭಟನೆಗಳಿಗೆ ಇಳಿಯುತ್ತಿದ್ದಾರೆ. ಅರಬ್ ಜಗತ್ತಿನಲ್ಲಿ ನಿರಂಕುಶ ಆಳ್ವಿಕೆಗಳ ವಿರುದ್ಧ ಜನತೆಯ ಬಂಡಾಯಗಳು ಪ್ರಮುಖ ರಾಜಕೀಯ ಬದಲಾವಣೆಗಳನ್ನು ತಂದಿವೆ.

'ಮಿತವ್ಯಯ'  ಎಂಬ ಮೋಸ
ಈ ಬಾರಿಯ ಬಂಡವಾಳಶಾಹಿ ಬಿಕ್ಕಟ್ಟು ಕೂಡ ಬೇಗನೇ ಪರಿಹಾರಗೊಳ್ಳುತ್ತದೆ, ಬಂಡವಾಳಶಾಹಿ ಮತ್ತೆ ಚಿಗುರಿಕೊಳ್ಳಬಲ್ಲದು ಎಂಬ ನಿರೀಕ್ಷೆ ಈ ನಾಲ್ಕು ವರ್ಷಗಳಲ್ಲಿ ಸಂಪೂರ್ಣ ಹುಸಿಯಾಗಿದೆ. ಇದು ಅನಿರೀಕ್ಷಿತವೇನಲ್ಲ. ಏಕೆಂದರೆ ಈ ನವ-ಉದಾರವಾದಿಗಳು ಈ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಿರುವುದು ಕೂಡ ಅದೇ ವಿಫಲ ನವ-ಉದಾರವಾದಿ ಚೌಕಟ್ಟಿನಲ್ಲಿಯೇ. ಸಬ್ಪ್ರೈಮ್ ಅಂದರೆ ಅಪಾತ್ರ ಸಾಲಗಳ ಮೂಲಕ ಈ ಬಿಕ್ಕಟ್ಟನ್ನು ತಂದ ಕಾರ್ಪೋರೇಟ್ಗಳನ್ನು ಶಿಕ್ಷಿಸುವ ಬದಲು ಅವುಗಳಿಗೇ 'ಪಾರು ಯೋಜನೆಗಳ'(ಬೇಲೌಟ್ ಪ್ಯಾಕೇಜುಗಳ) ಹೆಸರಿನಲ್ಲಿ ಅಗಾಧ ಹಣವನ್ನು ಕೊಡಮಾಡಿ ಈ ಬಿಕ್ಕಟ್ಟನ್ನು ಪರಿಹರಿಸಲು ಪ್ರಯತ್ನಿಸಲಾಯಿತು. ಸರಕಾರಗಳು ಸಾಲಗಳನ್ನೆತ್ತಿ ಸಂಗ್ರಹಿಸಿದ ಮೊತ್ತಗಳಿಂದ ಕೊಟ್ಟ ಈ ಬೇಲೌಟುಗಳಿಂದಾಗಿ ಹಲವಾರು ದೇಶಗಳಲ್ಲಿ ಸರಕಾರಗಳು ನಿಭಾಯಿಸಲಾಗದಂತಹ ಹಣಕಾಸು ಕೊರತೆಗಳಲ್ಲಿ ಸಿಲುಕಿ ಕೊಂಡವು. ಹೀಗೆ ಕಾರ್ಪೋರೇಟುಗಳ ದಿವಾಳಿಗಳನ್ನು ಸರಕಾರಗಳ ಸಾರ್ವಭೌಮ ದಿವಾಳಿಗಳಾಗಿ ಪರಿವರ್ತಿಸಲಾಯಿತು. ಹೀಗೆ ಸಾರ್ವಭೌಮ ದಿವಾಳಿಗಳ ಬೆದರಿಕೆ ಉಂಟಾದಾಗ, ಸರಕಾರದ ಖರ್ಚುಗಳನ್ನು ತೀವ್ರವಾಗಿ ಇಳಿಸಬೇಕಾದ ಪ್ರಮೇಯ ಉಂಟಾಯಿತು. ಶ್ರೀಮಂತ ವಿಭಾಗಗಳ ಸವಲತ್ತುಗಳನ್ನು ಮುಟ್ಟಲು ಇವರ ನವ-ಉದಾರವಾದದಲ್ಲಿ ಅವಕಾಶವಿಲ್ಲವಾದ್ದರಿಂದ ಇದನ್ನು ಸರಕಾರ ಮಾಡುವ ಸಾಮಾಜಿಕ ಖರ್ಚುಗಳಲ್ಲಿ  ತೀವ್ರವಾದ ಕಡಿತಗಳನ್ನು ಹೇರುವ ಮೂಲಕ ಮತ್ತು ದುಡಿಯುವ ಜನಗಳ ಮೇಲೆ ಇನ್ನಷ್ಟು ಭಾರವಾದ ಹೊರೆಗಳನ್ನು ಹಾಕುವ ಮೂಲಕ ಮಾತ್ರವೇ ಸಾಧ್ಯವಿತ್ತು. ಆದ್ದರಿಂದಲೇ ದುಡಿಯುವ ಜನಗಳ ಸಂಬಳಗಳ ಸ್ತಂಭನ, ಕೆಲಸದ ಗಂಟೆಗಳ ಹೆಚ್ಚಳ, ನಿವೃತ್ತಿ ಸೌಲಭ್ಯಗಳನ್ನು ಅರ್ಧಕ್ಕಿಳಿಸುವುದು ಮುಂತಾದ ಕ್ರಮಗಳನ್ನು ತರಲಾಯಿತು ಇವನ್ನು ಅವರು 'ಮಿತವ್ಯಯ'ದ ಕ್ರಮಗಳೆಂದು ಕರೆಯುತ್ತಾರೆ. 
ಸಹಜವಾಗಿಯೇ ಇಂತಹ 'ಮಿತವ್ಯಯ'ಗಳ ಮೂಲಕ ತಾವೇ ತಂದ ಬಿಕ್ಕಟ್ಟಿನ ಹೊರೆಯನ್ನು ಸಾಮಾನ್ಯ ಜನರಿಗೆ ವರ್ಗಾಯಿಸಲು ಅಂತರರಾಷ್ಟ್ರೀಯ ಹಣಕಾಸು ಬಂಡವಾಳ ಮತ್ತು ಆಳುವ ವರ್ಗಗಳು ತೆಗೆದುಕೊಂಡಿರುವ ಕ್ರಮಗಳಿಂದಾಗಿ ಅಮೇರಿಕಾ, ಯೂರೋಪ್ ಮತ್ತು ಮುಂದುವರಿದ ಬಂಡವಾಳಶಾಹಿ ರಾಷ್ಟ್ರಗಳಲ್ಲಿ ಸಂಘರ್ಷಗಳು ಮತ್ತು ಹೋರಾಟಗಳು ಭುಗಿಲೆದ್ದಿವೆ. ಯೂರೋಪ್ನಲ್ಲಿ ಸಾಲ ಬಿಕ್ಕಟ್ಟಿನ ಕೇಂದ್ರ ಬಿಂದುವಾದ ಗ್ರೀಸ್ನಲ್ಲಿ, ಕಳೆದೆರಡು ವರ್ಷಗಳಿಂದ ನಿರಂತರವಾದ ಪ್ರತಿಭಟನೆಗಳು ಮತ್ತು ಸಾರ್ವತ್ರಿಕ ಮುಷ್ಕರಗಳು ನಡೆಯುತ್ತಿವೆ. ಸ್ಪೈನ್ ದೇಶದಲ್ಲಿ ಮುಖ್ಯವಾಗಿ ಯುವ ಜನತೆಯ ಬೃಹತ್ ಹೋರಾಟಗಳು  ನಡೆದಿದ್ದರೆ, ಪೋರ್ಚುಗಲ್, ಇಟಲಿ, ಫ್ರಾನ್ಸ್, ಬ್ರಿಟನ್ ಮತ್ತು ಇತರ ದೇಶಗಳಲ್ಲಿ ಕಾರ್ಮಿಕರ ಬೃಹತ್ ಸಾರ್ವತ್ರಿಕ ಮುಷ್ಕರಗಳು ನಡೆದಿವೆ. ಶಿಕ್ಷಣಕ್ಕೆ ಸಾರ್ವಜನಿಕ ವೆಚ್ಚದಲ್ಲಿ ಕಡಿತ ಮತ್ತು ಬೋಧನಾ ಶುಲ್ಕಗಳ ಹೆಚ್ಚಳದ ವಿರುದ್ಧದ ಹೋರಾಟಗಳಲ್ಲಿ ವಿದ್ಯಾರ್ಥಿ-ಯುವಜನರು  ಮುಂಚೂಣಿಯಲ್ಲಿದ್ದಾರೆ.

