Sunday, 1 July 2012

ಪಿ.ಸಾಯಿನಾಥ್ ಬೆಂಗಳೂರಿಗೆ ಬಂದಿದ್ದಾಗ

ಜುಲೈ 1 ಪತ್ರಕರ್ತರ ದಿನಾಚರಣೆ ಅಂದು ಭಾರತದ ಪತ್ರಿಕಾ ರಂಗದ ದಿಕ್ಕನ್ನು ಬದಲಾಯಿಸಿದ, ಪತ್ರಿಕೋಧ್ಯಮಕ್ಕೆ ಹೊಸ ಭಾಶ್ಯೆ ಬರೆದ ಪಿ.ಸಾಯಿನಾಥ್ ರವರು ಬೆಂಗಳೂರಿಗೆ ಬಂದಿದ್ದರು. ಅವರು ಇಂಗ್ಲೀಷ್ ನಲ್ಲಿ ಬರೆದಿರುವ 'ಎವರಿ ಬಡಿ ಲವ್ಸ್ ದಿ ಡ್ರಾಟ್' ಪುಸ್ತಕವನ್ನು ಸೃಜನಶೀಲ ಬರಹಗಾರರಾದ ಜಿ.ಎನ್.ಮೋಹನ್ ಕನ್ನಡಕ್ಕೆ ಅನುವಾದಿಸಿದ್ದ 'ಬರ ಅಂದ್ರೆ ಎಲ್ಲರಿಗೂ ಇಷ್ಟ' ಪುಸ್ತಕ ಬೆಂಗಳೂರಿನ ಗಾಂಧಿ ಭವನದಲ್ಲಿ ಕಿಕ್ಕಿರಿ ಅಭಿಮಾನಿಗಳ ನಡುವೆ ಅಭನವ ಪ್ರಕಾಶನ ಬಿಡುಗೊಡೆಗೊಳಿತು. ಪುಸ್ತಕವನ್ನು ಬಿಡುಗಡೆಮಾಡಿದ ನಂತರ ಪಿ.ಸಾಯಿನಾಥ್ ರವರ ಕುರಿತಾದ 'ನ್ಯೂರೋ ಗೆಸ್ಟ್' ಸಾಕ್ಷಚಿತ್ರ ಪ್ರದರ್ಶನವಾಯಿತು. ಈ ಸಾಕ್ಷ ಚಿತ್ರವನ್ನು ನೋಡಿದಮೇಲಂತೂ ಪಿ.ಸಾಯಿನಾಥ್ ರ ಕೆಲಸದ ವೈಕರಿ ಅವರು ಬೆಳೆದು ಬಂದ ರೀತಿ ಮತ್ತು ದೇಶದ ದುಡಿಯುವ ವರ್ಗದ ಮೇಲೆ ಅದರಲ್ಲೂ ರೈತ ಸಮುದಾಯದ ಮೇಲೆ ಅವರಿಟ್ಟಿರುವ ಅಪಾರ ಶ್ರದ್ದೆ, ತಮ್ಮ ಬರಹಗಳ ಮೂಲಕ ರೈತ ಸಮುದಾಯದ ನೈಜ ಸಮಸ್ಯೆಗಳನ್ನು ಮತ್ತು ಅವರು ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವಾದ ಅಂಶಗಳನ್ನು ಪತ್ರಿಕೆಗಳಿಗೆ ಬರೆಯುತ್ತಲೇ ಅವರು ಬೆಳದರು, ಆಮೂಲಕ ಆಳುವ ಸರ್ಕಾರಗಳ ಬೇಜವಾಭ್ದಾರಿತನವನ್ನು ಬಯಲಿಗೆಳೆಯುತ್ತ ಜವಾಭ್ದಾರಿಗಳ ಬಗ್ಗೆ ಎಚ್ಚರಿಸಿಕೊಂಡು ಭಾರತದ ಪತ್ರಿಕೋಧ್ಯಮದಲ್ಲೇ ಒಂದು ವಿಭಿನ್ನ ದೃಷ್ಟಿಕೋನವನ್ನು ಕೊಡುವ ಮೂಲಕ ಯು ಪತ್ರಕರ್ತರನ್ನು ಗ್ರಾಮೀಣ ಬಡ ಜನರ ಬಳಿಗೆ ಸೆಳೆದವರು ಪಿ.ಸಾಯಿನಾಥ್. 
ಇವರು ಮಾತನಾಡುತ್ತಾ ಜಾಗತೀಕರಣದ ಪರಿಣಾಮವಾಗಿ ಮಾಧ್ಯಮ ಉಧ್ಯಮವಾಗಿ ಬದಲಾಗಿದೆ, ಅಲ್ಲಿ ಎಲ್ಲರಿಗೂ ಲಾಭ ಮಾಡುವ ಉದ್ದೇಶ ಬಿಟ್ಟರೆ  ಜನರ ಸಮಸ್ಯೆಗಳನ್ನು ಕುರಿತು ವರದಿಗಳನ್ನು ಮಾಡುವ ಯಾವ ಉದ್ದೇಶವೂ ಇಲ್ಲ. ಅದಕ್ಕಾಗಿಯೇ ದೇಶದ ಯಾವುದೇ ದೃಶ್ಯಮಾಧ್ಯಮವಾಗಲೀ ಅಥವಾ ಮುದ್ರಣ ಮಾಧ್ಯಮವಾಗಲೀ ಕೃಷಿ, ನಿರುದ್ಯೋಗದಂತಹ ವಿಷಯಗಳನ್ನು ಒರತುಪಡಿಸಿ ಎಲ್ಲಾ ವಿಚಾರಗಳಗೂ ಪ್ರತ್ತೇಕ ವರದಿಗಾರರನ್ನು ನೇಮಿಸಿರುತ್ತಾರೆ ಎಂದರು.
ನನಗೆ ಪಿ.ಸಾಯುನಾಥ್ ತುಂಬ ಇಷ್ಟವಾಗುವುದು ಅವರು ಯಾವುದೇ ಒಂದು ಸಮಸ್ಯೆಯನ್ನು ನೋಡುವ ರೀತಿ ಮತ್ತು ಅದರ ಮೂಲಕ ಸಮಸ್ಯೆಯ ಆಳಕ್ಕಿಳಿದು ಅದನ್ನು ಪ್ರತ್ಯಕ್ಷವಾಗಿ ಕಂಡು ಅದನ್ನು ಧಾಖಲಿಸುವ ವಿಧಾನ ಮತ್ತು ಅವರು ಸಮಾಜದ ಎರಡು ತುದಿಗಳಲ್ಲಿ ನಡೆದಿರುವ ಘಟನೆಗಳನ್ನು ಆದರಿಸಿ ಅವುಗಳ ವೈರುಧ್ಯವನ್ನು ಬಹಳ ಸೊಗಸಾಗಿ ವಿವರಿಸುತ್ತಾರೆ ಉದಾಹರಣೆಗೆ ಅವರು ಯಾವಾಗಳೂ ಮಾತನಾಡುವಹಾಗೆ ಮಹಾರಷ್ಟ್ರದ ರಾಜಧಾನಿ ಬಾಂಬೆಯಲ್ಲಿ ಕಾಟನ್ ಬಟ್ಟೆ ಕುರಿತು ಲ್ಯಾಕ್ಮಿ ಕಂಪನಿಯಿಂದ ಫ್ಯಾಷನ್ ಶೋ ಆಯೋಜಿಸಲಾಗಿತ್ತು ಅದನ್ನು ವರದಿಮಾಡಲೆಂದು ದೇಶ-ವಿದೇಶಗಳಿಂದ 200 ಕ್ಕೂ ಹೆಚ್ಚು ಪತ್ರಕರ್ತರು, ಚಾಯಾಚಿತ್ರಗಾರರು ನಾಮುಂದು ತಾಮುಂದು ಎಂದು ಮುಗಿಬೀಳುತ್ತಿದ್ದರು. ಆದರೆ ಅದೇ ರಾಜ್ಯದ ಫ್ಯಾಶನ್ ಶೋ ನಡೆಯುವ 300 ಕಿ.ಮಿ ದೂರದಲ್ಲಿ ರುವ ವಿದರ್ಬಾದಲ್ಲಿ ರೈತರು ಅತ್ತಿ ಬೆಳೆದು ಬೆಲೆಸಿಗದೆ ಸಾಲಮಾಡಿ ಆತ್ಮಹತ್ಯೆಮಾಡಿಕೊಂಡಿದ್ದರೆ ಅದನ್ನು ವರದಿಮಾಡಲು ಕೇವಲ 5 ಜನ ಪತ್ರಕರ್ತರಿದ್ದರಂತೆ. ಅಂದರೆ ಭಾರತದ ಪತ್ರಿಕೋಧ್ಯಮದ ಆಧ್ಯತೆ ಏನೆಂದು ಕೊತ್ತಾತಿತ್ತಲ್ಲ. ಇದನ್ನು ಸಮಾಜದ ಮುಂದೆ ಅಂಕಿಸಂಖ್ಯೆ ಸಮೇತ ಸಾದರಪಡಿಸುವುದರಲ್ಲಿ ಸಾಯಿನಾಥ್ ಎಲ್ಲರಿಗೂ ಮಾದರಿಯಾಗಿದ್ದಾರೆ.

ಸಮಾಜವಾದದ ಕತೆ ಮುಗಿಯಲಿಲ್ಲ, ಹೊಸದಾಗಿ ಆರಂಭವಾಗಿದೆ


ರಡು ದಶಕಗಳ ಹಿಂದೆ ಸೋವಿಯೆತ್ ಒಕ್ಕೂಟ ವಿಘಟನೆ ಹೊಂದಿದಾಗ ನಮಗೆಲ್ಲ ದೊಡ್ಡ ಆಘಾತವೇ ಆಗಿತ್ತು- ಮಾನವ ಇತಿಹಾಸದಲ್ಲಿ, ಸಮಾನತೆಗಾಗಿ ಹೋರಾಟದಲ್ಲಿ ಹೊಸ ಅಧ್ಯಾಯವನ್ನು ತೆರೆದ ದೇಶವೊಂದು ಹೀಗೇಕೆ ಕಣ್ಮರೆಯಾಯಿತು ಎಂಬ ಆಘಾತ ಮಾತ್ರವಲ್ಲ ಅದು- ಮಾನವನಿಂದ ಮಾನವನ ಶೋಷಣೆಯಿಲ್ಲದ ಸಮಾಜದ ಕನಸು ಕಟ್ಟಿ ಕೊಟ್ಟ ಸಮಾಜವಾದವೆಂಬ ಪರಿಕಲ್ಪನೆ ಕೇವಲ ಕಲ್ಪನೆಯಾಗಿಯೇ ಉಳಿಯುವಂತದ್ದೇ ಎಂಬ ಯಕ್ಷಪ್ರಶ್ನೆ  ಎದುರಾದ ಆಘಾತ ಅದು. ಆದರೆ ಇದು ಬಹಳ ಕಾಲ ಯಕ್ಷಪ್ರಶ್ನೆಯಾಗಿ ಉಳಿಯಲಿಲ್ಲ. ಮಾನವನ ಇತಿಹಾಸದಲ್ಲಿ ಎರಡು ದಶಕಗಳು ಎಂಬುದು ಬಹಳ ಸಣ್ಣ ಅವಧಿ  ತಾನೇ?
ಈ ಎರಡು ದಶಕಗಳಲ್ಲಿ ವೋಲ್ಗಾ, ಮಿಸಿಸಿಪಿಗಳಲ್ಲಿ, ಲ್ಯಾಟಿನ್ ಅಮೆರಿಕಾದ ಅಮೆಝೊನ್ ನದಿಯಲ್ಲಿ, ಈಜಿಪ್ಟಿನ ನೈಲ್ ನದಿಯಲ್ಲೂ, ನಂತರ ಯುರೋಪಿನ ರೈನ್, ಸೆನ್, ಥೇಮ್ಸ್ಗಳಲ್ಲೂ, ನಮ್ಮ ಕಾವೇರಿ-ಗಂಗೆಯಂತೆ ಬಹಳಷ್ಟು ನೀರು ಹರಿದು ಹೋಗಿದೆ. ಸಮಾಜವಾದ ಸತ್ತಿತು, ಇತಿಹಾಸ ಕೊನೆಗೊಂಡಿತು, ಬಂಡವಾಳ ವ್ಯವಸ್ಥೆಯೇ ಮಾನವ ಕುಲದ ಅಂತಿಮ ನಿಯತಿ ಎಂಬ ಆಡಂಬರದ ಮಾತುಗಳೆಲ್ಲ ಈ ಅಲ್ಪ ಅವಧಿಯಲ್ಲೆ ಇತಿಹಾಸದ ಕಸದ ಬುಟ್ಟಿ ಸೇರಿವೆ. ಇದು ದುರಾಸೆಯ ವ್ಯವಸ್ಥೆ, ಈ ವ್ಯವಸ್ಥೆಯೇ ದೋಷಯುಕ್ತ, ಅಮಾನವೀಯ, ಈ ವ್ಯವಸ್ಥೆ ಕೊನೆಗೊಳ್ಳದೆ ಮಾನವ ಕುಲಕ್ಕೆ ಮುಕ್ತಿಯಿಲ್ಲ ಎಂಬ ಘೋಷಣೆಗಳು ಮತ್ತೆ, ದ್ವಿಗುಣ ಉತ್ಸಾಹದಿಂದ ಕೇಳಿ ಬರಲಾರಂಭಿಸಿವೆ. ಈ ವ್ಯವಸ್ಥೆಯ ಪ್ರತೀಕವಾದ ವಾಲ್ ಸ್ಟ್ರೀಟ್ಅನ್ನೇ ಆಕ್ರಮಿಸಿಕೊಳ್ಳಿ, ಏಕೆಂದರೆ ಇದು 1% ಮಂದಿಗಾಗಿ ಇರುವಂತದ್ದು, ನಾವು 99% ಎಂಬ ಸ್ವತಃ ಅಮೆರಿಕಾದ ಜನತೆಯ ಕೂಗಿಗೆ ಈಗ ಇಡೀ ವಿಶ್ವವೇ ಸ್ಪಂದಿಸಲಾರಂಭಿಸಿದೆ.  

ಲ್ಯಾಟಿನ್ ಅಮೆರಿಕಾದ ಸವಾಲು
ಸೋವಿಯೆತ್ ಒಕ್ಕೂಟದ ಕುಸಿದ ಮೇಲೆ ಇನ್ನು ಮುಂದೆ ತಾನೇ ಜಗತ್ತಿನ ಏಕೈಕ ಸೂಪರ್ ಪವರ್ ಎಂದು ಅಮೆರಿಕನ್ ಆಳರಸರು ಮತ್ತು ಅಂತರ್ರಾಷ್ಟ್ರೀಯ ಹಣಕಾಸು ಬಂಡವಾಳ ಕುಣಿದಾಡಿಕೊಂಡು ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಜಾಗತೀಕರಣದ ಹೆಸರಿನಲ್ಲಿ ಕುಪ್ಪಳಿಸುತ್ತಿದ್ದಾಗ, ಇದಕ್ಕೆ ಮೊದಲು ಸಡ್ಡು ಹೊಡೆದು ನಿಂತದ್ದು ಅದುವರೆಗೆ ಅಮೆರಿಕಾ ತನ್ನ ಹಿತ್ತಿಲು ಎಂದು ಭಾವಿಸಿದ್ದ ಲ್ಯಾಟಿನ್ ಅಮೆರಿಕಾ. ತನ್ನ ಹುಟ್ಟಿನಿಂದಲೇ ಅಮೆರಿಕಾದ ಯಜಮಾನಿಕೆಗೆ ಏಕಾಂಗಿಯಾಗಿ ಸವಾಲು ಹಾಕುತ್ತಾ ಬಂದಿದ್ದ ಪುಟ್ಟ ಕ್ಯೂಬಾದಿಂದ ಸ್ಫೂರ್ತಿ ಪಡೆದ ಲ್ಯಾಟಿನ್ ಅಮೆರಿಕಾದ ದೇಶಗಳಲ್ಲಿ ಒಂದೊಂದಾಗಿ ಸಮಾಜವಾದಿ-ಒಲವಿನ ಸರಕಾರಗಳು ಅಧಿಕಾರಕ್ಕೆ ಬರಲಾರಂಭಿಸಿದವು. 

ಬಂಡವಾಳವೇ ಸರ್ವಶಕ್ತ, ಅದನ್ನು ಸಂತುಷ್ಟಗೊಳಿಸಿದರೆ ಎಲ್ಲವೂ ಸರಿಯಾಗುತ್ತದೆ, ಜನಸಾಮಾನ್ಯರಿಗೂ ಅದರ ಪ್ರಯೋಜನ ಇಳಿದು ಬರುತ್ತದೆ ಎಂದು ಪ್ರತಿಪಾದಿಸುವ ನವ-ಉದಾರವಾದ ಎಂಬ ಧೋರಣೆ ಸೋವಿಯೆತ್ ಒಕ್ಕೂಟದ ಪತನದ ನಂತರ ಉಳಿದಿರುವ ಏಕಮಾತ್ರ ಮಾರ್ಗ ಎಂದು ಭಾರತವೂ ಸೇರಿದಂತೆ ಹಲವಾರು ದೇಶಗಳ ಆಳುವ ಮಂದಿ ಈಗ ಅನುಸರಿಸುತ್ತಿರುವ ವಿಶ್ವಬ್ಯಾಂಕ್ ಮತ್ತು ಐಎಂಎಫ್ ಪ್ರತಿಪಾದಿಸುತ್ತಿರುವ ಆಥರ್ಿಕ ಧೋರಣೆಗಳು ವಾಸ್ತವವಾಗಿ ಸಾಮ್ರಾಜ್ಯಶಾಹಿ ಜಾಗತೀಕರಣದ ಧೋರಣೆಗಳು, ಅವು ಈ ದೇಶಗಳ ಶ್ರೀಮಂತರ ಲಾಭದಾಹಗಳನ್ನು ತಣಿಸಬಹುದೇ ಹೊರತು, ಜನಸಾಮಾನ್ಯರ ಬದುಕನ್ನು ಹಸನು ಮಾಡಲಾರವು, ಬದಲಿಗೆ ಅದನ್ನು ಮತ್ತಷ್ಟು ಸಂಕಟಮಯಗೊಳಿಸುತ್ತವೆ ಎಂದು ಈ ದೇಶಗಳ ಜನರು ತಮ್ಮ ಸ್ವಂತ ಅನುಭವಗಳಿಂದ ಅರಿಯುತ್ತಿರುವಾಗಲೇ, ಅದಕ್ಕೆ ಜನಪರವಾದ ಪಯರ್ಾಯ ಅಭಿವೃದ್ಧಿ ಮಾರ್ಗ ಇದೆ ಎಂದು ಲ್ಯಾಟಿನ್ ಅಮೆರಿಕಾದ ದೇಶಗಳು ತೋರಿಸಿ ಕೊಡುತ್ತಿವೆ. 

ಇನ್ನೊಂದೆಡೆ 2008ರಲ್ಲಿ ಅಮೆರಿಕಾ ಮತ್ತು ಇತರ ಮುಂದುವರೆದ ಪಾಶ್ಚಿಮಾತ್ಯ ದೇಶಗಳನ್ನು ಅಲುಗಾಡಿಸಿ ಬಿಟ್ಟ ಜಾಗತಿಕ ಹಣಕಾಸು ಕುಸಿತದ ಬಿಕ್ಕಟ್ಟು ಒಂದೆಡೆ ಬಂಡವಾಳಶಾಹಿ ವಿಜಯೋತ್ಸಾಹವನ್ನು  ತಣ್ಣಗಾಗಿಸಿ, ಅದರ ಸ್ಥಾನದಲ್ಲಿ ಆಳುವ ವರ್ಗಗಳ ನಡುವೆ  ಬಂಡವಾಳಶಾಹಿಯ ಭವಿಷ್ಯದ ದಾರಿಯ ಬಗ್ಗೆ ಚರ್ಚೆ ನಡೆಯುವಂತೆ ಮಾಡಿದೆ. ಇನ್ನೊಂದೆಡೆ,  ತಮ್ಮ ಆರ್ಥಿಕ ಹಕ್ಕುಗಳಿಗಾಗಿ ಮತ್ತು ತಾವು ಈ ಹಿಂದೆ ಗಳಿಸಿದ್ದ ಹಕ್ಕುಗಳ ರಕ್ಷಣೆಗಾಗಿ ವಿಶ್ವಾದ್ಯಂತ ಹೆಚ್ಚು ಹೆಚ್ಚು ಜನತೆ ಪ್ರತಿಭಟನೆಗಳಿಗೆ ಇಳಿಯುತ್ತಿದ್ದಾರೆ. ಅರಬ್ ಜಗತ್ತಿನಲ್ಲಿ ನಿರಂಕುಶ ಆಳ್ವಿಕೆಗಳ ವಿರುದ್ಧ ಜನತೆಯ ಬಂಡಾಯಗಳು ಪ್ರಮುಖ ರಾಜಕೀಯ ಬದಲಾವಣೆಗಳನ್ನು ತಂದಿವೆ.

'ಮಿತವ್ಯಯ'  ಎಂಬ ಮೋಸ
ಈ ಬಾರಿಯ ಬಂಡವಾಳಶಾಹಿ ಬಿಕ್ಕಟ್ಟು ಕೂಡ ಬೇಗನೇ ಪರಿಹಾರಗೊಳ್ಳುತ್ತದೆ, ಬಂಡವಾಳಶಾಹಿ ಮತ್ತೆ ಚಿಗುರಿಕೊಳ್ಳಬಲ್ಲದು ಎಂಬ ನಿರೀಕ್ಷೆ ಈ ನಾಲ್ಕು ವರ್ಷಗಳಲ್ಲಿ ಸಂಪೂರ್ಣ ಹುಸಿಯಾಗಿದೆ. ಇದು ಅನಿರೀಕ್ಷಿತವೇನಲ್ಲ. ಏಕೆಂದರೆ ಈ ನವ-ಉದಾರವಾದಿಗಳು ಈ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಿರುವುದು ಕೂಡ ಅದೇ ವಿಫಲ ನವ-ಉದಾರವಾದಿ ಚೌಕಟ್ಟಿನಲ್ಲಿಯೇ. ಸಬ್ಪ್ರೈಮ್ ಅಂದರೆ ಅಪಾತ್ರ ಸಾಲಗಳ ಮೂಲಕ ಈ ಬಿಕ್ಕಟ್ಟನ್ನು ತಂದ ಕಾರ್ಪೋರೇಟ್ಗಳನ್ನು ಶಿಕ್ಷಿಸುವ ಬದಲು ಅವುಗಳಿಗೇ 'ಪಾರು ಯೋಜನೆಗಳ'(ಬೇಲೌಟ್ ಪ್ಯಾಕೇಜುಗಳ) ಹೆಸರಿನಲ್ಲಿ ಅಗಾಧ ಹಣವನ್ನು ಕೊಡಮಾಡಿ ಈ ಬಿಕ್ಕಟ್ಟನ್ನು ಪರಿಹರಿಸಲು ಪ್ರಯತ್ನಿಸಲಾಯಿತು. ಸರಕಾರಗಳು ಸಾಲಗಳನ್ನೆತ್ತಿ ಸಂಗ್ರಹಿಸಿದ ಮೊತ್ತಗಳಿಂದ ಕೊಟ್ಟ ಈ ಬೇಲೌಟುಗಳಿಂದಾಗಿ ಹಲವಾರು ದೇಶಗಳಲ್ಲಿ ಸರಕಾರಗಳು ನಿಭಾಯಿಸಲಾಗದಂತಹ ಹಣಕಾಸು ಕೊರತೆಗಳಲ್ಲಿ ಸಿಲುಕಿ ಕೊಂಡವು. ಹೀಗೆ ಕಾರ್ಪೋರೇಟುಗಳ ದಿವಾಳಿಗಳನ್ನು ಸರಕಾರಗಳ ಸಾರ್ವಭೌಮ ದಿವಾಳಿಗಳಾಗಿ ಪರಿವರ್ತಿಸಲಾಯಿತು. ಹೀಗೆ ಸಾರ್ವಭೌಮ ದಿವಾಳಿಗಳ ಬೆದರಿಕೆ ಉಂಟಾದಾಗ, ಸರಕಾರದ ಖರ್ಚುಗಳನ್ನು ತೀವ್ರವಾಗಿ ಇಳಿಸಬೇಕಾದ ಪ್ರಮೇಯ ಉಂಟಾಯಿತು. ಶ್ರೀಮಂತ ವಿಭಾಗಗಳ ಸವಲತ್ತುಗಳನ್ನು ಮುಟ್ಟಲು ಇವರ ನವ-ಉದಾರವಾದದಲ್ಲಿ ಅವಕಾಶವಿಲ್ಲವಾದ್ದರಿಂದ ಇದನ್ನು ಸರಕಾರ ಮಾಡುವ ಸಾಮಾಜಿಕ ಖರ್ಚುಗಳಲ್ಲಿ  ತೀವ್ರವಾದ ಕಡಿತಗಳನ್ನು ಹೇರುವ ಮೂಲಕ ಮತ್ತು ದುಡಿಯುವ ಜನಗಳ ಮೇಲೆ ಇನ್ನಷ್ಟು ಭಾರವಾದ ಹೊರೆಗಳನ್ನು ಹಾಕುವ ಮೂಲಕ ಮಾತ್ರವೇ ಸಾಧ್ಯವಿತ್ತು. ಆದ್ದರಿಂದಲೇ ದುಡಿಯುವ ಜನಗಳ ಸಂಬಳಗಳ ಸ್ತಂಭನ, ಕೆಲಸದ ಗಂಟೆಗಳ ಹೆಚ್ಚಳ, ನಿವೃತ್ತಿ ಸೌಲಭ್ಯಗಳನ್ನು ಅರ್ಧಕ್ಕಿಳಿಸುವುದು ಮುಂತಾದ ಕ್ರಮಗಳನ್ನು ತರಲಾಯಿತು ಇವನ್ನು ಅವರು 'ಮಿತವ್ಯಯ'ದ ಕ್ರಮಗಳೆಂದು ಕರೆಯುತ್ತಾರೆ. 
ಸಹಜವಾಗಿಯೇ ಇಂತಹ 'ಮಿತವ್ಯಯ'ಗಳ ಮೂಲಕ ತಾವೇ ತಂದ ಬಿಕ್ಕಟ್ಟಿನ ಹೊರೆಯನ್ನು ಸಾಮಾನ್ಯ ಜನರಿಗೆ ವರ್ಗಾಯಿಸಲು ಅಂತರರಾಷ್ಟ್ರೀಯ ಹಣಕಾಸು ಬಂಡವಾಳ ಮತ್ತು ಆಳುವ ವರ್ಗಗಳು ತೆಗೆದುಕೊಂಡಿರುವ ಕ್ರಮಗಳಿಂದಾಗಿ ಅಮೇರಿಕಾ, ಯೂರೋಪ್ ಮತ್ತು ಮುಂದುವರಿದ ಬಂಡವಾಳಶಾಹಿ ರಾಷ್ಟ್ರಗಳಲ್ಲಿ ಸಂಘರ್ಷಗಳು ಮತ್ತು ಹೋರಾಟಗಳು ಭುಗಿಲೆದ್ದಿವೆ. ಯೂರೋಪ್ನಲ್ಲಿ ಸಾಲ ಬಿಕ್ಕಟ್ಟಿನ ಕೇಂದ್ರ ಬಿಂದುವಾದ ಗ್ರೀಸ್ನಲ್ಲಿ, ಕಳೆದೆರಡು ವರ್ಷಗಳಿಂದ ನಿರಂತರವಾದ ಪ್ರತಿಭಟನೆಗಳು ಮತ್ತು ಸಾರ್ವತ್ರಿಕ ಮುಷ್ಕರಗಳು ನಡೆಯುತ್ತಿವೆ. ಸ್ಪೈನ್ ದೇಶದಲ್ಲಿ ಮುಖ್ಯವಾಗಿ ಯುವ ಜನತೆಯ ಬೃಹತ್ ಹೋರಾಟಗಳು  ನಡೆದಿದ್ದರೆ, ಪೋರ್ಚುಗಲ್, ಇಟಲಿ, ಫ್ರಾನ್ಸ್, ಬ್ರಿಟನ್ ಮತ್ತು ಇತರ ದೇಶಗಳಲ್ಲಿ ಕಾರ್ಮಿಕರ ಬೃಹತ್ ಸಾರ್ವತ್ರಿಕ ಮುಷ್ಕರಗಳು ನಡೆದಿವೆ. ಶಿಕ್ಷಣಕ್ಕೆ ಸಾರ್ವಜನಿಕ ವೆಚ್ಚದಲ್ಲಿ ಕಡಿತ ಮತ್ತು ಬೋಧನಾ ಶುಲ್ಕಗಳ ಹೆಚ್ಚಳದ ವಿರುದ್ಧದ ಹೋರಾಟಗಳಲ್ಲಿ ವಿದ್ಯಾರ್ಥಿ-ಯುವಜನರು  ಮುಂಚೂಣಿಯಲ್ಲಿದ್ದಾರೆ.

ಮೇದಿನ 2012 
ಈ ಹಿನ್ನೆಲೆಯಲ್ಲಿ ಅಂತರ್ರಾಷ್ಟ್ರೀಯ ಕಾರ್ಮಿಕ ದಿನವಾಗಿ ಕಳೆದ ಒಂದು ಶತಮಾನಕ್ಕೂ ಹೆಚ್ಚು ಸಮಯದಿಂದ ಜಗತ್ತಿನಾದ್ಯಂತ ಆಚರಿಸುತ್ತಿರುವ ಮೇ ದಿನ ಈ ವರ್ಷ ಹೊಸ ಅರ್ಥಪಡೆದುಕೊಂಡಂತೆ ಕಾಣುತ್ತಿದೆ. ಇದು ಅಂತರ್ರಾಷ್ಟ್ರೀಯ ಹಣಕಾಸು ಬಂಡವಾಳ ಹುಟ್ಟು ಹಾಕಿದ ಜಾಗತಿಕ ಆಥರ್ಿಕ ಬಿಕ್ಕಟ್ಟಿನ ಅವಧಿಯಲ್ಲಿನ ಮೊದಲ ಮೇದಿನವೇನೂ ಅಲ್ಲವಾದರೂ, ಈ ಬಿಕ್ಕಟ್ಟಿಗೆ ಬಂಡವಾಳಶಾಹಿಯ ಭದ್ರಕೋಟೆಯೆನಿಸಿದ ಅಮೆರಿಕಾ ಸಂಯುಕ್ತ ಸಂಸ್ಥಾನಗಳಲ್ಲೇ ಈ ಬಾರಿ ಹೊಸ ಸ್ಪಂದನೆ ದೊರೆತಿದೆ. 


'ನಾವು 99%, ಮೇ ದಿನದಂದು ಪುನಃ ವಾಲ್ಸ್ಟ್ರೀಟ್ ವಶಪಡಿಸಿಕೊಳ್ಳುತ್ತೇವೆ'-ಈ ಘೋಷಣೆ ಈ ವರ್ಷದ ಮೇ ದಿನದ ವಿಶೇಷವಾಗಿತ್ತು.  ಸಪ್ಟೆಂಬರ್ನಲ್ಲಿ ಈಜಿಪ್ಟಿನ ರಾಜಧಾನಿ ಕೈರೋ ಮತ್ತು ಟ್ಯುನೀಸಿಯಾದ ಟ್ಯುನಿಸ್ನಲ್ಲಿ  ಅರಳಿದ 'ಅರಬ್ ವಸಂತ'ದ ಸ್ಫೂರ್ತಿಯಿಂದ ಅಮೆರಿಕದಲ್ಲಿ ಆರಂಭವಾಗಿ ಜಗತ್ತಿನ 150ಕ್ಕೂ ಹೆಚ್ಚು ನಗರಗಳಿಗೆ ಹಬ್ಬಿದ 'ವಾಲ್ ಸ್ಟ್ರೀಟ್ ವಶಪಡಿಸಿಕೊಳ್ಳಿ' (Occupy Wallstreet) ಚಳುವಳಿ ಅಮೆರಿಕದಲ್ಲಿ ಪೋಲಿಸರ ಸತತ ದಾಳಿ, ಚಳಿಗಾಲ ಮತ್ತು ಸೈದ್ಧಾಂತಿಕ-ಸಂಘಟನಾ ಕೊರತೆಗಳಿಂದ ಬಹಳ ಮಟ್ಟಿಗೆ ತಣ್ಣಗಾಗಿತ್ತು. ಕಳೆದ ತಿಂಗಳು ಈ ಚಳುವಳಿಯಲ್ಲಿ ಮೂಡಿಬಂದ ಗುಂಪುಗಳು ಮೇ 1 ರಂದು ಜಗತ್ತಿನಾದ್ಯಂತ ಈ ಚಳುವಳಿಯ ಪುನಶ್ಚೇತನಕ್ಕೆ ಮತ್ತು ಬ್ಯಾಂಕು-ಕಾರ್ಪೋರೆಟ್ಗಳ ಮೇಲೆ ಪುನಃ ಸತತ ದಾಳಿ ಆರಂಭಿಸಬೇಕೆಂದು ಕರೆ ಕೊಟ್ಟಿದ್ದವು. ಮೇ ದಿನದ ಹುಟ್ಟು ದೇಶವಾದರೂ, ಆ ದಿನವನ್ನು ಹೋರಾಟದ ದಿನವಾಗಿ ಆಚರಿಸುವ ಸಂಪ್ರದಾಯ ಹೋಗೇ ಬಿಟ್ಟಿದ್ದ ಅಮೆರಿಕದಲ್ಲಿ, ಮೇ ದಿನವನ್ನು ಇದಕ್ಕಾಗಿ ಆರಿಸಿಕೊಂಡಿದ್ದು ಒಂದು ಮಹತ್ವಪೂರ್ಣ ಬೆಳವಣಿಗೆ. ಮೇ ದಿನದಂದು ಅಮೆರಿಕದಲ್ಲಿ 'ಸಾರ್ವತ್ರಿಕ ಮುಷ್ಕರ'ಕ್ಕೆ (ಒ.ಡಬ್ಲ್ಯೂ.ಎಸ್.) ಕರೆ ಕೊಟ್ಟಿದ್ದು ಇನ್ನೂ ಹೆಚ್ಚು ಮಹತ್ವದ್ದಾಗಿತ್ತು. 
ಪೂರ್ವದ (ಆಸ್ಟ್ರೇಲಿಯಾದ) ಸಿಡ್ನಿಯಿಂದ ಪಶ್ಚಿಮದ (ಅಮೆರಿಕದ) ಸ್ಯಾನ್ಫ್ರಾನ್ಸ್ಸಿಸ್ಕೊವರೆಗೆ ಅಭಿವೃದ್ಧಿ ಹೊಂದಿರುವ ಬಂಡವಾಳಶಾಹಿ ದೇಶಗಳ ನೂರಾರು ನಗರಗಳಲ್ಲಿ 'ನಾವು 99%, ಮೇದಿನದಂದು ಪುನಃ ವಾಲ್ಸ್ಟ್ರೀಟ್ ವಶಪಡಿಸಿಕೊಳ್ಳುತ್ತೇವೆ' ಎಂಬ ಯುದ್ಧಘೋಷಣೆ ಮೇ ದಿನದ ಕಾಮರ್ಿಕರ ಪ್ರದರ್ಶನಗಳೊಂದಿಗೆ ಮಿಳಿತವಾಗಿ ಮಾರ್ದನಿಗೊಂಡಿತು. ಅಮೆರಿಕದಲ್ಲಿ ಸಾರ್ವತ್ರಿಕ ಮುಷ್ಕರಕ್ಕೆ ರಾಷ್ಟ್ರಮಟ್ಟದ ಕಾರ್ಮಿಕ ಸಂಘಟನೆಗಳು ಕರೆ ಕೊಡದಿದ್ದರೂ, ಹಲವಾರು ಕಡೆ ಸ್ಥಳೀಯ ಯೂನಿಯನ್ನುಗಳು ಮುಷ್ಕರಕ್ಕೆ ಕರೆ ಕೊಟ್ಟವು. ಮುಷ್ಕರಗಳೇನೋ ದೊಡ್ಡ ಪ್ರಮಾಣದಲ್ಲಿ ನಡೆಯಲಿಲ್ಲ. ಆದರೆ ಮೇ ದಿನದ ಪ್ರದರ್ಶನಗಳು ಅಮೆರಿಕದಲ್ಲಿ ದೊಡ್ಡ ರೀತಿಯಲ್ಲಿ ನಡೆದವು ಎನ್ನುವುದೇ ದೊಡ್ಡ ಸಾಧನೆ.  ಈ ಮೇದಿನದ ಭಾರೀ ಪ್ರದರ್ಶನಗಳು ಎಷ್ಟರ ಮಟ್ಟಿಗೆ 'ವಾಲ್ ಸ್ಟ್ರೀಟ್ ವಶಪಡಿಸಿಕೊಳ್ಳಿ' ಚಳುವಳಿಯನ್ನು ಪುನಶ್ಚೇತನಗೊಳಿಸುತ್ತವೆ ಎಂದು ಕಾದು ನೋಡಬೇಕು. ಅಧ್ಯಕ್ಷೀಯ ಚುನಾವಣೆಯ ಈ ವರ್ಷ ಈ ಚಳುವಳಿ ಚುರುಕುಗೊಂಡರೆ ಅಮೆರಿಕದ ರಾಜಕೀಯ ಚಿತ್ರವೇ ಬದಲಾಗಬಹುದು.