ಮೇದಿನ 2012 
ಈ ಹಿನ್ನೆಲೆಯಲ್ಲಿ ಅಂತರ್ರಾಷ್ಟ್ರೀಯ ಕಾರ್ಮಿಕ ದಿನವಾಗಿ ಕಳೆದ ಒಂದು ಶತಮಾನಕ್ಕೂ ಹೆಚ್ಚು ಸಮಯದಿಂದ ಜಗತ್ತಿನಾದ್ಯಂತ ಆಚರಿಸುತ್ತಿರುವ ಮೇ ದಿನ ಈ ವರ್ಷ ಹೊಸ ಅರ್ಥಪಡೆದುಕೊಂಡಂತೆ ಕಾಣುತ್ತಿದೆ. ಇದು ಅಂತರ್ರಾಷ್ಟ್ರೀಯ ಹಣಕಾಸು ಬಂಡವಾಳ ಹುಟ್ಟು ಹಾಕಿದ ಜಾಗತಿಕ ಆಥರ್ಿಕ ಬಿಕ್ಕಟ್ಟಿನ ಅವಧಿಯಲ್ಲಿನ ಮೊದಲ ಮೇದಿನವೇನೂ ಅಲ್ಲವಾದರೂ, ಈ ಬಿಕ್ಕಟ್ಟಿಗೆ ಬಂಡವಾಳಶಾಹಿಯ ಭದ್ರಕೋಟೆಯೆನಿಸಿದ ಅಮೆರಿಕಾ ಸಂಯುಕ್ತ ಸಂಸ್ಥಾನಗಳಲ್ಲೇ ಈ ಬಾರಿ ಹೊಸ ಸ್ಪಂದನೆ ದೊರೆತಿದೆ. 


'ನಾವು 99%, ಮೇ ದಿನದಂದು ಪುನಃ ವಾಲ್ಸ್ಟ್ರೀಟ್ ವಶಪಡಿಸಿಕೊಳ್ಳುತ್ತೇವೆ'-ಈ ಘೋಷಣೆ ಈ ವರ್ಷದ ಮೇ ದಿನದ ವಿಶೇಷವಾಗಿತ್ತು.  ಸಪ್ಟೆಂಬರ್ನಲ್ಲಿ ಈಜಿಪ್ಟಿನ ರಾಜಧಾನಿ ಕೈರೋ ಮತ್ತು ಟ್ಯುನೀಸಿಯಾದ ಟ್ಯುನಿಸ್ನಲ್ಲಿ  ಅರಳಿದ 'ಅರಬ್ ವಸಂತ'ದ ಸ್ಫೂರ್ತಿಯಿಂದ ಅಮೆರಿಕದಲ್ಲಿ ಆರಂಭವಾಗಿ ಜಗತ್ತಿನ 150ಕ್ಕೂ ಹೆಚ್ಚು ನಗರಗಳಿಗೆ ಹಬ್ಬಿದ 'ವಾಲ್ ಸ್ಟ್ರೀಟ್ ವಶಪಡಿಸಿಕೊಳ್ಳಿ' (Occupy Wallstreet) ಚಳುವಳಿ ಅಮೆರಿಕದಲ್ಲಿ ಪೋಲಿಸರ ಸತತ ದಾಳಿ, ಚಳಿಗಾಲ ಮತ್ತು ಸೈದ್ಧಾಂತಿಕ-ಸಂಘಟನಾ ಕೊರತೆಗಳಿಂದ ಬಹಳ ಮಟ್ಟಿಗೆ ತಣ್ಣಗಾಗಿತ್ತು. ಕಳೆದ ತಿಂಗಳು ಈ ಚಳುವಳಿಯಲ್ಲಿ ಮೂಡಿಬಂದ ಗುಂಪುಗಳು ಮೇ 1 ರಂದು ಜಗತ್ತಿನಾದ್ಯಂತ ಈ ಚಳುವಳಿಯ ಪುನಶ್ಚೇತನಕ್ಕೆ ಮತ್ತು ಬ್ಯಾಂಕು-ಕಾರ್ಪೋರೆಟ್ಗಳ ಮೇಲೆ ಪುನಃ ಸತತ ದಾಳಿ ಆರಂಭಿಸಬೇಕೆಂದು ಕರೆ ಕೊಟ್ಟಿದ್ದವು. ಮೇ ದಿನದ ಹುಟ್ಟು ದೇಶವಾದರೂ, ಆ ದಿನವನ್ನು ಹೋರಾಟದ ದಿನವಾಗಿ ಆಚರಿಸುವ ಸಂಪ್ರದಾಯ ಹೋಗೇ ಬಿಟ್ಟಿದ್ದ ಅಮೆರಿಕದಲ್ಲಿ, ಮೇ ದಿನವನ್ನು ಇದಕ್ಕಾಗಿ ಆರಿಸಿಕೊಂಡಿದ್ದು ಒಂದು ಮಹತ್ವಪೂರ್ಣ ಬೆಳವಣಿಗೆ. ಮೇ ದಿನದಂದು ಅಮೆರಿಕದಲ್ಲಿ 'ಸಾರ್ವತ್ರಿಕ ಮುಷ್ಕರ'ಕ್ಕೆ (ಒ.ಡಬ್ಲ್ಯೂ.ಎಸ್.) ಕರೆ ಕೊಟ್ಟಿದ್ದು ಇನ್ನೂ ಹೆಚ್ಚು ಮಹತ್ವದ್ದಾಗಿತ್ತು. 
ಪೂರ್ವದ (ಆಸ್ಟ್ರೇಲಿಯಾದ) ಸಿಡ್ನಿಯಿಂದ ಪಶ್ಚಿಮದ (ಅಮೆರಿಕದ) ಸ್ಯಾನ್ಫ್ರಾನ್ಸ್ಸಿಸ್ಕೊವರೆಗೆ ಅಭಿವೃದ್ಧಿ ಹೊಂದಿರುವ ಬಂಡವಾಳಶಾಹಿ ದೇಶಗಳ ನೂರಾರು ನಗರಗಳಲ್ಲಿ 'ನಾವು 99%, ಮೇದಿನದಂದು ಪುನಃ ವಾಲ್ಸ್ಟ್ರೀಟ್ ವಶಪಡಿಸಿಕೊಳ್ಳುತ್ತೇವೆ' ಎಂಬ ಯುದ್ಧಘೋಷಣೆ ಮೇ ದಿನದ ಕಾಮರ್ಿಕರ ಪ್ರದರ್ಶನಗಳೊಂದಿಗೆ ಮಿಳಿತವಾಗಿ ಮಾರ್ದನಿಗೊಂಡಿತು. ಅಮೆರಿಕದಲ್ಲಿ ಸಾರ್ವತ್ರಿಕ ಮುಷ್ಕರಕ್ಕೆ ರಾಷ್ಟ್ರಮಟ್ಟದ ಕಾರ್ಮಿಕ ಸಂಘಟನೆಗಳು ಕರೆ ಕೊಡದಿದ್ದರೂ, ಹಲವಾರು ಕಡೆ ಸ್ಥಳೀಯ ಯೂನಿಯನ್ನುಗಳು ಮುಷ್ಕರಕ್ಕೆ ಕರೆ ಕೊಟ್ಟವು. ಮುಷ್ಕರಗಳೇನೋ ದೊಡ್ಡ ಪ್ರಮಾಣದಲ್ಲಿ ನಡೆಯಲಿಲ್ಲ. ಆದರೆ ಮೇ ದಿನದ ಪ್ರದರ್ಶನಗಳು ಅಮೆರಿಕದಲ್ಲಿ ದೊಡ್ಡ ರೀತಿಯಲ್ಲಿ ನಡೆದವು ಎನ್ನುವುದೇ ದೊಡ್ಡ ಸಾಧನೆ.  