ಜಗತ್ತಿನ ಇತರ ಭಾಗಗಳಲ್ಲಿಯೂ ಮೇದಿನ ಈ ಬಾರಿ ಹೆಚ್ಚಿನ ಹುರುಪಿನಿಂದ ಆಚರಿಸಲ್ಪಟ್ಟಿತು. ಯುರೋಪಿನಾದ್ಯಂತ ಅಲ್ಲಿಯ ಆಳುವ ವರ್ಗಗಳು 'ಮಿತವ್ಯಯ' ದ ಹೆಸರಿನಲ್ಲಿ ಜನಸಾಮಾನ್ಯರ ಸೌಲಭ್ಯಗಳನ್ನು ಕಡಿತ ಮಾಡುತ್ತಿರುವುದರ ವಿರುದ್ಧ ಮೇದಿನದಂದು ವಿಶೇಷ ಆಕ್ರೋಶ ವ್ಯಕ್ತಗೊಂಡಿತು. 

ಅಧಿಕಾರಸ್ಥರ ಸೋಲುಗಳ ಸಾಲುದೀಪ
ಮೇ ದಿನಾಚರಣೆಯ ಬೆನ್ನಹಿಂದೆಯೇ ಯುರೋಪಿನಲ್ಲಿ ನಡೆದ ಚುನಾವಣೆಗಳಲ್ಲಿ ಇದು ಸ್ಪಷ್ಟವಾಗಿ ಕಂಡು ಬಂದಿದೆ. 'ಮಿತವ್ಯಯ'ದ ಹೆಸರಿನಲ್ಲಿ ಜನಸಾಮಾನ್ಯರ ಸೌಲಭ್ಯಗಳನ್ನು ಕಡಿತ ಮಾಡುವುದನ್ನು ಒಪ್ಪಿಕೊಂಡಿರುವ ಪಕ್ಷಗಳನ್ನು ಯುರೋಪಿನ ಮತದಾರರು ನಿರ್ಣಯಕವಾಗಿ ತಿರಸ್ಕರಿಸುತ್ತಿದ್ದಾರೆ. ಯುರೋಪಿನ ಹಣಕಾಸು ಬಂಡವಾಳಿಗರನ್ನು ಮತ್ತು ಖಾಸಗಿ ಬ್ಯಾಂಕುಗಳು, ಕಾರ್ಪೋರೇಟ್ಗಳನ್ನು ಉಳಿಸಲು ಜರ್ಮನಿ, ಫ್ರಾನ್ಸ್ಸ್ನಂತಹ ಬಲಿಷ್ಟ ಯುರೋಪಿಯನ್ ದೇಶಗಳ ಆಳುವ ಮಂದಿ ತಮ್ಮ ಜನಗಳ ಮೇಲೆ ಮತ್ತು ಯುರೋಪಿನ ಇತರ ದೇಶಗಳ ಮೇಲೆ 'ಮಿತವ್ಯಯ'ದ ಕಾರ್ಯಕ್ರಮಗಳನ್ನು ಹೇರಿರುವುದಕ್ಕೆ ಈಗ ಬಲವಾದ ಪ್ರತಿಭಟನೆ ವ್ಯಕ್ತವಾಗುತ್ತಿದೆ. 

ಇಂತಹ ಪ್ರತಿಭಟನೆಗಳನ್ನು ನಿರೀಕ್ಷಿಸಿಯೇ ಗ್ರೀಸಿನಲ್ಲಿ ಚುನಾವಣೆಗಳನ್ನು ಮುಂದೂಡುವ ಪ್ರಯತ್ನಗಳು ವಿಫಲವಾದ ಮೇಲೆ ಅಲ್ಲಿ ಚುನಾವಣೆ ನಡೆಸಲೇ ಬೇಕಾಯಿತು. ಇದರಲ್ಲಿ 'ಮಿತವ್ಯಯ'ದ ಪರವಾಗಿರುವ ರಾಜಕೀಯ ಪಕ್ಷಗಳು ಪರಾಭವಗೊಂಡಿವೆ. ಇನ್ನೊಂದೆಡೆ ಉಗ್ರ ಬಲಪಂಥೀಯ ಪಕ್ಷಗಳೂ ಜನಗಳ ಅಸಂತೃಪ್ತಿಯ ಪ್ರಯೋಜನವನ್ನು ಸ್ವಲ್ಪ ಮಟ್ಟಿಗೆ ಪಡೆದಿವೆ. ಆದರೆ ಯುರೋಪಿನ ಜನಗಳ ಒಲವು ಎಡಶಕ್ತಿಗಳತ್ತ ವಾಲಿರುವುದು ಸ್ಪಷ್ಟವಾಗಿ ಕಾಣುತ್ತಿದೆ. 'ಮಿತವ್ಯಯ'ದ ಪರವಾಗಿರುವ ಆಳುವ ಪಕ್ಷಗಳ ಕೂಟ ಬಹುಮತ ಪಡೆಯುವಲ್ಲಿ ವಿಫಲವಾಗಿದೆ. ಸದ್ಯ ಅಲ್ಲಿ ಜರ್ಮನಿ ಮತ್ತು ಫ್ರಾನ್ಸಿನ ಒತ್ತಡಗಳಿಗೆ ತಲೆಬಾಗಿ 'ಮಿತವ್ಯಯ'ದ ಕಾರ್ಯಕ್ರಮಗಳನ್ನು ಅನುಸರಿಸಬಹುದಾದ ಪಕ್ಷಗಳು ಸರಕಾರ ರಚಿಸುವ ಸ್ಥಿತಿಯಲ್ಲಿಲ್ಲ. ಇತರರು ಸರಕಾರ ರಚಿಸುವುದಕ್ಕೆ ಜರ್ಮನಿ, ಫ್ರಾನ್ಸ್ ಮುಂತಾದ ಬಲಿಷ್ಟ ದೇಶಗಳ ಆಳುವ ಮಂದಿಗಳು ಬಿಡಲಾರವು. ಇಂತಹ ಅಸ್ಥಿರತೆಯ ವಾತಾವರಣದಲ್ಲಿ ಗ್ರೀಸಿನಲ್ಲಿ ಮತ್ತೆ ಚುನಾವಣೆ ನಡೆಯಬೇಕಾಗಿ ಬರಬಹುದು, ಹಾಗಾದಲ್ಲಿ ಎಡಪಕ್ಷಗಳಿಗೆ ನಿರ್ಣಾಯಕ ಬೆಂಬಲ ಸಿಗಬಹುದು ಎಂದು ನಿರೀಕ್ಷಿಸಲಾಗುತ್ತಿದೆ.

ಇತ್ತ ಫ್ರಾನ್ಸ್ಸಿನಲ್ಲೇ ಸೋಶಲಿಸ್ಟ್ ಪಕ್ಷದ ಅಭ್ಯರ್ಥಿ 18 ವರ್ಷಗಳ ನಂತರ ಮತ್ತೆ ಅಧ್ಯಕ್ಷರಾಗಿ ಚುನಾಯಿತರಾಗಿರುವುದು ಅಂತರ್ರಾಷ್ಟ್ರೀಯ ಹಣಕಾಸು ಬಂಡವಾಳಿಗರಿಗೆ ಭಾರೀ ಆಘಾತವುಂಟು ಮಾಡಿದೆ. ಈ ಹಿಂದೆ ಫ್ರಾನ್ಸಿನ ಸೋಶಲಿಸ್ಟ್ ಪಕ್ಷ ಅಧಿಕಾರಕ್ಕೆ ಬಂದಾಗ ಬಂಡವಾಳಶಾಹಿ ಶಕ್ತಿಗಳೊಂದಿಗೆ  ರಾಜಿ ಮಾಡಿಕೊಳ್ಳುವ ಪ್ರವೃತ್ತಿಯನ್ನು ತೋರಿದ್ದರೂ, ಈ ಬಾರಿ ಅದು ಬಯಸಿದರೂ ಹಾಗೆ ಮಾಡಲಾಗದಂತಹ ಸನ್ನಿವೇಶ ಉಂಟಾಗಿದೆ. ಹಣಕಾಸು ಬಂಡವಾಳಿಗರನ್ನು ಉಳಿಸಲು ಜನಸಾಮಾನ್ಯರ ಸೌಲಭ್ಯಗಳನ್ನು ತೀವ್ರವಾಗಿ ಕಡಿತ ಮಾಡುವ 'ಮಿತವ್ಯಯ'ದ ಕಾರ್ಯಕ್ರಮಗಳು ಯುರೋಪಿಗೆ ಅನಿವಾರ್ಯವೇನೂ ಅಲ್ಲ ಎಂದು ಈಗ ಚುನಾಯಿತರಾಗಿರುವ ಸೋಶಲಿಸ್ಟ್ ಅಧ್ಯಕ್ಷರು ಸ್ಪಷ್ಟವಾಗಿ ಸಾರಿದ್ದಾರೆ. ಅತ್ತ ಜರ್ಮನಿಯಲ್ಲೂ ಅತ್ಯಂತ ಹೆಚ್ಚು ಜನಸಂಖ್ಯೆಯ ಪ್ರಾಂತ್ಯ ಉತ್ತರ ರೈನ್-ವೆಸ್ಟ್ಫಾಲಿಯಾದಲ್ಲಿ ಆಳುವ ಬಲಪಂಥೀಯ ಕ್ರಿಶ್ಚಿಯನ್ ಡೆಮಾಕ್ರೆಟಿಕ್ ಪಕ್ಷ ಮಧ್ಯ-ಎಡಪಂಥೀಯ ಶಕ್ತಿಗಳ ಎದುರು ಭಾರೀ ಪರಾಭವನ್ನು ಉಂಡಿದೆ. ನೆದರ್ಲೆಂಡಿನಲ್ಲಿ ಕೂಡ 'ಮಿತವ್ಯಯ'ದ ಪರವಾಗಿರುವ ಪಕ್ಷದ ಸರಕಾರ ಕುಸಿದು ಮತ್ತೆ ಚುನಾವಣೆಗಳು ನಡೆಯಬೇಕಾಗಿದೆ. ಯುರೋಪಿನ ಆಳುವ ವರ್ಗಗಳು ಮತ್ತು ಜಾಗತಿಕ ಹಣಕಾಸು ಬಂಡವಾಳಿಗರು ಹೇರಿರುವ ತಮ್ಮನ್ನು ಉಳಿಸಿಕೊಳ್ಳಲು ಜನಸಾಮಾನ್ಯರ ಮೇಲೆ 'ಮಿತವ್ಯ'ಯ ದ ಹೆಸರಿನಲ್ಲಿ ದಾಳಿಗಳನ್ನು ಆರಂಭಿಸಿದ ಮೇಲೆ ಉರುಳಿದ ಯುರೋಪಿಯನ್ ಸರಕಾರಗಳಲ್ಲಿ ಬಲಪಂಥೀಯ ಸಾರ್ಕೋಝಿ ಸರಕಾರ ಹನ್ನೊಂದನೆಯದ್ದು ಎಂಬುದು ಗಮನಾರ್ಹ.

ನಿಜ, ಯುರೋಪಿನ ಈ ಚುನಾವಣೆಗಳಲ್ಲಿ ಈ 'ದೋಷಯುಕ್ತ ವ್ಯವಸ್ಥೆ'ಗೆ ಒಂದು ಬಲಿಷ್ಟ ರಾಜಕೀಯ ಪರ್ಯಾಯ ಹೊರ ಹೊಮ್ಮಿಲ್ಲ. ಇನ್ನೊಂದೆಡೆ, ಬಲಪಂಥೀಯ ಶಕ್ತಿಗಳ ಬಲವೂ ಹೆಚ್ಚಿರುವ ಆತಂಕಕಾರಿ ಬೆಳವಣಿಗೆಯೂ ಕಾಣ ಬಂದಿದೆ. ಆದರೂ ಜನತೆಯನ್ನು ಇನ್ನಷ್ಟು ಆರ್ಥಿಕ ದಾಳಿಗಳಿಂದ ರಕ್ಷಿಸುವುದು ಮತ್ತು ರಾಕ್ಷಸೀ ಫ್ಯಾಸಿಸ್ಟ್ ಶಕ್ತಿಗಳು ತಲೆಯೆತ್ತದಂತೆ ತಡೆಯುವುದು ಒಂದು ರಾಜಕೀಯ ಪರ್ಯಾಯದ ಬಲದಿಂದ ಮಾತ್ರ ಸಾಧ್ಯ, ಅದನ್ನು ಸಮಾಜವಾದ ಮಾತ್ರವೇ ಕೊಡಬಲ್ಲದು ಎಂಬುದು ಹೆಚ್ಚೆಚ್ಚು ಸ್ಪಷ್ಟವಾಗುತ್ತಿದೆ.

ಆರಂಭದಲ್ಲಿ ಹೇಳಿದಂತೆ, ಎರಡು ದಶಕಗಳ ಹಿಂದೆ ಸೋವಿಯೆತ್ ಒಕ್ಕೂಟ ಕುಸಿದಾಗ ಇನ್ನು ಸಮಾಜವಾದದ ಕತೆ ಮುಗಿಯಿತು ಎಂದು ಚಪ್ಪಾಳೆ ತಟ್ಟಿ ಕೇಕೆ ಹಾಕಿದವರು ಈಗ ಕಕ್ಕಾಬಿಕ್ಕಿಯಾಗಿದ್ದಾರೆ. ಪ್ರಖ್ಯಾತ ಎಡಪಂಥೀಯ ಅರ್ಥಶಾಸ್ತ್ರಜ್ಞ ಪ್ರೊ, ಪ್ರಭಾತ್ ಪಟ್ನಾಯಕ್ ಹೇಳಿರುವಂತೆ, ಬಂಡವಾಳದ ಆಳ್ವಿಕೆಯ ವಿರುದ್ಧ ಒಂದು ಹೊಸ ಕ್ರಾಂತಿಕಾರಿ ಅಲೆ ಎದ್ದು ಬರುವ ಸಂಕೇತಗಳು ಕಾಣುತ್ತಿವೆ, ನಾವೀಗ 'ಇತಿಹಾಸದ ಅಂತ್ಯ'ದಲ್ಲಿ ಇಲ್ಲ, ಬದಲಾಗಿ ಒಂದು ಹೊಸ ಇತಿಹಾಸದ ಆರಂಭದಲ್ಲಿ ಇದ್ದೇವೆ ಎಂಬುದು ಹೆಚ್ಚೆಚ್ಚು ಸ್ಪಷ್ಟವಾಗಿ ಕಾಣ ಬರುತ್ತಿದೆ.
                                                                                                               - ವೇದರಾಜ್.ಎನ್.ಕೆ


Wednesday, 27 June 2012

ಬಿಟ್ಟು ಬಿಡು ಈ ಮಂತ್ರ ಈ ಪೂಜೆ


ಬಿಟ್ಟು ಬಿಡು ಈ ಮಂತ್ರ, ಈ ಪೂಜೆ
ಈ ಜಪ ಮಣಿಗಳೆಣಿಕೆ,
ದೇಗುಲದ ಬಾಗಿಲಗಳೆಲ್ಲವನು ಮುಚ್ಚಿ
ಕತ್ತಲೆಯ ಮೂಲೆಯಲಿ ಓರ್ವನೇ ಕುಳಿತು
ಆರ ಪೂಜೆಯನು ಗೈಯುತಿರುವೆ?
ಕಣ್ತೆರೆದು ನೋಡು, ಓ ಭಕುತ,
ನಿನ್ನ ದೇವ ನಿನ್ನೆದುರಿನಲ್ಲಿಲ್ಲ.

ಅವನಿಹನು ಒಕ್ಕಲಿಗ ನೆಲವನುಳುತಿರುವಲ್ಲಿ,
ಅವನಿಹನು ಕಲ್ಲುಟಿಗ ಕಲ್ಲೊಡೆಯುತಿರುವಲ್ಲಿ,
ಅವನಿಹನು ಅವರೊಡನೆ ಬಿಸಿಲಿಲ್ಲಿ, ಮಳೆಯಲ್ಲಿ
ಅವನ ಉಡಿಗೆಗಳೆಲ್ಲ ಮಿಂದಿಹವು ಧೂಳಿನಲಿ
ಅವನಂತೆಯೇ ನೀನು,
ನಿನ್ನ ಮಡಿಯುಡಿಗೆಗಳ ತೊಡೆದು,
ಧೂಳುತುಂಬಿದ ಈ ಮಣ್ಣಿಗಿಳಿದು-ಬಾ.

ಮುಕ್ತಿ? ಎಲ್ಲಿಹುದು ಮುಕ್ತಿ?
ನಮ್ಮೊಡೆಯನೇ ಬಲು ಸಂತಸದಿಂ,
ಜಗದ ನಿರ್ಮಾಣಕಾರ್ಯದ ಬಂಧನವ
ಕೈಗೆತ್ತಿಕೊಂಡಿರಿವ.
ನಮ್ಮೆಲ್ಲರೊಡನೆ ಆತ,
ಅನಂತ ಬಂಧನದಲ್ಲಿರುವ.

ನಿನ್ನ ಧ್ಯಾನದೂಳಗಿಂದ ಎಚ್ಚೆತ್ತು ಬಾ
ಆ ಹೂವು ಆ ಧೂಪ ದೀಪಗಳ ಬಿಟ್ಟು ಬಾ.
ನಿನ್ನ ಮೈ ಮೇಣ್ ತೊಡಿಗೆಗಳು
ಕೊಳೆಯಾದರೇನು? ಹರಿದರೇನು?
ನಿನ್ನ ಹಣೆ ಬೆವರ ಸುರಿಸುತ್ತ,
ಶ್ರಮವ ಗೈಯುತ್ತ,
ಅವನೊಡನೆ ನಿಲ್ಲು, ಮೇಣ್
ಅವನ ಕಾಣು.
- ಡಾ.ರವೀಂದ್ರನಾಥ್ ಟ್ಯಾಗೂರ್

Saturday, 23 June 2012

ಲೋಕ ತಿಳುವಳಿಕೆಯ ವಿಸ್ಮೃತಿಯಲ್ಲಿ ಕಮ್ಯುನಿಸ್ಟರು


`ಸರ್ಫರೋಶಿ ಕೀ ತಮ್ಹನ ಅಬ್ ಹಮಾರೆ ದಿಲ್ ಮೇಂ ಹೈ / ದೇಖನ ಹೈ ಜೋರ್ ಕಿತ್ನ ಬಾಜು-ಎ-ಖಾತಿಲ್ ಮೇಂ ಹೈ`
(ಪ್ರತಿರೋಧದ ರೊಚ್ಚು ಎದೆಯಲ್ಲಿ ಹುರಿಗಟ್ಟಿದೆ / ನೋಡೇ ಬಿಡುವ ಕೊಲೆಗಡುಕರ ಬಾಹುಬಲವೆಷ್ಟಿದೆ)
 ರಾಮ್‌ಪ್ರಸಾದ್ ಬಿಸ್ಮಿಲ್ಲ
 
ಸೋವಿಯತ್ ಯೂನಿಯನ್ ಅಸ್ತಿತ್ವದಲ್ಲಿದ್ದಾಗ, `ಮಾಸ್ಕೊದಲ್ಲಿ ಮಳೆ ಬಂದರೆ ಕಮ್ಯುನಿಸ್ಟರು ಇಲ್ಲಿ ಕೊಡೆ ಹಿಡಿಯುತ್ತಾರೆ` ಎನ್ನುವುದು ಭಾರತದ ಕಮ್ಯುನಿಸ್ಟರ ಕುರಿತಾಗಿ ಜನಜನಿತಗೊಳಿಸಲಾಗಿದ್ದ ವಿಡಂಬನೆಯಾಗಿತ್ತು. ಕಮ್ಯುನಿಸ್ಟ್ ಸಿದ್ಧಾಂತ ನಮ್ಮ ದೇಶಕ್ಕೆ `ಅನ್ಯ`ವಾದದ್ದು, ಕಮ್ಯುನಿಸ್ಟರು ದೇಶದ ರಾಜಕೀಯಕ್ಕೆ ಅಪ್ರಸ್ತುತರು ಎಂದು ಜನಮಾನಸದಲ್ಲಿ ಅಚ್ಚೊತ್ತುವುದು ಉಳ್ಳವರ ರಾಜಕೀಯದ ವರಸೆ ಎಂಬುದೇನೋ ಸರಿ. 