ಈ ಮೇದಿನದ ಭಾರೀ ಪ್ರದರ್ಶನಗಳು ಎಷ್ಟರ ಮಟ್ಟಿಗೆ 'ವಾಲ್ ಸ್ಟ್ರೀಟ್ ವಶಪಡಿಸಿಕೊಳ್ಳಿ' ಚಳುವಳಿಯನ್ನು ಪುನಶ್ಚೇತನಗೊಳಿಸುತ್ತವೆ ಎಂದು ಕಾದು ನೋಡಬೇಕು. ಅಧ್ಯಕ್ಷೀಯ ಚುನಾವಣೆಯ ಈ ವರ್ಷ ಈ ಚಳುವಳಿ ಚುರುಕುಗೊಂಡರೆ ಅಮೆರಿಕದ ರಾಜಕೀಯ ಚಿತ್ರವೇ ಬದಲಾಗಬಹುದು.

ಜಗತ್ತಿನ ಇತರ ಭಾಗಗಳಲ್ಲಿಯೂ ಮೇದಿನ ಈ ಬಾರಿ ಹೆಚ್ಚಿನ ಹುರುಪಿನಿಂದ ಆಚರಿಸಲ್ಪಟ್ಟಿತು. ಯುರೋಪಿನಾದ್ಯಂತ ಅಲ್ಲಿಯ ಆಳುವ ವರ್ಗಗಳು 'ಮಿತವ್ಯಯ' ದ ಹೆಸರಿನಲ್ಲಿ ಜನಸಾಮಾನ್ಯರ ಸೌಲಭ್ಯಗಳನ್ನು ಕಡಿತ ಮಾಡುತ್ತಿರುವುದರ ವಿರುದ್ಧ ಮೇದಿನದಂದು ವಿಶೇಷ ಆಕ್ರೋಶ ವ್ಯಕ್ತಗೊಂಡಿತು. 

ಅಧಿಕಾರಸ್ಥರ ಸೋಲುಗಳ ಸಾಲುದೀಪ
ಮೇ ದಿನಾಚರಣೆಯ ಬೆನ್ನಹಿಂದೆಯೇ ಯುರೋಪಿನಲ್ಲಿ ನಡೆದ ಚುನಾವಣೆಗಳಲ್ಲಿ ಇದು ಸ್ಪಷ್ಟವಾಗಿ ಕಂಡು ಬಂದಿದೆ. 'ಮಿತವ್ಯಯ'ದ ಹೆಸರಿನಲ್ಲಿ ಜನಸಾಮಾನ್ಯರ ಸೌಲಭ್ಯಗಳನ್ನು ಕಡಿತ ಮಾಡುವುದನ್ನು ಒಪ್ಪಿಕೊಂಡಿರುವ ಪಕ್ಷಗಳನ್ನು ಯುರೋಪಿನ ಮತದಾರರು ನಿರ್ಣಯಕವಾಗಿ ತಿರಸ್ಕರಿಸುತ್ತಿದ್ದಾರೆ. ಯುರೋಪಿನ ಹಣಕಾಸು ಬಂಡವಾಳಿಗರನ್ನು ಮತ್ತು ಖಾಸಗಿ ಬ್ಯಾಂಕುಗಳು, ಕಾರ್ಪೋರೇಟ್ಗಳನ್ನು ಉಳಿಸಲು ಜರ್ಮನಿ, ಫ್ರಾನ್ಸ್ಸ್ನಂತಹ ಬಲಿಷ್ಟ ಯುರೋಪಿಯನ್ ದೇಶಗಳ ಆಳುವ ಮಂದಿ ತಮ್ಮ ಜನಗಳ ಮೇಲೆ ಮತ್ತು ಯುರೋಪಿನ ಇತರ ದೇಶಗಳ ಮೇಲೆ 'ಮಿತವ್ಯಯ'ದ ಕಾರ್ಯಕ್ರಮಗಳನ್ನು ಹೇರಿರುವುದಕ್ಕೆ ಈಗ ಬಲವಾದ ಪ್ರತಿಭಟನೆ ವ್ಯಕ್ತವಾಗುತ್ತಿದೆ. 