ಆದರೆ, ಈ ಬಗೆಯ ಸಹಮತದ ಉತ್ಪಾದನೆಯಲ್ಲಿ ಲಿಬರಲ್‌ಗಳು ಮತ್ತು ಕಮ್ಯುನಿಸ್ಟೇತರ ಸಮಾಜವಾದಿಗಳೂ ಪರೋಕ್ಷವಾಗಿ ತಮ್ಮ ಶಕ್ತ್ಯಾನುಸಾರ ಕೈಜೋಡಿಸಿರುವುದು ಕುತೂಹಲದ ಸಂಗತಿ. 

ನಮ್ಮ ದೇಶದಲ್ಲಿ, ಹಲವು ಬಗೆಯ ಸಿದ್ಧಾಂತಗಳನ್ನು ಆಧಾರವಾಗಿಟ್ಟುಕೊಂಡು ಕಾರ್ಯಾಚರಿಸುವ ರಾಜಕೀಯ ಬಣಗಳಿವೆ; ಇವುಗಳಲ್ಲಿ ಕಮ್ಯುನಿಸ್ಟರಷ್ಟು ಪ್ರಭುತ್ವದ ದಮನಕ್ಕೊಳಗಾದ ರಾಜಕೀಯ ಬಣ ಯಾವುದೂ ಇಲ್ಲ. ದೇಶಕ್ಕೆ ಸ್ವಾತಂತ್ರ್ಯ ಬಂದದ್ದೇ, ನಿಜಾಮನ ಆಳ್ವಿಕೆಯಿಂದ ಹೈದರಾಬಾದ್ ಪ್ರಾಂತ್ಯವನ್ನು ವಿಮೋಚನೆಗೊಳಿಸಲು ಕಳುಹಿಸಲಾದ ಭಾರತದ ಸೇನಾಪಡೆಯನ್ನು ಕಮ್ಯುನಿಸ್ಟರ ನಾಯಕತ್ವದ ತೆಲಂಗಾಣ ರೈತ ಹೋರಾಟವನ್ನು ದಮನ ಮಾಡಲು ಕೂಡ ಹರಿಬಿಡಲಾಯಿತು. 

ಅಲ್ಲಿ, ದೇಶದ ಮೊತ್ತಮೊದಲ ಕೂಡುದೊಡ್ಡಿಯಲ್ಲಿ ಭೂಹೀನರ ಭೂಮಿ ಹಕ್ಕಿಗೆ ಹೋರಾಡಿದ ಕಮ್ಯುನಿಸ್ಟರನ್ನು ಕೂಡಿ ಹಾಕಿ, ಚಿತ್ರಹಿಂಸೆ ನೀಡಿ ಕೊಲ್ಲಲಾಯಿತು; ಭೂಮಾಲೀಕರನ್ನು ಅಧಿಕಾರದ ಗದ್ದುಗೆಯಲ್ಲಿ ಕೂರಿಸಲಾಯಿತು (ಅಂಥ ಭೂಮಾಲೀಕರಲ್ಲಿ ಒಬ್ಬರಾದ ಪಿ.ವಿ. ನರಸಿಂಹರಾವ್ ದೇಶದ ಪ್ರಧಾನಿ ಕೂಡ ಆದರು). 

1962ರಲ್ಲಿ, ಚೀನಾದ ಜೊತೆ ಯುದ್ಧ ಶುರುವಾದಾಗ, ನಮ್ಮ ಪ್ರಭುತ್ವ ಊರೂರುಗಳಲ್ಲಿ ಕಮ್ಯುನಿಸ್ಟರನ್ನು `ಚೀನಾದ ಏಜೆಂಟರು` ಎಂಬ ಆರೋಪ ಹೋರಿಸಿ ಸೆರೆಗೆ ತಳ್ಳಿತು; ಯುದ್ಧಕಾಲದ ಅನಾವೃಷ್ಟಿಯನ್ನು ಬಳಸಿಕೊಂಡು ಕಾಳಸಂತೆಯಲ್ಲಿ ದವಸ ಧಾನ್ಯ ದಾಸ್ತಾನು ಮಾಡಿ ಮಾರಿದ ಖದೀಮರು `ದೇಶಪ್ರೇಮಿ`ಗಳಾಗಿ ಮೆರೆದರು! 

ಬಿ.ವಿ.ಕಕ್ಕಿಲಾಯ
ವಸಾಹತುಶಾಹಿ ಕಾಲದಲ್ಲಿ ದೊರೆಗಳಿಗೆ ಡೊಗ್ಗಿ ಬಡವರನ್ನು ಬಳಲಿಸುವ ವ್ಯವಸ್ಥೆಯನ್ನು ಕಾಪಾಡಿಕೊಂಡವರಿದ್ದರು; ಇಂದು, ದೇವರು- ಧರ್ಮದ ನೆಪದಲ್ಲಿ ಜಾತಿ-ಮತ-ಆಸ್ತಿ ತಾರತಮ್ಯಗಳನ್ನು ಭದ್ರಗೊಳಿಸುವ ಬಾಬ-ಮಠಾಧೀಶ-ಧರ್ಮದರ್ಶಿಗಳೂ ಇದ್ದಾರೆ; ಹಸಿದವರ ತಟ್ಟೆಯ ತುಂಡು ರೊಟ್ಟಿಗೂ ತತ್ವಾರವಾಗುವಂಥ ಮಿಣ್ಣನೆಯ ಕಲೆಯನ್ನು ಅಮೇರಿಕೆಯಿಂದ ಶಾಸ್ತ್ರಬದ್ಧವಾಗಿ ಕಲಿತು ತಮ್ಮ ಬಂಡವಾಳವನ್ನು ಕೊಬ್ಬಿಸುವ ಕಾರ್ಯದಲ್ಲಿ ತೊಡಗಿರುವ ಉದ್ಯಮ ವಿಭೂಷಣರೂ ಇದ್ದಾರೆ; ಈ ಮಂದಿ ಊರಿಗೆ ದೊಡ್ಡವರು! ಆದರೆ, ನಾವು ನಿತ್ಯ ಬದುಕುವ ಊರುಕೇರಿಗಳಲ್ಲಿ, ತಮ್ಮ ಜೀವಮಾನ ಪೂರ್ತಿ, ಕೆಳಸ್ತರದ ಜನರ ಬದುಕಿನ ನ್ಯಾಯಯುತ ಹಕ್ಕುಗಳನ್ನು ನಿರೂಪಿಸಿ, ಅವುಗಳನ್ನು ಸಾಕಾರಗೊಳಿಸಲು ಹೋರಾಡಿದ ಕಮ್ಯುನಿಸ್ಟರ ಬದುಕು, ನಮ್ಮ ಕಣ್ಣೆದುರಿಗಿದ್ದರೂ `ಅದೃಶ್ಯ`ವಾಗಿರುವುದು ಯಾಕೆ? ಇದು ಕಮ್ಯುನಿಸ್ಟರ ವಿರುದ್ಧ ನೇರ ಹಿಂಸಾತ್ಮಕ ಕಾರ್ಯಾಚರಣೆ ನಡೆಸುವ ಪ್ರಭುತ್ವಕ್ಕೆ ಸಹಯೋಗಿಯಾಗಿ ನಾಗರಿಕ ಸಮಾಜದಲ್ಲಿ ರೂಢಿಸಲಾಗಿರುವ ಸಹಮತವೋ? ಅಗ್ರಗಣಿ ಕಮ್ಯುನಿಸ್ಟ್ ನಾಯಕ ಕಾಂ. ಬಿ.ವಿ. ಕಕ್ಕಿಲ್ಲಾಯ ತೀರಿಕೊಂಡಿರುವ ಹೊತ್ತಿನಲ್ಲಿ (ಜೂನ್ 4, 2012) ನಾಡಿನ ಈ ವಿಪರ್ಯಾಸ ಮತ್ತೊಮ್ಮೆ ನಮ್ಮನ್ನು ಚುಚ್ಚಬೇಕು.

ಕಕ್ಕಿಲ್ಲಾಯರು ತಮ್ಮ ಯೌವನದಲ್ಲೇ ವಸಾಹತುಶಾಹಿ ವಿರೋಧಿ ಹೋರಾಟದಿಂದ ಸ್ಫೂರ್ತಿ ಪಡೆದು ಪೂರ್ಣ ಪ್ರಮಾಣದ ಸಾರ್ವಜನಿಕ ಜೀವನಕ್ಕೆ ಧುಮುಕಿದ ಕಮ್ಯುನಿಸ್ಟ್. ಅವರ ತಲೆಮಾರಿನ ಎಲ್ಲ ಕಮ್ಯುನಿಸ್ಟರೂ ಎರಡು ಜೊತೆ ಬಟ್ಟೆ, ದಕ್ಕಿದರೆ ಒಂದು ಹೊತ್ತಿನ ತುತ್ತು, ಇಡುಕಿರಿದ ಪಾರ್ಟಿ ಆಫೀಸಿನ ಮೂಲೆಯಲ್ಲಿ ಒಂದು ಚಾಪೆ- ಇಷ್ಟನ್ನೇ ಆಸ್ತಿಯಾಗಿಟ್ಟುಕೊಂಡು ಬದುಕಿದವರು. 

ಪಿತ್ರಾರ್ಜಿತವಾಗಿ ದಕ್ಕಿದ ಆಸ್ತಿಯ ಪಾಲೇನಾದರೂ ಇದ್ದಲ್ಲಿ, ಅವನ್ನು ಅವರ ಹೆಂಡತಿ ಮಕ್ಕಳು ತಮ್ಮ ಕನಿಷ್ಠ ಜೀವನ ನಿರ್ವಹಣೆಗೆ ಆಧಾರವಾಗಿ ಉಪಯೋಗಿಸಿದರೇ ಹೊರತಾಗಿ, ಈ ಕಮ್ಯುನಿಸ್ಟ್ ನಾಯಕರು ಅವುಗಳ ಹಂಗಿಗೆ ಬಿದ್ದವರಲ್ಲ. `ಇದೇನು ಕಮ್ಯುನಿಸ್ಟರ ಮೋಕ್ಷ ಸಾಧನೆಯ ಆತ್ಮನಿಗ್ರಹ ಮಾರ್ಗವೋ?` ಎಂದು ನಾನು ಹಾಸ್ಯದ ಹಗುರದಲ್ಲಿ, ಕಕ್ಕಿಲ್ಲಾಯರ ಸಹಕಮ್ಯುನಿಸ್ಟರಾಗಿದ್ದ ಪಿ.ರಾಮಚಂದ್ರರಾಯರನ್ನು ಕೇಳಿದ್ದೆ. 

ಸುಖವಾಗಿ ನಕ್ಕು ಅವರು ಹೇಳಿದರು- `ನೋಡು, ಜೀವ ಉಳಿಸಿಕೊಳ್ಳಲಿಕ್ಕೆ ಎಷ್ಟು ಅಗತ್ಯವೋ ಅಷ್ಟರಲ್ಲಿ ಬದುಕಿದರೆ ನಮಗೆ ಅಧಿಕಾರಸ್ಥರ ಹಂಗಿನಲ್ಲಿ ಬದುಕುವ ಪ್ರಸಂಗ ಬರುವುದಿಲ್ಲ. ಆಗ ನಿರ್ದಾಕ್ಷಿಣ್ಯವಾಗಿ ಅಧಿಕಾರದೆದಿರು ಹೋರಾಡಬಹುದು.This is the essence of Gandhian simple living; This we have learnt from life of A.K.Gopalan and Namboodripad’ಈ ಜೀವನ ಧ್ಯೇಯ `ಅನ್ಯ ದೇಶ`ದ್ದೋ? ಕಕ್ಕಿಲ್ಲಾಯರು ಹೇಗೆ ಕಮ್ಯುನಿಸ್ಟ್ ಮುತ್ಸದ್ದಿಯೋ ಹಾಗೇ ಸಿದ್ಧಾಂತಿ ಎಂದೂ ಹೆಸರು ಪಡೆದವರು. ಅವರು ಯೌವನದಲ್ಲಿ ಕಮ್ಯುನಿಸ್ಟ್ ಚಳವಳಿಗೆ ತಮ್ಮನ್ನು ಕೊಟ್ಟುಕೊಂಡರು. 

ಅವಿಭಜಿತ ಕಮ್ಯುನಿಸ್ಟ್ ಪಕ್ಷ `ಕ್ವಿಟ್ ಇಂಡಿಯ ಚಳವಳಿ`ಯಲ್ಲಿ ಭಾಗವಹಿಸಕೂಡದೆಂಬ ನಿರ್ಧಾರ ಮಾಡಿದಾಗ್ಯೂ ಆ ಚಳವಳಿಯಲ್ಲಿ ಮುಂದಾಗಿ ಭಾಗವಹಿಸಿ ಜೈಲು ಸೇರಿದರು. ಅವರು ಮಾರ್ಕ್ಸ್‌ವಾದದ ಸಿದ್ಧಾಂತಗಳನ್ನು ಗಂಭೀರವಾಗಿ ಅಧ್ಯಯನ ಮಾಡಿದ್ದು ಆ ಸೆರೆವಾಸದಲ್ಲಿ. ಆವರೆಗೂ ಅವರನ್ನು ಕಮ್ಯುನಿಸ್ಟರ ಸಂಗ ಮಾಡುವಂತೆ ಪ್ರೇರೇಪಿಸಿದ ವಿಚಾರಗಳು ಯಾವುವು ಎಂಬುದನ್ನು ಕಕ್ಕಿಲ್ಲಾಯರು ತಮ್ಮ ಆತ್ಮಚರಿತ್ರೆಯಲ್ಲಿ (`ಬರೆಯದ ದಿನಚರಿಯ ಮರೆಯದ ಪುಟಗಳು`) ಬರೆದಿದ್ದಾರೆ. 

ಅವೆಲ್ಲಾ ತಮ್ಮ ಸುತ್ತಣ ಬದುಕಿನಲ್ಲಿ ಅವರು ಕಂಡಿದ್ದ ಜಾತಿ, ಆಸ್ತಿ ತಾರತಮ್ಯ, ಮೇಲ್ಜಾತಿಗಳ ಶಟ ಸಂಪ್ರದಾಯಗಳನ್ನು ಪ್ರತಿರೋಧಿಸುವ ರೊಚ್ಚಿನಿಂದ (ಸರ್ಫರೋಶಿ) ಉದ್ದೀಪಿತವಾದವು; ಈ ರೊಚ್ಚು ವಸಾಹತುಶಾಹಿ ವಿರೋಧಿ ಹೋರಾಟದ ಅವಿಭಾಜ್ಯ ಅಂಗವಾಗಿದ್ದ ಸಾಮಾಜಿಕ ಜಾಗೃತಿಯ ಕೂಸು. ಇವುಗಳ ಜೊತೆ ಅವರ ವೈಚಾರಿಕತೆಯನ್ನು ಪ್ರೇರೇಪಿಸಿದ ಅನುಭವಿ ಕುಟುಂಬಸ್ಥರ ಲೋಕೋಕ್ತಿಗಳು ಸಾಕಾಷ್ಟಿವೆ. 

ಅವುಗಳಲ್ಲಿ, ಅವರ ತಾಯಿಯವರು ಹೇಳುತ್ತಿದ್ದದ್ದೆಂದು ಕಕ್ಕಿಲ್ಲಾಯರು ನೆನಪಿಸಿಕೊಳ್ಳುವ ಮಾತು ಹೀಗಿದೆ- `ಕೆನ್ನೆಗೆ ಹೊಡೆದರೆ ಕ್ಷಮೆ ಇದೆ; ಬೆನ್ನಿಗೆ ಹೊಡೆದರೆ ಕ್ಷಮೆ ಇದೆ; ಆದರೆ ಹೊಟ್ಟೆಗೆ ಹೊಡೆದರೆ ದೇವರೂ ಕ್ಷಮಿಸಲಾರ` (ಬಿ.ವಿ.ಕಕ್ಕಿಲ್ಲಾಯ ಸಂಭಾವನ ಗ್ರಂಥ `ನಿರಂತರ`ದಲ್ಲಿ ಉದ್ದೃತ, ಪು.14). ಕಮ್ಯುನಿಸ್ಟರ ರಾಜಕೀಯದಲ್ಲಿ ಈ ಬಗೆಯ ಯುಗಧರ್ಮ ಹಾಗೂ ಲೋಕಾನುಭವಗಳು ಬೆಸೆದಿವೆ ಎಂದೇ ಅವರಿಗೆ ಜನರ ಬವಣೆಯ ಸ್ವರೂಪಗಳನ್ನು ಗ್ರಹಿಸಿ ಹೋರಾಟಗಳನ್ನು ಸಂಘಟಿಸಲು ಸಾಧ್ಯವಾಯಿತು. 

ಕರ್ನಾಟಕದ ಕರಾವಳಿಯಲ್ಲಿ `ಬೀಡಿ ಕಟ್ಟಿ ಬದುಕುವುದು` ಎಂಬ ಮಾತು ಕಡುಬಡತನದ ನಿರೂಪಣೆ. ಈ ಉದ್ದಿಮೆಯಲ್ಲಿ ನಡೆಯುವ ಶೋಷಣೆ, ಆಧುನಿಕ ಕೈಗಾರಿಕಾ ವಲಯದಲ್ಲಿ ನಡೆಯುವ ಶ್ರಮಿಕರ ಶೋಷಣೆಗಿಂತ ಭಿನ್ನ ಬಗೆಯದು. 