ಇಂತಹ ಪ್ರತಿಭಟನೆಗಳನ್ನು ನಿರೀಕ್ಷಿಸಿಯೇ ಗ್ರೀಸಿನಲ್ಲಿ ಚುನಾವಣೆಗಳನ್ನು ಮುಂದೂಡುವ ಪ್ರಯತ್ನಗಳು ವಿಫಲವಾದ ಮೇಲೆ ಅಲ್ಲಿ ಚುನಾವಣೆ ನಡೆಸಲೇ ಬೇಕಾಯಿತು. ಇದರಲ್ಲಿ 'ಮಿತವ್ಯಯ'ದ ಪರವಾಗಿರುವ ರಾಜಕೀಯ ಪಕ್ಷಗಳು ಪರಾಭವಗೊಂಡಿವೆ. ಇನ್ನೊಂದೆಡೆ ಉಗ್ರ ಬಲಪಂಥೀಯ ಪಕ್ಷಗಳೂ ಜನಗಳ ಅಸಂತೃಪ್ತಿಯ ಪ್ರಯೋಜನವನ್ನು ಸ್ವಲ್ಪ ಮಟ್ಟಿಗೆ ಪಡೆದಿವೆ. ಆದರೆ ಯುರೋಪಿನ ಜನಗಳ ಒಲವು ಎಡಶಕ್ತಿಗಳತ್ತ ವಾಲಿರುವುದು ಸ್ಪಷ್ಟವಾಗಿ ಕಾಣುತ್ತಿದೆ. 'ಮಿತವ್ಯಯ'ದ ಪರವಾಗಿರುವ ಆಳುವ ಪಕ್ಷಗಳ ಕೂಟ ಬಹುಮತ ಪಡೆಯುವಲ್ಲಿ ವಿಫಲವಾಗಿದೆ. ಸದ್ಯ ಅಲ್ಲಿ ಜರ್ಮನಿ ಮತ್ತು ಫ್ರಾನ್ಸಿನ ಒತ್ತಡಗಳಿಗೆ ತಲೆಬಾಗಿ 'ಮಿತವ್ಯಯ'ದ ಕಾರ್ಯಕ್ರಮಗಳನ್ನು ಅನುಸರಿಸಬಹುದಾದ ಪಕ್ಷಗಳು ಸರಕಾರ ರಚಿಸುವ ಸ್ಥಿತಿಯಲ್ಲಿಲ್ಲ. ಇತರರು ಸರಕಾರ ರಚಿಸುವುದಕ್ಕೆ ಜರ್ಮನಿ, ಫ್ರಾನ್ಸ್ ಮುಂತಾದ ಬಲಿಷ್ಟ ದೇಶಗಳ ಆಳುವ ಮಂದಿಗಳು ಬಿಡಲಾರವು. ಇಂತಹ ಅಸ್ಥಿರತೆಯ ವಾತಾವರಣದಲ್ಲಿ ಗ್ರೀಸಿನಲ್ಲಿ ಮತ್ತೆ ಚುನಾವಣೆ ನಡೆಯಬೇಕಾಗಿ ಬರಬಹುದು, ಹಾಗಾದಲ್ಲಿ ಎಡಪಕ್ಷಗಳಿಗೆ ನಿರ್ಣಾಯಕ ಬೆಂಬಲ ಸಿಗಬಹುದು ಎಂದು ನಿರೀಕ್ಷಿಸಲಾಗುತ್ತಿದೆ.

ಇತ್ತ ಫ್ರಾನ್ಸ್ಸಿನಲ್ಲೇ ಸೋಶಲಿಸ್ಟ್ ಪಕ್ಷದ ಅಭ್ಯರ್ಥಿ 18 ವರ್ಷಗಳ ನಂತರ ಮತ್ತೆ ಅಧ್ಯಕ್ಷರಾಗಿ ಚುನಾಯಿತರಾಗಿರುವುದು ಅಂತರ್ರಾಷ್ಟ್ರೀಯ ಹಣಕಾಸು ಬಂಡವಾಳಿಗರಿಗೆ ಭಾರೀ ಆಘಾತವುಂಟು ಮಾಡಿದೆ. ಈ ಹಿಂದೆ ಫ್ರಾನ್ಸಿನ ಸೋಶಲಿಸ್ಟ್ ಪಕ್ಷ ಅಧಿಕಾರಕ್ಕೆ ಬಂದಾಗ ಬಂಡವಾಳಶಾಹಿ ಶಕ್ತಿಗಳೊಂದಿಗೆ  ರಾಜಿ ಮಾಡಿಕೊಳ್ಳುವ ಪ್ರವೃತ್ತಿಯನ್ನು ತೋರಿದ್ದರೂ, ಈ ಬಾರಿ ಅದು ಬಯಸಿದರೂ ಹಾಗೆ ಮಾಡಲಾಗದಂತಹ ಸನ್ನಿವೇಶ ಉಂಟಾಗಿದೆ. ಹಣಕಾಸು ಬಂಡವಾಳಿಗರನ್ನು ಉಳಿಸಲು ಜನಸಾಮಾನ್ಯರ ಸೌಲಭ್ಯಗಳನ್ನು ತೀವ್ರವಾಗಿ ಕಡಿತ ಮಾಡುವ 'ಮಿತವ್ಯಯ'ದ ಕಾರ್ಯಕ್ರಮಗಳು ಯುರೋಪಿಗೆ ಅನಿವಾರ್ಯವೇನೂ ಅಲ್ಲ ಎಂದು ಈಗ ಚುನಾಯಿತರಾಗಿರುವ ಸೋಶಲಿಸ್ಟ್ ಅಧ್ಯಕ್ಷರು ಸ್ಪಷ್ಟವಾಗಿ ಸಾರಿದ್ದಾರೆ. ಅತ್ತ ಜರ್ಮನಿಯಲ್ಲೂ ಅತ್ಯಂತ ಹೆಚ್ಚು ಜನಸಂಖ್ಯೆಯ ಪ್ರಾಂತ್ಯ ಉತ್ತರ ರೈನ್-ವೆಸ್ಟ್ಫಾಲಿಯಾದಲ್ಲಿ ಆಳುವ ಬಲಪಂಥೀಯ ಕ್ರಿಶ್ಚಿಯನ್ ಡೆಮಾಕ್ರೆಟಿಕ್ ಪಕ್ಷ ಮಧ್ಯ-ಎಡಪಂಥೀಯ ಶಕ್ತಿಗಳ ಎದುರು ಭಾರೀ ಪರಾಭವನ್ನು ಉಂಡಿದೆ. ನೆದರ್ಲೆಂಡಿನಲ್ಲಿ ಕೂಡ 'ಮಿತವ್ಯಯ'ದ ಪರವಾಗಿರುವ ಪಕ್ಷದ ಸರಕಾರ ಕುಸಿದು ಮತ್ತೆ ಚುನಾವಣೆಗಳು ನಡೆಯಬೇಕಾಗಿದೆ. ಯುರೋಪಿನ ಆಳುವ ವರ್ಗಗಳು ಮತ್ತು ಜಾಗತಿಕ ಹಣಕಾಸು ಬಂಡವಾಳಿಗರು ಹೇರಿರುವ ತಮ್ಮನ್ನು ಉಳಿಸಿಕೊಳ್ಳಲು ಜನಸಾಮಾನ್ಯರ ಮೇಲೆ 'ಮಿತವ್ಯ'ಯ ದ ಹೆಸರಿನಲ್ಲಿ ದಾಳಿಗಳನ್ನು ಆರಂಭಿಸಿದ ಮೇಲೆ ಉರುಳಿದ ಯುರೋಪಿಯನ್ ಸರಕಾರಗಳಲ್ಲಿ ಬಲಪಂಥೀಯ ಸಾರ್ಕೋಝಿ ಸರಕಾರ ಹನ್ನೊಂದನೆಯದ್ದು ಎಂಬುದು ಗಮನಾರ್ಹ.