ಕಕ್ಕಿಲ್ಲಾಯರು ಬೀಡಿ ಕಟ್ಟುವವರ ಸ್ಥಿತಿಯನ್ನು ಅರಿತ ಬಗೆ ನೋಡಿ- `ವಸತಿಗಳನ್ನೇ ಬೀಡಿ ಕಟ್ಟುವ ಕಾರ್ಖಾನೆಗಳನ್ನಾಗಿ ಮಾರ್ಪಡಿಸಿ ಹಿರಿಯ ಬಂಡವಾಳಗಾರರ ಮತ್ತು ಕಂಟ್ರಾಕ್ಟುದಾರರ ಸುಲಿಗೆಯ ಆಡುಂಬೊಲವಾಗಿಸಿ ಜೀತದಾಳುಗಳಂತೆ ಬಾಳಬೇಕಾದ ಸ್ಥಿತಿಗೆ ತಲುಪಿದಂತಹವರು` (ಅದೇ, ಪು.169). ಕರಾವಳಿಯ ಕಮ್ಯುನಿಸ್ಟರು ಮನೆಮನೆ ತಿರುಗಿ, ಬೀಡಿ ಕಟ್ಟುವ ಬಡವರಿಗೆ ಉದ್ದಿಮೆಯಲ್ಲಿರುವ ಶೋಷಣೆಯ ಸ್ವರೂಪವನ್ನು ಅರುಹಿ, `ಬೀಡಿ ಕಾರ್ಮಿಕರ ಸಂಘಟನೆ` ಕಟ್ಟಿದರು; ನ್ಯಾಯಯುತ ಹಕ್ಕಿನ ಹೊಸ ಭಾಷೆಯನ್ನೇ ರಚಿಸಿದರು- ಇದು ಸಾಮಾನ್ಯವಾದುದಲ್ಲ. 

ಹಾಗೆಯೇ ಭಾರತದಲ್ಲಿ ಕೃಷಿಭೂಮಿಯ ಸ್ವಾಮ್ಯ ಹಾಗು ಕೃಷಿ ಸಂಬಂಧಗಳಲ್ಲಿರುವ ಶೋಷಣೆಗಳು ಪ್ರದೇಶ ವಿಶಿಷ್ಟವಾದವು. ಗೇಣಿದಾರರು ಮತ್ತು ಭೂಮಿಹೀನ ಕೃಷಿಕಾರ್ಮಿಕರನ್ನು ಸಂಘಟಿಸಿ, ಅವರಿಗೆ ದಕ್ಕಬೇಕಾದ ಹಕ್ಕುಗಳನ್ನು ನಿರೂಪಿಸುವುದು, ಆ ಜನರ ಜೀವನದಲ್ಲಿ ಜೀವಂತವಾಗಿ ಹೆಣೆದುಕೊಂಡವರಿಗೆ ಮಾತ್ರ ಸಾಧ್ಯ. ಕಮ್ಯುನಿಸ್ಟರು ಇದನ್ನು ಸಾಧಿಸಿ ತೋರಿಸಿದ್ದಾರೆ. 

1972ರಲ್ಲಿ ದೇವರಾಜ ಅರಸು ಸರ್ಕಾರ ಭೂಸುಧಾರಣೆ ಮಸೂದೆ ಮಂಡಿಸುವ ಹೊತ್ತಿಗಾಗಲೇ ಸೋಶಿಯಲಿಸ್ಟರು ಹಾಗು ಕಮ್ಯುನಿಸ್ಟರ ಹೋರಾಟಗಳು ಗೇಣಿದಾರರು ಹಾಗು ಭೂಹೀನ ಕೃಷಿ ಕಾರ್ಮಿಕರ ಹಕ್ಕುಗಳನ್ನು ಅನುಷ್ಠಾನಯೋಗ್ಯ ಸ್ಪಷ್ಟತೆಯಲ್ಲಿ ನಿರೂಪಿಸಿದ್ದವು. 1962ರಲ್ಲಿ ಅಂಗೀಕಾರಗೊಂಡಿದ್ದ ಭೂಶಾಸನಗಳನ್ನು ಒಗ್ಗೂಡಿಸಿ, ಯಾವ ಪರಿಷ್ಕರಣೆಯೂ ಇಲ್ಲದ ಮಸೂದೆಯನ್ನು ಶಾಸನಸಭೆ ಅನುಮೋದಿಸಲು ಸಿದ್ಧವಾಗಿದ್ದಾಗ ಕಕ್ಕಿಲ್ಲಾಯರನ್ನೊಳಗೊಂಡ 5 ಕಮ್ಯುನಿಸ್ಟ್, 3 ಸೊಶಿಯಲಿಸ್ಟ್ ಹಾಗು ಒಬ್ಬ ಆರ್.ಪಿ.ಐ. ಶಾಸಕರು ಒಗ್ಗೂಡಿ ವಿರೋಧಿಸಿ, ಮಸೂದೆಯನ್ನು ಪರಿಶೀಲನಾ ಸಮಿತಿಗೆ ಒಪ್ಪಿಸುವಂತೆ ಮಾಡಿದರು.
 
ಸಮಿತಿಯ ಕಮ್ಯುನಿಸ್ಟ್ ಸದಸ್ಯರಾಗಿದ್ದ ಕಕ್ಕಿಲ್ಲಾಯರು ಕಮ್ಯುನಿಸ್ಟರು ಸಂಘಟಿಸಿದ ಭೂಹೋರಾಟಗಳ ಅನುಭವವನ್ನು ಧಾರೆ ಎರೆದು ಒಂದಿಷ್ಟಾದರೂ ಹಲ್ಲು, ಉಗುರುಗಳನ್ನುಳ್ಳ ಶಾಸನವನ್ನು ರೂಪಿಸುವಲ್ಲಿ ಯಶಸ್ವಿಯಾದರು. ಈ ಕಾರ್ಯದಲ್ಲಿ  ಸೋಶಿಯಲಿಸ್ಟ್ ಹಾಗೂ ಕೆಲವು ಕಾಂಗ್ರೆಸ್ ಸದಸ್ಯರು ನೀಡಿದ ಬೆಂಬಲವನ್ನು ಕಕ್ಕಿಲ್ಲಾಯರು ಮರೆಯದೆ ನೆನೆಯುತ್ತಾರೆ. ಆದರೆ ಕಮ್ಯುನಿಸ್ಟರ ಹೋರಾಟಗಳು ಮತ್ತು ಆ ಹೋರಾಟಗಳ ಪ್ರತಿಮೆಯಾದ ಕಕ್ಕಿಲ್ಲಾಯರೂ ನಮ್ಮ ಸಾರ್ವಜನಿಕ ಮನೋಭೂಮಿಕೆಯಲ್ಲಿ ಅದೃಶ್ಯರಾಗ್ದ್ದಿದಾರೆ!

ಇಪ್ಪತ್ತನೇ ಶತಮಾನದ ಈ ಬಹು ಮುಖ್ಯ ಕಾಲಘಟ್ಟದ ಕರಾವಳಿಯ ಜನಜೀವನವನ್ನು ಶಿವರಾಮ ಕಾರಂತರ ಕಾದಂಬರಿಗಳು ನೈಜವಾಗಿ ಚಿತ್ರಿಸುತ್ತವೆ ಎಂದು ನಂಬುತ್ತೇವಷ್ಟೇ. ಆದರೆ ಅವರ ಯಾವ ಕಾದಂಬರಿಯಲ್ಲೂ, ಕರಾವಳಿಯ ಊರೂರುಗಳಲ್ಲಿ ಹೋರಾಟ ನಡೆಸುತ್ತಿದ್ದ ಕಕ್ಕಿಲ್ಲಾಯರಂಥ ಕಮ್ಯುನಿಸ್ಟ್ ನಾಯಕರ ಬದುಕಿನ ಚಿತ್ರ ಯಾಕೆ ಕಾಣುವುದಿಲ್ಲ? ಎಂಬ ಪ್ರಶ್ನೆಯನ್ನು ಕಾರಂತರ ಕಥನ ಜಗತ್ತಿನ ಬಗ್ಗೆ ಗೌರವಿಟ್ಟುಕೊಂಡೇ ನಾವು ಕೇಳಬಹುದು.

ಅಪ್ಪಣ್ಣ ಹೆಗಡೆ
ಈ ಬಗೆಯ ಸಾರ್ವಜನಿಕ ವಿಸ್ಮೃತಿಗೆ ತಳ್ಳಲ್ಪಟ್ಟ ಮತ್ತೊಬ್ಬ ಧೀಮಂತ ಕಮ್ಯುನಿಸ್ಟ್ ನಾಯಕ ಅಪ್ಪಣ್ಣ ಹೆಗಡೆ. ಅವರ ಬದುಕನ್ನು ನಾವು ಸಾಂದರ್ಭಿಕವಾಗಿ ನೆನೆಯಬೇಕು. ಅವರು ಶಿವಮೊಗ್ಗದಲ್ಲಿ ವಕೀಲರಾಗಿದ್ದರು ಹಾಗೂ ಮಲೆನಾಡು ಪ್ರದೇಶದಲ್ಲಿ ಸಿ.ಪಿ.ಐ.(ಎಂ) ಪಕ್ಷದ ನಾಯಕರಾಗಿದ್ದರು. 

1964ರ ಹೊತ್ತಿಗೆ ತೀರ್ಥಹಳ್ಳಿಗೆ ಬಂದು ನೆಲೆಸಿ ಗೇಣಿದಾರರ ಸಂಘಟನೆಯನ್ನು ಕಟ್ಟಿದರು. ಗೇಣಿದಾರರ ಹೋರಾಟ ಕಾಗೋಡು ಸತ್ಯಾಗ್ರಹದ ಕೊಳಗ ಅಳತೆಯನ್ನೂ ಮೀರಿ, ಸಂಪೂರ್ಣ ಭೂಸ್ವಾಮ್ಯವನ್ನು ಪಡೆಯುವ ಪರಿವರ್ತನಾಶೀಲ ಹೋರಾಟವಾಗಬೇಕು ಎಂಬ ಸಂಕಲ್ಪದಲ್ಲಿ ಅಪ್ಪಣ್ಣ ಹೆಗಡೆ ಗೇಣಿದಾರರನ್ನು ಸಂಘಟಿಸತೊಡಗಿದರು. ಅವರು ತಮ್ಮ ಚಳವಳಿಯನ್ನು `ಬಿಳಿಯ ಗೌಡರ ವಿರುದ್ಧ ಕರಿಯ ಗೌಡರ ಹೋರಾಟ` ಎಂದು ಕರೆದು, ಇದು ಜಾತಿಯ ನೆಲೆಗಳನ್ನು ಮೀರಿದ ಹಕ್ಕಿನ ಹೋರಾಟವೆಂದು ಗೇಣಿದಾರರಿಗೆ ಮನದಟ್ಟು ಮಾಡಿದ್ದರು. 

ಅಪ್ಪಣ್ಣ ಹೆಗಡೆಯವರದ್ದು ಭೂಮಾಲೀಕರಿಗೆ ನೇರಾನೇರ ಸೆಡ್ಡು ಹೊಡೆದು ನಿಂತ ಜಟ್ಟಿಯ ಶೈಲಿ (ಮಿಲಿಟೆಂಟ್ ಸ್ಟ್ರಗ್ಲ್). ಗಿರಿಯಪ್ಪ ಗೌಡನೆಂಬ ಗೇಣಿದಾರನಿಗೆ ಭೂಮಾಲೀಕ ಕಿರುಕುಳ ಕೊಟ್ಟಾಗ, ಭೂಮಾಲೀಕನನ್ನು ಹೆಡಮುರಿಗೆ ಕಟ್ಟಿ ತೀರ್ಥಹಳ್ಳಿಯ ಬೀದಿಗಳಲ್ಲಿ ಅಪ್ಪಣ್ಣ ಹೆಗಡೆ ಮೆರವಣಿಗೆ ಮಾಡಿಸಿದ್ದರು. 

ಪೊಲೀಸರು ಭೂಮಾಲೀಕರ ಪರ ನಿಂತಾಗ, ಅಪ್ಪಣ್ಣ ಹೆಗಡೆ ತೀರ್ಥಹಳ್ಳಿಯ ಪೊಲೀಸು ಠಾಣೆಯ ಮೇಲೆ ಕಮ್ಯುನಿಸ್ಟ್ ಪಕ್ಷದ ಪತಾಕೆ ಹಾರಿಸಿ ಪಂಥಾಹ್ವಾನ ನೀಡಿದ್ದರು! ಗೋಪಾಲಗೌಡರು ತೀರ್ಥಹಳ್ಳಿಯಿಂದ ವಿಧಾನ ಸಭಾ ಚುನಾವಣೆಗೆ ಸ್ಪರ್ಧಿಸಿದಾಗ (1967) ಅಪ್ಪಣ್ಣ ಹೆಗಡೆ ಗೋಪಾಲಗೌಡರ ಪರವಾಗಿ ದುಡಿದರು. ಚುನಾವಣೆಯಲ್ಲಿ ಗೆದ್ದ ಗೋಪಾಲಗೌಡರು `ಇದು ಅಪ್ಪಣ್ಣ ಹೆಗಡೆಯವರ ಬೆಂಬಲದಿಂದ ಪಡೆದ ಜಯ`ವೆಂದು ಸಾರ್ವಜನಿಕವಾಗಿ ಹೇಳಿದ್ದರಂತೆ. 

1972ರ ಚುನಾವಣೆಯ ಹೊತ್ತಿಗೆ ಗೋಪಾಲಗೌಡರು ಅನಾರೋಗ್ಯಕ್ಕೆ ಈಡಾಗಿದ್ದರಿಂದ ಸ್ಪರ್ಧಿಸಲಿಲ್ಲ. ಅಪ್ಪಣ್ಣ ಹೆಗಡೆ ತೀರ್ಥಹಳ್ಳಿಯಿಂದ ಸ್ಪರ್ಧೆಗೆ ಇಳಿದಾಗ, ಗೌಡರು ತಮ್ಮ ಅನಾರೋಗ್ಯ ನಿಮಿತ್ತ ಪ್ರಚಾರಕ್ಕೆ ಬರಲಾಗದ ಅಳಲು ತೋಡಿಕೊಂಡು, ತಮ್ಮ ಟ್ರೇಡ್‌ಮಾರ್ಕ್ ಮಫ್ಲರನ್ನು ಹೆಗ್ಡೆಯವರ ಕೊರಳಿಗೆ ಹಾಕಿ ಹರಸಿದರಂತೆ. ಅಪ್ಪಣ್ಣ ಹೆಗಡೆ ಗೆಲ್ಲಲಿಲ್ಲ. 

ಕರ್ನಾಟಕದ ಕಮ್ಯುನಿಸ್ಟ್ ಚಳವಳಿಯ ಚರಿತ್ರೆಯಲ್ಲಿ ಅಪ್ಪಣ್ಣ ಹೆಗಡೆಯವರ ಹೋರಾಟದ ಬದುಕು, ತೆಲಂಗಾಣ ಹೋರಾಟ ಹಾಗೂ ನಕ್ಸಲೈಟ್ ಚಳವಳಿಯ ನಡುವಿನ ಒಂದು ಹೊನ್ನಿನ ಅಧ್ಯಾಯದಂತೆ ಕಾಣುತ್ತದೆ. ಅವರದ್ದು ತೀರ್ಥಹಳ್ಳಿಯ ಜನಜೀವನದಲ್ಲಿ ಸಮಗ್ರವಾಗಿ ಹೆಣೆದುಕೊಂಡ ಜೀವಚೇತನ. ಆದರೆ ಮಲೆನಾಡಿನ ಜನರ ಮತಿಯಲ್ಲಿ ಅವರ ಬದುಕು ಅಳಿಸಿ ಹೋಗಿದೆ.
 
ಯು.ಆರ್.ಅನಂತಮೂರ್ತಿಯವರ ಗದ್ಯ ಸಾಹಿತ್ಯದಲ್ಲಿ ಮಲೆನಾಡಿನ, ಅದರಲ್ಲೂ ತೀರ್ಥಹಳ್ಳಿ ಪ್ರದೇಶದ, ಜನಜೀವನದ ನಿರೂಪಣೆ ಮೈದುಂಬಿಕೊಂಡು ಹರಿಯುತ್ತದೆ. ಕಾಂಗ್ರೆಸ್ ಹಾಗೂ ಸೋಶಿಯಲಿಸ್ಟ್ ರಾಜಕೀಯದಲ್ಲಿ ಮುಳುಗೇಳುವ, ಲೇಖಕನ ಇಚ್ಛೆಯ ಪರಿಮಿತಿಯನ್ನೂ ಉಲ್ಲಂಘಿಸಿ ಲೋಕಕಾಂತಿಯಲ್ಲಿ ಬೆಳಗುವ ಜೀವಂತ ಪಾತ್ರಗಳು ಅವರ ಕಥನದಲ್ಲಿ ಸಾಕಷ್ಟಿವೆ. 

ಆದರೆ, ಅನಂತಮೂರ್ತಿ ಅವರ ಕಥಾಲೋಕದ ಕಮ್ಯುನಿಸ್ಟ್ ಪಾತ್ರಗಳು ಮಾತ್ರ, ಲೇಖಕನ ಇಷ್ಟಾಕೃತಿಗೆ ತಕ್ಕಂತೆ ಕತ್ತರಿಸಲ್ಪಟ್ಟ, ಸ್ವತಂತ್ರ ಅಸ್ತಿತ್ವವಿಲ್ಲದ ಅಣಕುಪಾತ್ರಗಳು (ಕ್ಯಾರಿಕೇಚರ್ಸ್). `ಅವಸ್ಥೆ`ಯ ಅಣ್ಣಾಜಿ, `ಆಕಾಶ ಮತ್ತು ಬೆಕ್ಕು`ವಿನ ಗೋವಿಂದನ್ ನಾಯರ್, ಯಾರಿಗೂ ಯಾಕೆ ಅಪ್ಪಣ್ಣ ಹೆಗಡೆಯವರ ಜೀವಂತಿಕೆ ಇಲ್ಲ.` ಅನಂತಮೂರ್ತಿಯವರ ಕಥಾಲೋಕದ ಬಗ್ಗೆ ಗೌರವವಿಟ್ಟುಕೊಂಡೇ, ಈ ಪ್ರಶ್ನೆ ಕೇಳಬೇಕು. 
ಕಮ್ಯುನಿಸ್ಟ್ ಪಕ್ಷಗಳ ಲಾಗಾಯ್ತಿನ ಧೋರಣೆ ಹಾಗೂ ರಾಜಕೀಯ ವರಸೆಗಳನ್ನು ವಿಮರ್ಶಿಸಬೇಕು, ಅವರು ಎಸಗುವ ತಪ್ಪುಗಳನ್ನು ಟೀಕಿಸಬೇಕು- ಇದರಲ್ಲಿ ಎರಡು ಮಾತಿಲ್ಲ. ಹಾಗಂತ, ಭಾರತದ ಕಮ್ಯುನಿಸ್ಟರ ಬದುಕು ಮತ್ತು ರಾಜಕೀಯಗಳ ಪ್ರಸ್ತುತತೆಯನ್ನು ಕಡೆಗಣಿಸಕೂಡದು; ಹಾಗೆ ಮಾಡಿದಲ್ಲಿ ಬಡವರ ಬದುಕಿನ ಬವಣೆ, ಅವರ ಹಕ್ಕಿನ ನಿರೂಪಣೆ ಮತ್ತು ಹೋರಾಟಗಳಿಗೆ ನಾವು ಕುರುಡಾಗಿಬಿಡುತ್ತೇವೆ. 

ಊರಲ್ಲಿ ಬಾಳಿ ಬದುಕಿ, ಹೋರಾಡಿದ ಕಕ್ಕಿಲ್ಲಾಯ, ಅಪ್ಪಣ್ಣ ಹೆಗಡೆಯಂಥವರ ಬದುಕೇ ಜನರ ಲೋಕತಿಳಿವಳಿಕೆಯಿಂದ `ಅದೃಶ್ಯ`ವಾಗಿದೆ; ಇನ್ನು ನಾಡಿನಿಂದ `ಅದೃಶ್ಯ`ರಾಗಿ, ಕಾಡಿನಲ್ಲಿರುವ ಆದಿವಾಸಿಗಳನ್ನು, ತಮ್ಮ ಬದುಕಿನ ಹಕ್ಕನ್ನು ಕಿತ್ತುಕೊಳ್ಳುವ ಉಳ್ಳವರ ಯೋಜನೆಗಳ ವಿರುದ್ಧದ ಹೋರಾಟಕ್ಕೆ ಸಂಘಟಿಸುತ್ತಿರುವ ನಕ್ಸಲೈಟರು `ದೇಶದ ಭದ್ರತೆಗೆ ಒದಗಿರುವ ಏಕೈಕ ದೊಡ್ಡ ಅಪಾಯ`ವೆಂದು ಮನಮೋಹನ್ ಸಿಂಗ್ ಹೇಳದೇ ಇರುತ್ತಾರೆಯೇ!

                                                                                          ಕೆ. ಫಣಿರಾಜ್  (ಕೃಪೆ, ಪ್ರಜಾವಾಣಿ)

Friday, 22 June 2012

ನಮ್ಮೆಲ್ಲರ ಕನಸಿನ ಕೂಸು 'ವಿದ್ಯಾರ್ಥಿ ಧ್ವನಿ' ಬಿಡುಗಡೆಯಾಗಿದೆ

ಹೌದು ನಾನು ಎಸ್.ಎಫ್.ಐ ಗೆ ಸೇರಿದಾಗಿನಿಂದ ಅಲ್ಲಿ ಕೆಲಸ ಮಾಡುತ್ತಿದ್ದವರೆಲ್ಲರ ಕನಸು ಒಂದು ಪತ್ರಿಯನ್ನು ಪ್ರಾರಂಬಿಸಬೇಕೆನ್ನುವುದು. ಅದಕ್ಕಾಗಿ ಎಲ್ಲರೂ ನಿರಂತರ ಚರ್ಚೆಗಳನ್ನು ನಡೆಸುತ್ತಿದ್ದೆವು, ಆ ಎಲ್ಲ ಚರ್ಚೆಗಳು ಸಾಕಾರಗೊಳ್ಳುವಂತೆ ನಮ್ಮೆಲ್ಲರ ಕನಸಿನ ಕೂಸಾಗಿದ್ದ 'ವಿದ್ಯಾರ್ಥಿ ಧ್ವನಿ' ಪತ್ರಿಕೆ ಬಿಡುಗಡೆಯಾಗಿಯೇ ಬಿಟ್ಟಿತು. ಜೂನ್ 16 ರಿಂದ 19 ರವರೆಗೆ ಕೊಪ್ಪಳದ ಪಾನಗಂಟಿ ಕಲ್ಯಾಣ ಮಂಟಪದಲ್ಲಿ ಎಸ್.ಎಫ್.ಐ ನ ರಾಜ್ಯ ಮಟ್ಟದ ಅಧ್ಯಯನ ಶಿಬಿರವನ್ನು ಆಯೋಜಿಸಲಾಗಿತ್ತು ಅದೇ ಸಂರ್ಭದಲ್ಲಿ 18 ನೇ ತಾರೀಕಿನಂದು ಶಿಬಿರದಲ್ಲಿ ಸೇರಿದ್ದ 250 ಪ್ರತಿನಿಧಿಗಳ ಮುಂದೆ ನಾವುಗಳು ಇಷ್ಟು ವರ್ಷ ಕಾತುರದಿಂದ ಕಾಯುತ್ತಿದ್ದ ಗಳಿಗೆ ಬಂದೇ ಬಿಟ್ಟಿತಲ್ಲ ಎಂಬ ಸಂತೋಷ. ಅದೇ ಸಂತೋಷವನ್ನು ನಾನು ಎಲ್ಲ ಪ್ರತಿನಿಧಿಗಳ ಮುಖಗಳಲ್ಲೂ ನೋಡಿ ಕಣ್ ತುಂಬಿಕೊಂಡೆ. ಪತ್ರಿಕೆಯ ಮೊದಲ ಸಂಚಿಕೆಯನ್ನು ಹೊರತರಲು ನಾನು ತೊಡಗಿಸಿಕೊಂಡಿದ್ದರಿಂದ (ಬಹಳ ದಿನಗಳ ಕನಸೂ ಆಗಿದ್ದರಿಂದ) ಬಿಡುಗಡೆಯಾದ ಮೇಲೆ ಪತ್ರಿಕೆಯ ಬಗೆಗಿನ ಅಭಿಪ್ರಾಯಗಳಿಗಾಗಿ ಕಾತುರದಿಂದಿದ್ದೆ ಆದರೆ ನಮ್ಮೆಲ್ಲರ ಶ್ರಮ ಸಾರ್ಥಕವಾಗಿದೆ ಎನಿಸಿದ್ದು ಪ್ರತಿಯೊಬ್ಬರೂ ಪತ್ರಿಕೆಯನ್ನು ನೋಡಿದಾಗ ಅದರ ಕುರಿತು ವ್ಯಕ್ತಪಡಿಸಿದ ಪ್ರಶಂಸೆಯ ಮಾತುಗಳು ಸಂತೋಷವನ್ನು ತರುವ ಜೊತೆಗೆ ಪತ್ರಿಕೆಯ ಜವಾಭ್ದಾರಿ ಹೊತ್ತಿರುವ ಇಡೀ ತಂಡದ ಕೆಲಸವನ್ನು ಹೆಚ್ಚಿಸಿದೆ.
ವಿದ್ಯಾರ್ಥಿ ಧ್ವನಿ ಬಿಡುಗಡೆಯು ಅತ್ಯಂತ ವಿಶೇಷವಾಗಿತ್ತು ಶಿಬಿರದಲ್ಲಿ ಭಾಗವಹಿಸಿದ್ದ ಅತ್ಯಂತ ಕಿರಿಯ ಸಂಗಾತಿಗಳಾದ ಕೊಪ್ಪಳದ ಮಂಜುನಾಥ್, ಗದಗ್ ನ ಸಂಗಮ್ಮ ಹಿರೇಮಠ, ಮಂಡ್ಯದ ನಟರಾಜು ಇವರುಗಳು ನಮ್ಮೆಲ್ಲರ ಕನಸಿನ ಬುತ್ತಿಯನ್ನ ಲೋಕಾರ್ಪಣೆಮಾಡಿ ಪತ್ರಿಕೆಯ ಪ್ರತಿಯನ್ನು ನನಗೆ ಹಸ್ತಾಂತರಿಸಿದಾಗ ನಿಜವಾಗಲೂ ನಾನು ಭಾವುಕನಾಗಿದ್ದೆ.
ಇದೇ ಸಂದರ್ಭದಲ್ಲಿ ನನಗೆ ಲೆನಿನ್ ರ ಮಾತು ನೆನಪಿಗೆ ಬರುತ್ತದೆ ಅವರು 'ಪತ್ರಿಕೆ ಚಳುವಳಿಯ ಅಸ್ತ್ರವಿದ್ದಂತೆ' ಎಂದು ಹೇಳಿದ್ದರು. ನಿಜ ಪ್ರಸಕ್ತ ಸಂದರ್ಭದಲ್ಲಿ ಮಾಧ್ಯಮಗಳು ಒಂದೆಡೆ ಜಾಗತೀಕರಣದ ಪ್ರಭಾವಗಳಿಗೆ ಒಳಗಾಗಿ ಆಳುವ ವರ್ಗದ ಪರವಾದ ಮತ್ತು ಉಳ್ಳವರ ಪರವಾದ ಸುದ್ದಿಗಳನ್ನು ಬಿತ್ತರಿಸುವುದರ ಜೊತೆಗೆ ಕೇವಲ ಸೆಕ್ಸ್, ಕ್ರೈಮ್, ಬ್ರೇಕಿಂಗ್ ಗಳ ಬೆನ್ನಹತ್ತಿ ಟಿ.ಆರ್.ಪಿ ರೇಟಿಂಗ್ ಮತ್ತು ಪ್ರಸಾರ ಹೆಚ್ಚಳಕ್ಕಾಗಿ ಅನಾರೋಗ್ಯಕರ ಸ್ಫರ್ಧೆಗೆ ಬಿದ್ದು ಸಮಾಜದ ಸ್ವಾಸ್ಥ್ಯವನ್ನು ಹಾಳುಮಾಡುತ್ತ ವಿದ್ಯಾರ್ಥಿ - ಯುವಜನರನ್ನು ದಾರಿತಪ್ಪಿಸುತ್ತಿರುವ ಈ ಸಂದರ್ಭದಲ್ಲಿ ವಿದ್ಯಾರ್ಥಿ ಚಳುವಳಿಯ ಮುಖವಾಣಿಯಾಗಿ ವಿದ್ಯಾರ್ಥಿ ಧ್ವನಿ ಪ್ರಾರಂಬವಾಗಿರುವುದು ಪ್ರಸಕ್ತ ಮಾಧ್ಯಮಗಳ ಎಲ್ಲ ಕೊರತೆಗಳನ್ನು ತುಂಬಲು ಪ್ರಾಮಾಣಿಕವಾಗಿ ಪ್ರಯತ್ನಿಸಲಿ ಮತ್ತು ದ್ವೈಮಾಸಿಕವಾಗಿರುವ ಪತ್ರಿಕೆ ಆದಷ್ಟು ಬೇಗ ಮಾಸಿಕವಾಗಲಿ ಮತ್ತು ಕರ್ನಾಟಕದಲ್ಲಿ ಎಲ್ಲರೂ ಗುರುತಿಸುವ ಉತ್ತಮ ಪತ್ರಿಕೆಯಾಗಿ ಮೂಡಿಬರಲಿ ಎಂದು ಆಶಿಸುತ್ತೇನೆ.

ಸಮಾನತೆ ಬಯಸುವವರ ಸದಾ ಜೊತೆಗಾರ.......ಈ ಅರ್ನೆಸ್ಟೋ ಚೆಗೆವಾರ


ನಿಮಗೆ ಫುಟ್ಬಾಲ್ ಜಗತ್ತಿನ ದಂತಕತೆ ...ಅರ್ಜೆಂಟೈನಾದ ಮರಡೋನಾ ಗೊತ್ತಲ್ವ? ಅಹಾ! ಗೊತ್ತಿದ್ರೆ ಅವರ ಬಲಗೈ ತೋಳನ್ನು ಗಮನಿಸಿದ್ದಿರಾ? ಹೌದು ಜಗತ್ತಿನ ಕ್ರಾಂತಿಕಾರಿಗಳಿಗೆಲ್ಲಾ ಈಗಲೂ ಸ್ಪೂರ್ತಿಯ ಚಿಲುಮೆಯಾದ ಚೇ ನ ಮುಖವನ್ನು ಅಚ್ಚೆ...ಯನ್ನಾಗಿ ಮರಡೊ ನಾ ತನ್ನ ತೋಳಿನ ಮೇಲೆ ಹಾಕಿಸಿಕೊಂಡಿದ್ದಾರೆ. 

ಭಾರತೀಯ ಕ್ರಿಕೆಟ್ ತಂಡದ ಕ್ಯಾಪ್ಟನ್ ಮಹೇಂದ್ರಸಿಂಗ್ ದೋನಿ ಕೂಡ ಆಗಾಗ ಚೇ ಮುಖಚಿತ್ರವಿರುವ ಟೀಶರ್ಟ್ ಧರಿಸಿಕೊಂಡು ಓಡಾಡುತ್ತಿರುವುದನ್ನು ನೀವು ಗಮನಿಸಿರಬೇಕು. ಬಹುಶ: ಅದೇ ಕಾರಣಕ್ಕೆ ನೂರಾರು ಕ್ರಿಕೆಟ್ ಅಭಿಮಾನಿಗಳು ಕೂಡ ಎಷ್ಟೋ ಬಾರಿ ಅದನ್ನೇ ಅನುಕರಣೆ ಮಾಡುತ್ತಿರುವುದನ್ನು ನಾವು ಕಾಣುತ್ತೇವೆ.

ಹೌದು ಜಗತ್ತಿನ ಯಾವುದೋ ಒಂದು ಮೂಲೆಯಲ್ಲಿ ಹುಟ್ಟಿ..ಇನ್ನೇಲ್ಲೋ ಬೆಳೆಯುತ್ತಾ..ಸಮಾನತೆ ಬೆಳೆಯನ್ನು ಬೆಳೆದು, ಮತ್ತೆಲ್ಲೋ ಕ್ರಾಂತಿ ಬೀಜ ಬಿತ್ತುವ ಕನಸು ಕಾಣುತ್ತಾ ಸಾಮ್ರಾಜ್ಯಶಾಹಿ ಹೆಣೆದ ಪಿತೂರಿಗೆ ಬಲಿಯಾದ ಚೇ, ಅಂದರೆ ಆರ್ನೆಸ್ಟೊ ಚೆಗುವಾರ ಅಂದು...ಇಂದು..ಮಾತ್ರವಲ್ಲ...ಮುಂದೆಯೂ ಯುವಜನರಿಗೆ ಐಕಾನ್ ಆಗಿ ಯಾಕೆ ಕಾಡುತ್ತಾರೆ.. ? 

ಫುಟ್ ಬಾಲ್ ದಂತಕಥೆ ಮರಡೊನಾ
ಇದಕ್ಕೆ ಮೂರು ರೀತಿಯಲ್ಲಿ ಉತ್ತರವಿದೆ. ಒಂದು, ಆಧುನಿಕ ಜಗತ್ತಿನಲ್ಲಿ ಚೆಗುವಾರನನ್ನು ಫ್ಯಾಶನ್ನ್ನಾಗಿ ಬಳಸುವ ಯುವಜನರನ್ನು ನಮ್ಮ ಸಮಾಜದಲ್ಲಿ ಕಾಣಸಿಗುತ್ತಾರೆ. ಇವರಿಗೆ ಚೆ ಎಂದರೆ ಒಂದು ಫ್ಯಾಶನ್ ಆದರೂ ಅರೆ-ಬರೆ ಅಲ್ಲಿ ಇಲ್ಲಿ ಸಿಗುವ ಮಾಹಿತಿಯಿಂದ ಸ್ಪೂರ್ತಿಗೊಂಡು ಚೆ ನ ಆಕರ್ಷಕ ಟೀ ಶರ್ಟ್, ಕೀ ಚೈನ್ ಇತ್ಯಾದಿಗಳ ಮೂಲಕ ಚೆ ಯನ್ನು ಆರಾಧಿಸುವವರು. ಅದರಾಚೆ ಊಹ ಅವರಿಗೆ ಏನೇನೂ ಗೊತ್ತಿಲ್ಲ. ನೀವು ಬೆಂಗಳೂರಿನ ಪ್ರತಿಷ್ಠಿತ ಎಂಜಿ ರಸ್ತೆ, ಬ್ರೀಗೆಡ್ ರಸ್ತೆ, ಮಂಗಳೂರು, ಮಾತ್ರವಲ್ಲ ಗೋವಾ, ಮುಂಬೈ, ದೆಹಲಿ, ಕೋಲ್ಕತ್ತಾ ದಂತಹ ಮಹಾನಗರಗಳಲ್ಲಿ ಇಂತಹ ಯುವಜನರು ಕಾಣುತ್ತಾರೆ. ಇವರು ಬಹತೇಕ ಜಾಹಿರಾತು, ಬ್ಲಾಗು ಮತ್ತು ವೆಬ್ಸೈಟ್ಗಳ ಮೂಲಕ ಚೆ ನತ್ತ ಆಕರ್ಷಕವಾದವರು. ಎರಡನೆಯದು ನಮ್ಮ ದೇಶದ ಹಾಗೂ ಜಗತ್ತಿನ ಹೆಸರಾಂತ ವಿಶ್ವವಿದ್ಯಾನಿಲಯಗಳಲ್ಲಿ  ನಡೆಯುತ್ತಿರುವ ನಿರಂತರ ಪ್ರಗತಿಪರ ಹಾಗೂ ಕ್ರಾಂತಿಕಾರಕ ಚರ್ಚೆಗಳಿಗೆಲ್ಲಾ ಚೆ..ನ ಬರಹ..ಭಾಷಣಗಳು ಸಾಕಷ್ಟು ಸ್ಪೂರ್ತಿಯಾಗುತ್ತವೆ. ಹಾಗಾಗಿ ಚೆ ನ ಬರಹ, ಅವನ ಕುರಿತಾದ ಸಿನಿಮಾಗಳನ್ನು ನೋಡುತ್ತಾ ಬದಲಾವಣೆಯತ್ತ ಮುಖಮಾಡುವ ವಿಭಾಗವೊಂದಿದೆ. ಇನ್ನೂ ಮೂರನೆಯದಾಗಿ ಸಮಾಜ ಬದಲಾವಣೆಯ ಕನಸುಗಳನ್ನು ಹರಸುತ್ತಾ ಚಳುವಳಿ ಕಟ್ಟುತ್ತಾ ಅದಕ್ಕೆ ಪೂರಕವಾಗಿ ಶೋಷಿತ ಜನರೆಲ್ಲರನ್ನು ಒಂದಾಗಿಸುವ ಕಾಯಕದಲ್ಲಿ ನಿರತರಾಗಿರುವ ಮತ್ತೊಂದು ವಿಭಾಗ ಹೀಗೆ..ಒಟ್ಟಿನಲ್ಲಿ ಜಗದಗಲ ಹರಡಿಕೊಂಡಿರುವ  ಈ ಮೂರು ಜನವಿಭಾಗಗಳಿಗೂ ಯಾವುದೊ ಒಂದು ರೀತಿಯಲ್ಲಿ ಚೆ ಸ್ಪೂರ್ತಿಯೇ! 