ನಿಜ, ಯುರೋಪಿನ ಈ ಚುನಾವಣೆಗಳಲ್ಲಿ ಈ 'ದೋಷಯುಕ್ತ ವ್ಯವಸ್ಥೆ'ಗೆ ಒಂದು ಬಲಿಷ್ಟ ರಾಜಕೀಯ ಪರ್ಯಾಯ ಹೊರ ಹೊಮ್ಮಿಲ್ಲ. ಇನ್ನೊಂದೆಡೆ, ಬಲಪಂಥೀಯ ಶಕ್ತಿಗಳ ಬಲವೂ ಹೆಚ್ಚಿರುವ ಆತಂಕಕಾರಿ ಬೆಳವಣಿಗೆಯೂ ಕಾಣ ಬಂದಿದೆ. ಆದರೂ ಜನತೆಯನ್ನು ಇನ್ನಷ್ಟು ಆರ್ಥಿಕ ದಾಳಿಗಳಿಂದ ರಕ್ಷಿಸುವುದು ಮತ್ತು ರಾಕ್ಷಸೀ ಫ್ಯಾಸಿಸ್ಟ್ ಶಕ್ತಿಗಳು ತಲೆಯೆತ್ತದಂತೆ ತಡೆಯುವುದು ಒಂದು ರಾಜಕೀಯ ಪರ್ಯಾಯದ ಬಲದಿಂದ ಮಾತ್ರ ಸಾಧ್ಯ, ಅದನ್ನು ಸಮಾಜವಾದ ಮಾತ್ರವೇ ಕೊಡಬಲ್ಲದು ಎಂಬುದು ಹೆಚ್ಚೆಚ್ಚು ಸ್ಪಷ್ಟವಾಗುತ್ತಿದೆ.

ಆರಂಭದಲ್ಲಿ ಹೇಳಿದಂತೆ, ಎರಡು ದಶಕಗಳ ಹಿಂದೆ ಸೋವಿಯೆತ್ ಒಕ್ಕೂಟ ಕುಸಿದಾಗ ಇನ್ನು ಸಮಾಜವಾದದ ಕತೆ ಮುಗಿಯಿತು ಎಂದು ಚಪ್ಪಾಳೆ ತಟ್ಟಿ ಕೇಕೆ ಹಾಕಿದವರು ಈಗ ಕಕ್ಕಾಬಿಕ್ಕಿಯಾಗಿದ್ದಾರೆ. ಪ್ರಖ್ಯಾತ ಎಡಪಂಥೀಯ ಅರ್ಥಶಾಸ್ತ್ರಜ್ಞ ಪ್ರೊ, ಪ್ರಭಾತ್ ಪಟ್ನಾಯಕ್ ಹೇಳಿರುವಂತೆ, ಬಂಡವಾಳದ ಆಳ್ವಿಕೆಯ ವಿರುದ್ಧ ಒಂದು ಹೊಸ ಕ್ರಾಂತಿಕಾರಿ ಅಲೆ ಎದ್ದು ಬರುವ ಸಂಕೇತಗಳು ಕಾಣುತ್ತಿವೆ, ನಾವೀಗ 'ಇತಿಹಾಸದ ಅಂತ್ಯ'ದಲ್ಲಿ ಇಲ್ಲ, ಬದಲಾಗಿ ಒಂದು ಹೊಸ ಇತಿಹಾಸದ ಆರಂಭದಲ್ಲಿ ಇದ್ದೇವೆ ಎಂಬುದು ಹೆಚ್ಚೆಚ್ಚು ಸ್ಪಷ್ಟವಾಗಿ ಕಾಣ ಬರುತ್ತಿದೆ.
                                                                                                               - ವೇದರಾಜ್.ಎನ್.ಕೆ


No comments:

Post a Comment