ಯಾರು ಈ ಚೆಗೆವಾರ ?

ಅರ್ಜೆಂಟೈನಾದಲ್ಲಿ 1928 ರ ಜೂನ್ 14 ರಂದು ಜನಿಸಿದ ಆರ್ನೆಸ್ಟೊ ಚೆಗೆವಾರ ನಿಜ ಹೇಳಬೇಕೆಂದರೆ ಹುಟ್ಟಿನಿಂದಲೇ ಆಸ್ತಮರೋಗಿ! ಹಾಗಿಗ್ಯೂ ಚೆಗೆವಾರನೊಳಗೊಬ್ಬ ಡಾಕ್ಟರ್ ಇದ್ದ, ಬರಹಗಾರನಿದ್ದ, ಬುದ್ದಿಜೀವಿ ಇದ್ದ, ಸಹಾಸಗಾರನಿದ್ದ, ರಾಜತಾಂತ್ರಿಕನಿದ್ದ, ಸಮಾನತೆಗಾಗಿ ಹಾತೊರೆಯುವ ಕ್ರಾಂತಿಕಾರಿ ಯೋಧ, ಗೆರಿಲ್ಲಾ ಕಮಾಂಡರ್..ಹೀಗೆ ಎಲ್ಲವೂ ಅಡಗಿಕುಳಿತ್ತಿದ್ದ.

ಹುಟ್ಟಿದ್ದು ಲ್ಯಾಟೀನ್ ಅಮೇರಿಕಾದ ಅರ್ಜೆಂಟೈನಾವಾದರೂ..ನಂತರ. ಗ್ವಾಟೆಮಾಲದಿಂದ ಆರಂಭಗೊಳ್ಳುವ ಚೆಗೆವಾರನ ಪಯಣ ಬೋರಿಸ್ ಐರಿಸ್, ಮೆಕ್ಸಿಕೊ, ಕ್ಯೂಬಾ ದಾಟಿ ನಂತರ ಕಾಂಗೋ, ಆಫ್ರಿಕಾ ತಲುಪಿ ಅಂತಿಮವಾಗಿ ಬೋಲಿವಿಯಾದಲ್ಲಿ ಕೊನೆಗೊಳ್ಳುವ ತನಕ ನಿರಂತರ ದುಡಿತ. ಓದಿದ್ದು ವೈದ್ಯಕೀಯವಾದರೂ ಚೆಗುವಾರನ ಮನಸು ಸದಾ ಹಾರುವ ಕುದುರೆ. ವೈದ್ಯಕೀಯ ಶಿಕ್ಷಣ ಮುಗಿಯುತ್ತಿದ್ದಂತೆ ಚೆ, ಇಡೀ ಲ್ಯಾಟಿನ್ ಅಮೇರಿಕಾವನ್ನೆ ಸುತ್ತಾಡಲು ತನ್ನ ಮೋಟರ್ ಬೈಕ್ ಏರಿಯೇ ಬಿಟ್ಟ! ಆಗಲೇ ಅಲ್ಲಿನ ಬಡತನದ ಕ್ರೂರ ದರ್ಶನ, ಆರ್ಥಿಕ ಅಸಮಾನತೆ, ವಸಹಾತುಶಾಹಿ ಹಾಗೂ ಸಾಮ್ರಾಜ್ಯಶಾಹಿಗಳು ಮತ್ತವರ ಏಜೆಂಟರು ನಡೆಸುತ್ತಿದ್ದ  ಕ್ರೂರ ದಬ್ಬಾಳಕೆಗಳು ಚೆಗೆವಾರನ ಮನಸಿನೊಳಗೆ ಬೆಂಕಿಯ ಜ್ವಾಲೆಯನ್ನೆಬ್ಬಿಸಿದವು. ಹೀಗಾಗಿಯೇ ಲ್ಯಾಟೀನ್ ಅಮೇರಿಕಾದ ತನ್ನ ತಿರುಗಾಟದಿಂದ ವಾಪಸ್ಸಾದ ಚೆ, ಅಲ್ಲಿಂದ ಅಮೇರಿಕಾದ ಕೈಗೊಂಬೆಯಾಗಿ ಜನರ ಶೋಷಣೆ ಯಲ್ಲಿ ನಿರತನಾಗಿದ್ದ ಗ್ವಾಟೆಮಾಲದ ಸರ್ವಾಧಿಕಾರಿ ವಿರುದ್ದ, ನಂತರ ಮೆಕ್ಸಿಕೊಗಳಲ್ಲಿ ಹೋರಾಟಗಳನ್ನು ನಡೆಸುತ್ತಾ ಬಂದರು. ಆಗ ಮೆಕ್ಸಿಕೊದಲ್ಲಿ ಭೂಗತರಾಗಿದ್ದುಕೊಂಡೆ ಅಮೇರಿಕಾದ ಸಿಐಎ ಏಜೆಂಟನಾಗಿ  ಅಧಿಕಾರ ನಡೆಸುತ್ತಿದ್ದ ಕ್ಯೂಬಾದ ಬಾಟಿಸ್ಟ್ ಆಡಳಿತ ಕೊನೆಗಾಣಿಸಲು ಹೋರಾಟನಿರತರಾಗಿದ್ದ ಫಿಡೆಲ್ಕ್ಯಾಸ್ಟ್ರೋ ಹಾಗೂ ರಾವುಲ್ ಕ್ಯಾಸ್ಟ್ರೊರನ್ನು ಚೆ ಕೊಡಿಕೊಂಡರು.

ನನಸಾದ ಕ್ರಾಂತಿಯ ಕನಸು.

ಲ್ಯಾಟೀನ್ ಅಮೇರಿಕಾದಲ್ಲಿ ಸಾಮ್ರಾಜ್ಯಶಾಹಿಯ ಕ್ರೂರಮುಖವನ್ನು ತನ್ನ ತಿರುಗಾಟದಲ್ಲಿ ಕಂಡಿದ್ದ ಚೆಗುವಾರನ ಮನಸು ಸದಾ ಕ್ರಾಂತಿಗಾಗಿ ಹಂಬಲಿಸುತ್ತಿತ್ತು. ಹಾಗಾಗಿ ಚೇ  ಜಗತ್ತಿನ ಯಾವುದೇ ಮೂಲೆಯಲ್ಲಿ ಅನ್ಯಾಯ ನಡೆಯಲಿ ಅದನ್ನು ನೀನು ಪ್ರತಿಭಟಿಸುವೆಯಾದರೆ ನೀನು ನನ್ನ ಸಂಗಾತಿ' ಎಂದು ಕರೆ ನೀಡಿದ್ದರು. ಇದಕ್ಕೆ ಪೂರಕವೆಂಬಂತೆ ಫಿಡೆಲ್ಕ್ಯಾಸ್ಟ್ರೋ ಹಾಗೂ ರಾವುಲ್ ಕ್ಯಾಸ್ಟ್ರೊ ಮತ್ತಿತರೆ ಸಂಗಾತಿಗಳು ಕ್ಯೂಬಾವನ್ನು ಸರ್ವಾಧಿಕಾರಿ ಬಾಟಿಸ್ಟ್ ನಿಂದ ವಿಮೋಚನೆಗೊಳಿಸಲು ಯುದ್ದವನ್ನೇ ಸಾರಿದ್ದರು. ಅವರೊಂದಿಗೆ ಸಿಯೆರ್ರಾ ಮೆಸ್ತಾ ಅರಣ್ಯ ಸೇರಿದ ಚೆಗೆವಾರ ಕ್ಯೂಬಾ ವಿಮೋಚನಾ ಪಡೆಯ ಕಮಾಂಡರ್ ಆಗಿ ಸತತ ಎರಡು ವರ್ಷಗಳ ಕಾಲ ಬಾಟಿಸ್ಟ್ನ ಸೈನ್ಯವನ್ನು ಎದುರಿಸಿ ಅಪಾರ ಕಷ್ಟಗಳನ್ನು ಅನುಭವಿಸಿದರು. ನಂತರ ಅಂತಿಮವಾಗಿ 'ಗ್ರಾನ್ಮ' ಎನ್ನುವ ನೌಕೆಯೊಂದಿಗೆ ತನ್ನ ಯಾನ ಆರಂಭಿಸಿ ಕ್ಯೂಬಾ ರಾಜಧಾನಿ'ಹವನಾ' ತಲುಪುತ್ತಿದ್ದಂತೆ ಬಾಟಿಸ್ಟ ನ ವಿರುದ್ದ ಹೋರಾಡುತ್ತಿದ್ದ ಜನರಿಂದ ಫಿಡಲ್, ರಾಹುಲ್ ಜೊತೆಗೆ ಚೆ ಗೂ ವಿರೋಚಿತ ಸ್ವಾಗತ ದೊರೆಕಿತು. ಅಂತಿಮವಾಗಿ 1959 ಜನವರಿ 1 ರಂದು ಕ್ಯೂಬಾ ವಿಮೋಚನೆಗೊಂಡು ಸಮಾಜವಾದಕ್ಕೆ ತನನ್ನು ಅಪರ್ಿಸಿಕೊಂಡಿತು. ಬದಲಾವಣೆಗಾಗಿ ಸದಾ ತುಡಿಯುತ್ತದ್ದ ಚೇ ಮುಖದಲ್ಲಿ ಒಂದು ಸುತ್ತಿನ ಗೆಲುವಿನ ನಗು..

ಕ್ಯೂಬಾದ ನಾಗರಿಕತ್ವ...ವಿದೇಶಿ ತಿರುಗಾಟ..

ಅರ್ಜೆಂಟೈನಾದಲ್ಲಿ ಹುಟ್ಟಿ ಬೋರಿಸ್ ಐರಿಸ್ನಲ್ಲಿ ವೈದ್ಯಕೀಯ ಪದವಿ ಪಡೆದು ಇಡೀ ಲ್ಯಾಟೀನ್ ಅಮೇರಿಕಾವನ್ನೇ ಮೋಟರ್ಬೈಕ್ನಲ್ಲಿ ಎರಡು ಸುತ್ತು ಹಾಕಿದ (ಮೊದಲನೆ ಬಾರಿ ಕ್ರಮಿಸಿದ ದಾರಿ 4500 ಕೀ.ಮೀಟರ್, ಎರಡನೆ ಬಾರಿ ಸುತ್ತಾಡಿದ ದಾರಿ 8000 ಕೀ.ಮೀಟರ್) ಹಾಗೂ ಗ್ವಾಟೆಮಾಲ ಹಾಗೂ ಮೆಕ್ಸಿಕೊಗಳಲ್ಲಿ ನಡೆದ ಚಳುವಳಿಗಳಲ್ಲಿ ಪಾಲ್ಗೊಂಡ ಯುವ ಚೆಗುವಾರನಿಗೆ ಅಂತಿಮವಾಗಿ ತಾನು ಕಂಡ ಕ್ರಾಂತಿಯ ಕನಸನ್ನು ಕ್ಯೂಬಾ ಮಣ್ಣಿನಲ್ಲಿ ನನಸಾಗಿಸಲು ಸಾಧ್ಯವಾದದ್ದು ಒಂದು ವಿಚಿತ್ರವೇ. ಆದರೆ ಬಾಫಿಸ್ಟನ ದುರಾಡಳಿತವನ್ನು ಕಿತ್ತೊಗೆಲು ತನ್ನನ್ನೇ ಸಮರ್ಪಿಸಿಕೊಂಡ ಚೆಗೆವಾರನನ್ನು ಕ್ಯೂಬಾ ಮತ್ತು ಆ ದೇಶದ ಜನತೆ ಮಾತ್ರ ಕೈ ಬಿಡಲಿಲ್ಲ. ಕ್ರಾಂತಿಯ ನಂತರದ ಕೆಲವೇ ದಿನಗಳಲ್ಲಿ ಚೆ ಮತ್ತು ಆತನ ಕುಟುಂಬಕ್ಕೆ ತನ್ನ ದೇಶದ ಪೌರತ್ವವನು ನೀಡಿ ಕ್ಯೂಬಾಕ್ಕೆ ಬರಮಾಡಿಕೊಂಡಿತು. ಮಾತ್ರವಲ್ಲ ಅವರ ಕುಟುಂಬವನ್ನು ಸಾಕುವ ಜವಾಬ್ದಾರಿಯನ್ನು ಸ್ವತ: ಕ್ಯೂಬಾದ ಹೂಸಸರ್ಕಾರ ವಹಿಸಿಕೊಂಡಿತು. ನಂತರ ಫಿಡಲ್ ಕ್ಯಾಸ್ಟ್ರೋ ನೇತೃತ್ವದಲ್ಲಿ ರಚನೆಯಾದ ಸರ್ಕಾರದಲ್ಲಿ ಚೆಗೆವಾರ ಆಥರ್ಿಕ ಮತ್ತು ಕೈಗಾರಿಕಾ ಸಚಿವರಾಗಿ ಅಲ್ಲದೆ ಕ್ಯೂಬಾ ರಿಜರ್ವಬ್ಯಾಂಕ್ನ ಗವರ್ನರ್ ಆಗಿ ನೇಮಕವಾದರು. ಬಾಫಿಸ್ಟನ ದುರಾಡಳಿತವು ಕ್ಯೂಬಾದ ಆರ್ಥಿಕತೆಯನ್ನು ನಾಶಮಾಡಿತ್ತು. ಇರುವ ಸಂಪತ್ತೆಲ್ಲವನ್ನೂ ಕೂಗಳತೆ ದೂರದಲ್ಲಿದ್ದ ಅಮೇರಿಕಾದ ಆಳರಸರ ದುರಾಸೆಧಾರೆ ಎರೆಯಲಾಗಿತ್ತು. ಇಂತಹ ಸನ್ನಿವೇಶದಲ್ಲಿ ಸಂಕಷ್ಟದಲ್ಲಿದ್ದ ಕ್ಯೂಬಾ ಜನರಿಗೆ ಶಿಕ್ಷಣ, ಉದ್ಯೋಗ, ಆಹಾರ, ವಸತಿಯಂತಹ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ತುತರ್ು ಕರ್ತವ್ಯಗಳು ಫಿಡೆಲ್ ಸಕರ್ಾರದ ಮುಂದಿದ್ದವು. ಬಹುಶ: ಆ ಸಂಕಷ್ಟದ ದಿನಗಳಲ್ಲಿ ಫಿಡಲ್ಗೆ ಚೆ ನಿಜವಾದ ಸಂಗಾತಿಯಾಗಿ ಕೆಲಸ ಮಾಡಿದರು. ಕ್ಯೂಬಾದ ಕೈಗಾರಿಕಾ ಮತ್ತು ಆರ್ಥಿಕ ಅಭಿವೃದ್ದಿಗಾಗಿ ಅವರು ಅಂದಿನ ಸೋವಿಯತ್ ರಷ್ಯಾಕ್ಕೆ ಹಲವು ಸಲ ಭೇಟಿ ನೀಡಿ ಕ್ಯೂಬಾಕ್ಕೆ ಅಗತ್ಯವಿದ್ದ ವಿಜ್ಞಾನ ಹಾಗೂ ತಂತ್ರಜ್ಞಾನದ ನೆರವನ್ನು ಪಡೆದರು. ಅಲ್ಲದೆ ಕ್ಯೂಬಾದಲ್ಲಿ ವಿಪುಲವಾಗಿ ಬೆಳೆಯುತ್ತಿದ್ದ ಅತ್ಯತ್ತಮ ಸಿಹಿಗುಣ ಹೊಂದಿದ  ಕಬ್ಬಿನ ಸಕ್ಕರೆಗೆ ಉತ್ತಮ ಮಾರುಕಟ್ಟೆ ಕಲ್ಪಿಸಲು ಯೋರೋಪ್, ಏಷ್ಯಾ ಹಾಗೂ ಅಫ್ರಿಕಾದ ಹಲವು ದೇಶಗಳಲ್ಲಿ ಸಂಚರಿಸಿದರು. ಆ ಮೂಲಕ ದೇಶದ ವಿದೇಶಿ ವಿನಿಮಯವನ್ನು ಹೆಚ್ಚಿಸಿದರು. ಆದರೆ, ಬಾಫಿಸ್ಟನ ಆಡಳಿದಿಂದ ಕ್ಯೂಬಾವನ್ನು ಲೂಟಿಹೊಡೆದ ಅಮೇರಿಕಾ ಮಾತ್ರ ಕ್ರಾಂತಿಯಾಗಿ ಫಿಡಲ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಕ್ಯೂಬಾದ ಮೇಲೆ ಎಲ್ಲಾ ರೀತಿಯ ನಿರ್ಬಂಧಗಳನ್ನು ವಿಧಿಸಿತು. ವಿಶ್ವಸಂಸ್ಥೆಯಲ್ಲಿ ಸ್ವತ: ಚೆಗೆವಾರ ಕ್ಯೂಬಾ ಸೇರಿದಂತೆ ಲ್ಯಾಟೀನ್ಅಮೆರಿಕಾದ ವಿವಧ ದೇಶಗಳಲ್ಲಿ ಹೇಗೆ ಅಮೇರಿಕನ್ ಸಾಮ್ರಾಜ್ಯಶಾಹಿ ತನ್ನ ಬಹುರಾಷ್ಟ್ರೀಯ ಕಂಪನಿಗಳ ಮೂಲಕ ನಡೆಸುತ್ತಿದ್ದ ಸುಲಿಗೆಕೋರತವನ್ನು  ಅಂಕಿ ಸಂಖ್ಯೆಯ ಮೂಲಕ ಬಯಲು ಮಾಡಿ ಜಗತ್ತಿನ ಇತರೆ ದೇಶಗಳ ಬೆಂಬಲವನ್ನು ಕ್ಯೂಬಾದ ಕಡೆ ಸೆಳೆಯುವಲ್ಲಿ ಅವರು ಯಶಸ್ವಿಯಾದರು. ಬಹುಶ: ಕ್ರಾಂತಿಯಾದ ಎರಡೇ ವರ್ಷದಲ್ಲಿ ಕ್ಯೂಬಾದಲ್ಲಿ ಪ್ರತಿಯೊಬ್ಬ ಅನಕ್ಷರಸ್ಥರನ್ನು ಸಂಪೂರ್ಣ ಅಕ್ಷರಸ್ಥರನ್ನಾಗಿ ಮಾಡಿದ್ದು ಹಾಗೂ ಕೇಲವೇ ವರ್ಷಗಳಲ್ಲಿ ಕ್ಯೂಬಾಕ್ಕೆ 'ಜಗತ್ತಿನ ಸಕ್ಕರೆ ಬಟ್ಟಲು' ಎಂಬ ಖ್ಯಾತಿ ಬರುವಂತೆ ಮಾಡುವಲ್ಲಿ `ಚೆ' ನಿರ್ಣಾಯಕ ಪಾತ್ರವಹಿಸಿದರು ಮಾತ್ರವಲ್ಲ ಅದಕ್ಕಾಗಿ ತನ್ನ ದೇಹ-ಮನಸ್ಸನ್ನು ದಂಡಿಸಿದರು.

ತೀರಲಿಲ್ಲ ಕ್ರಾಂತಿಯ ದಾಹ..

ಹೀಗೆ..ಒಂದೆಡೆ ಸನಿಹದಲ್ಲೇ ಅಮೇರಿಕನ್ ಸಾಮ್ರಾಜ್ಯಶಾಹಿ ನೀಡುತ್ತಿದ್ದ ನಿತ್ಯ ಕಿರುಕುಳಗಳ ಮಧ್ಯೆಯೂ ಜಗದಗಲ ತನ್ನ ಪ್ರಭಾವವನ್ನು ಹೆಚ್ಚಿಸಿಕೊಳ್ಳುತ್ತಿರುವಾಗಲೇ ಮತ್ತೊಂದು ಕಡೆ `ಚೆ' ನ ಕ್ರಾಂತಿಕಾರಿ ಮನಸ್ಸು ತೀವ್ರ ಶೋಷಣೆಗೊಳಗಾಗಿದ್ದ ಆಫ್ರಿಕಾದ ಕಾಂಗೋ ಹಾಗೂ ಲ್ಯಾಟೀನ್ ಅಮೇರಿಕಾದ ಬೊಲಿವಿಯಾದ ಜನರತ್ತ ಮುಖಮಾಡಿತ್ತು. 1955 ಸುಮಾರಿನಲ್ಲಿ ಚೆ ಇದ್ದಕ್ಕಿದ್ದಂತೆ ಕ್ಯೂಬಾದಿಂದ ಕೆಲದಿನಗಳ ಕಾಲ ನಾಪತ್ತೆಯಾಗಿದ್ದರು. ಅವರು ಎಲ್ಲಿದ್ದರು ಎಂಬುದೂ ಸ್ವತ: ಫಿಡೆಲ್ ಕ್ಯಾಸ್ಟ್ರೋಗೂ ಗೊತ್ತಿರಲಿಲ್ಲ. ಸಾಮ್ರಾಜ್ಯಶಾಹಿ ಮಾಧ್ಯಮಗಳೆಲ್ಲಾ ಚೆ, ಸತ್ತೆ ಹೋಗಿದ್ದಾರೆಂಬ ಪ್ರಚಾರ ನಡೆಸಿದರು. ಆಗ ಕ್ಯಾಸ್ಟ್ರೋ ನೀಡಿದ ಉತ್ತರ ಹೀಗಿತ್ತು. ಚೆಗೆವಾರ ಎಲ್ಲಿದ್ದಾರೆ ಏನು ಮಾಡುತ್ತಿದ್ದಾರೆ ಎಂಬುದು ನಮಗೆ ಗೊತ್ತಿಲ್ಲ. ಆದರೆ ಒಂದಂತೂ ಸತ್ಯ ಎಲ್ಲಿ ಜನ ಅವರ ಸಹಾಯ ಬಯಸುತ್ತಿದ್ದಾರೋ ಅಲ್ಲಿ ಚೆ ಖಂಡಿತಾ ಇರುತ್ತಾರೆ.! ಇದಾದ ಕೆಲವೆ ದಿನಗಳಲ್ಲಿ ಚೆ ಕ್ಯೂಬಾಕ್ಕೆ ವಾಪಸ್ಸಾದರು. ಒಂದು ಮೂಲದ ಪ್ರಕಾರ ಅವರು ಕಾಂಗೋದಲ್ಲಿದ್ದರು ಎನ್ನಲಾಗಿತ್ತು. ಆದರೆ ಒಂದಂತೂ ಸತ್ಯವಾಗಿತ್ತು. ನನ್ನ ಮುಂದಿನ ಕ್ರಾಂತಿಯ ಹಾದಿ ಯಾವುದು ಎಂಬುದನ್ನು ಚೆ ಆಗಲೆ ನಿರ್ಧರಿಸಿಕೊಂಡಿದ್ದರು..!
ಹೌದು ಚೆ ಕ್ಯೂಬಾಕ್ಕೆ ವಾಪಸ್ಸಾದ ಮೇಲೂ ಒಂದು ರೀತಿಯಲ್ಲಿ ದೈಹಿಕವಾಗಿ ಮಾತ್ರವೇ ಅಲ್ಲಿದ್ದರು. ಕ್ಯೂಬಾದಲ್ಲಿದ್ದರೂ ಅವರು ಯಾರೊಂದಿಗೂ ಕಾಣಿಸಿಕೊಳ್ಳದೆ ಒಂದು ರೀತಿಯಲ್ಲಿ ಭೂಗತರಾಗೇ ಇದ್ದರು. ಅವರ ಇಡೀ ಮನಸ್ಸೆಲ್ಲಾ ಬೋಲಿವಿಯಾದ ಕಡೆ ಅಲ್ಲಿ ಮುಂಬರುವ ದಿನಗಳಲ್ಲಿ ನಡೆಸಬೇಕಿದ್ದ ಗೆರಿಲ್ಲಾಯುದ್ದದ ಸುತ್ತನೇ ತಿರುಗುತ್ತಿತ್ತು. ಅಂತಿಮವಾಗಿ ಶೋಷಣೆಯಿಂದ ಮುಕ್ತವಾದ ಸುಂದರ ಸಮಾಜ ಈ ಜಗದಗಲ ಸೃಷ್ಠಿಯಾಗಬೇಕೆಂಬ ಹಂಬಲ ಮತ್ತು ದೃಢ ವಿಶ್ವಾಸದೊಂದಿಗೆ 1965 ಏಪ್ರಿಲ್ ನಲ್ಲಿ ಕ್ಯೂಬಾವನ್ನು ತೊರೆದರು. ಮತ್ತು, ಮತ್ತೊಂದು ಕ್ರಾಂತಿಕಾರಿ ಕರ್ತವ್ಯದ ಕನಸಿನೊಂದಿಗೆ ಬೊಲಿವಿಯದತ್ತ ಹೆಜ್ಜೆ  ಹಾಕಿದರು.

ವಿದಾಯದ ಪತ್ರಗಳು

ಚೆ ಕ್ಯೂಬಾದಿಂದ ಹೊರಡುವಾಗ ಅವರು ತನ್ನ ಕ್ರಾಂತಿಕಾರಿ ಹೋರಾಟದ ಹಾಗೂ ಜೀವದ  ಗೆಳೆಯ ಫಿಡಲ್ ಕ್ಯಾಸ್ಟ್ರೋಗೆ ಹಾಗೂ ತನ್ನ ಪ್ರೀತಿಯ ಮಕ್ಕಳಿಗೆ ಎರಡು ವಿದಾಯದ ಪತ್ರಗಳನ್ನು ಬರೆದರು. ಫಿಡಲ್ಗೆ ಬರೆದ ಪತ್ರದಲ್ಲಿ ಅವರ ಜೊತೆಗಿನ ಒಡನಾಟದ ದಿನಗಳು ಸಿಯೆರ್ರಾ ಮೇಸ್ತಾ ಕಾಡಿನಲ್ಲಿ ಕ್ರಾಂತಿಗೆ ಮುನ್ನ ಜೊತೆಯಾಗಿ ಕಳೆದ, ಹತ್ತಾರು ವಿಷಯವಾಗಿ ಚರ್ಚಿಸಿದ ನಿದ್ರೆಯಿಲ್ಲದೆ ಕಳೆದ ಆ ದಿನಗಳ ಬಗ್ಗೆ, ಬಡದೇಶಗಳ ಮೇಲೆ ಸಾಮ್ರಾಜ್ಯಶಾಹಿ ನಡೆಸುತ್ತಿರುವ ಶೋಷಣೆಯನ್ನು ಕೊನೆಗಾಣಿಸಲು ನಡೆಸಬೇಕಾದ ಹೋರಾಟಗಳ ಬಗ್ಗೆ ಹಾಗೂ ಕ್ಯೂಬಾದಲ್ಲಿನ ಸಕರ್ಾರವನ್ನು ಮುನ್ನಡೆಸುವ ಕುರಿತು ಹಲವು ವಿಚಾರಗಳನ್ನು ಚೆ ಚರ್ಚಿಸುತ್ತಾರೆ. ಇನ್ನೂ ಮಕ್ಕಳಿಗೆ ಅದರಲ್ಲೂ ಹಿರಿಯ ಮಗಳಾದ ಹಿಲ್ಡಾನಾಗೆ ಸುಮಾರು ಮೂರು ಪತ್ರಗಳನ್ನು ಚೆ ಬರೆಯುತ್ತಾರೆ. ಅದರಲ್ಲಿ ಪತ್ರದಲ್ಲಿ ಯಾವ್ಯವ ಮಕ್ಕಳದ್ದು ಯಾವ ಸ್ವಾಭಾವವೆಂದು ತಿಳಿದಿದ್ದ ಚೆ ಅದಕ್ಕೆ ಪೂರಕವಾದ ಸಲಹೆಗಳನ್ನು ನೀಡುತ್ತಾರೆ ಅಲ್ಲದೆ ದೊಡ್ಡ ಮಗಳಾಗಿ ಹಿಲ್ಡಾನಾ ಮಾಡಬೇಕಾದ ಜವಾಬ್ದಾರಿಗಳ ಬಗ್ಗೆ ಅವರು ಹೇಗೆ ಬದುಕಬೇಕು ಪರಸ್ಪರ ಬೆಳೆದು ದೊಡ್ಡ ಕ್ರಾಂತಿಕಾರಿಗಳಾಬೇಕು ಅದಕ್ಕಾಗಿ ಉತ್ತಮವಾದ ಹಾಗೂ ಸಮಾಜ ಬದಲಾವಣೆಗೆ ಪೂರಕವಾದ ತಾಂತ್ರಿಕ ಕೌಶಲ್ಯ ಇರುವ ಶಿಕ್ಷಣ ಪಡೆಯಬೇಕು ಎಂಬ ಆಶಯವನ್ನು ವ್ಯಕ್ತಪಡಿಸಿದ್ದರು. ಅಲ್ಲದೆ ಬೊಲಿವಿಯಾದಲ್ಲಿ ಅವರು ಶತ್ರುಗಳ ವಿರುದ್ದ ನಡೆಸುತ್ತಿರುವ  ಹೋರಾಟ; ಅದು ಕ್ರಮಿಸಬೇಕಾದ ದಾರಿ ಹಾಗೂ ತಂದೆಯ ಕ್ರಾಂತಿಕಾರಿ ಆದರ್ಶಗಳನ್ನು ಗೌರವಿಸುವ ಮತ್ತು ಅದನ್ನು ತಮ್ಮ ಬದುಕಿನಲ್ಲಿ ಅಳವಡಿಸುವ ಕುರಿತು; ಮನೆಯಲ್ಲಿ ತಾಯಿಗೆ; ಶಾಲೆಯಲ್ಲಿ ಶಿಕ್ಷಕರಿಗೆ ಹಾಗೂ  ಗೌರವ ನೀಡುವುದು ಹಾಗೂ ಸಂಗಾತಿ ಭಾವ ಬೆಳೆಸಿಕೊಳ್ಳುವುದು; ಮಾತ್ರವಲ್ಲ ಮಗಳು ಬೆಳೆದು ದೊಡ್ಡವಳಾಗುತ್ತಿರುವುದು ಹೀಗೆ ಹಲವು ವಿಷಯಗಳ ಬಗ್ಗೆ ಬರೆಯುತ್ತಾರೆ.

ಬೋಲಿವಿಯಾದಲ್ಲಿ ವಿಮೋಚನಾ ಹೋರಾಟ
ನಂತರ ಬೋಲಿವಿಯಾದ ಸರ್ವಾಧಿಕಾರಿ ಸಿಐಎ ಕೈಗೊಂಬೆ ಸಕರ್ಾರದ ವಿರುದ್ದದ ಹೋರಾಟವನ್ನು ಬೆಳೆಸುವಲ್ಲಿ ಚೆ ಇಡೀ ತನ್ನ ಸಮಯವನ್ನೆಲ್ಲಾ ಮಿಸಲಿಟ್ಟು ಅಪಾರವಾದ ಕಷ್ಟಗಳನ್ನು ಎದುರಿಸಿದರು. ಎಷ್ಟೋ ಸಂದರ್ಭದಲ್ಲಿ ಅಹಾರ, ನೀರಿಗಾಗಿ ಆ ಕಾಡಿನ ನಡುವೆ ಪರಿತಪಿಸಿ ಕೊನೆಗೆ ಸವಾರಿಗಾಗಿ ಜೊತೆಗಿದ್ದ ಕುದುರೆಯನ್ನೇ ಆಹಾರವಾಗಿ ತಿನ್ನಬೇಕಾದ ಪರಿಸ್ಥಿತಿಗಳನ್ನು ಚೆ ಎದುರಿಸಿದರು. ಆದಾಗ್ಯೂ ಬೊಲಿವಿಯಾ ಸರ್ಕಾರದ ಸೇನೆ ಹಾಗೂ ಆಡಳಿತದ ವಿರುದ್ದ ಎಡಬಿಡದೆ ಹೋರಾಟಗಳನ್ನು ನಡೆಸುತ್ತಲೇ ಮುನ್ನೆಡೆದರು. ಕಾಡು ಮೇಡುಗಳನ್ನು ದಾಟುತ್ತಾ ಜನರನ್ನು ಸಂಘಟಿಸಿತ್ತಾ ಅವರಿಗೆ ಸಮಯಸಿಕ್ಕಾಗಲೆಲ್ಲಾ ಅಕ್ಷರಭ್ಯಾಸ ಮಾಡಿಸುತ್ತಾ, ಅವರ ತಿಳುವಳಿಕೆ ಹೆಚ್ಚೆಸುತ್ತಾ, ಅವರ ಜೊತೆ ಸಂವಾದಿಸುತ್ತಾ ಆ ಬಡವರ ಮನೆಗಳಲ್ಲೇ ಸಿಕ್ಕಿದ್ದನ್ನು ತಿನ್ನುತ್ತಾ ಕೆಲವೂಮ್ಮೆ ಖಾಲಿ ಹೊಟ್ಟೆಯಲ್ಲೇ ಮಲಗುತ್ತಾ ತನ್ನ ಚಳುವಳಿಯನ್ನು `ಚೆ' ಮತ್ತು ಆತನ ಹಲವು ಸಂಗಾತಿಗಳು ನಡೆಸುತ್ತಾರೆ.
 ಆದರೆ..ಇಡೀ ಲ್ಯಾಟೀನ್ ಅಮೇರಿಕಾದಲ್ಲೆ ಸಾಮ್ರಾಜ್ಯಶಾಹಿಗಳಿಗೆ ಸಿಂಹ ಸ್ವಪ್ನವಾಗಿದ್ದ `ಚೆ' ಯನ್ನು ಸಾಯಿಸಿಯಾದರೂ ಸರಿಯೆ ಅಥವಾ ಜೀವಂತವಾದರೂ ಸರಿಯೇ ಸೆರೆಹಿಡಿಯಲೇಬೇಕೆಂದು ಹಟ ತೊಟ್ಟದ್ದ ಸಿಐಎ (ಅಮೇರಿಕಾದ ಗೂಡಾಚಾರಿ ಸಂಸ್ಥೆ)ಗೆ ಅಂತಿಮ ಜಯ ಸಿಕ್ಕಿತ್ತು.! 1967 ರ ಅಕ್ಟೋಬರ್ 8 ರಂದು `ಚೆ' ಯನ್ನು ಸುತ್ತುವರೆದ ಅಮೆರಿಕಾದ ಸಿಐಎ ಬೆಂಬಲಿತ ಬೊಲಿವಿಯಾ ಸಕರ್ಾರದ ಪಡೆ ಅದೇ ದಿನವೇ ಅವರನ್ನು ಗುಂಡಿಕ್ಕಿ ಕೊಂದಿತು. ಆದರೆ ಅಷ್ಟೋತ್ತಿಗಾಗಲೆ ಚೆಗುವಾರನ ಹೆಸರು ಜಗದಗಲ ಹರಡಿತ್ತು. ಅದರಲ್ಲೂ ಲ್ಯಾಟೀನ್ ಅಮೆರಿಕಾದ ಜನರ ಮನೆ-ಮನಗಳನ್ನು ಹೊಕ್ಕಿತ್ತು. ಹಾಗಾಗಿ `ಚೆ' ಸತ್ತಿದ್ದಾನೆ ಎಂಬ ಸಂಗತಿಯನ್ನು ಅವರು ಹೇಳಿದರೆ ಜನರು ನಂಬುವುದಿಲ್ಲ ಎಂಬ ಕಟು ಸತ್ಯ ಅವರನ್ನು ಕಾಡಿತು. ಹಾಗಾಗಿಯೆ `ಚೆ' ನ ಕಳೆಬರವನ್ನು ಕ್ಯೂಬಾಕ್ಕೆ ಅಥವಾ ಅವರ ಕುಟುಂಬಕ್ಕೂ ನೀಡದೆ ಕೇವಲ ಅವರ ಮುಂಗೈಯನ್ನು ಕತ್ತರಿಸಿ ಜಗತ್ತಿಗೆ `ಚೆ' ಸಾವಿನ ಸುದ್ದಿಯನ್ನು ಖಾತ್ರಿಪಡಿಸಿದರು. ಸಾಮ್ರಾಜ್ಯಶಾಹಿಗಳಿಗೆ ಹಾಗೂ ಅವರ ಹಿಂಬಾಲಿಕರಿಗೆ ಒಟ್ಟಿನಲ್ಲಿ `ಚೆ' ನ ಕ್ರಾಂತಿಕಾರಿ ಸಿದ್ದಾಂತವನ್ನು ಸಾಯಿಸಲು ಸಾಧ್ಯವಿರಲಿಲ್ಲ ಹಾಗಾಗಿ ಅವರು ಚೆ ಯನ್ನೆ ದೈಹಿಕವಾಗಿ ಇಲ್ಲವಾಗಿಸಿದರು!


ಚೆಗೆವಾರ ಇಲ್ಲ.. ಆದರೆ ಸ್ಪೂರ್ತಿಗೆ ಕೊರತೆಯಿಲ್ಲ..

ಆರ್ನೆಸ್ಟೋ ಚೆಗೆವಾರ ಜಗತ್ತಿನಿಂದ ದೂರವಾಗಿ ಸುಮಾರು ನಾಲ್ಕು ದಶಕಗಳು ಕಳೆದಿವೆ. ಆದರೆ ಯಾವ ಸಾಮ್ರಾಜ್ಯಶಾಹಿ ದೇಶಗಳಿಗೂ `ಚೆ' ನ ಪ್ರಭಾವದಿಂದ ಅಲ್ಲಿನ ಯುವಜನರನ್ನು ದೂರ ಮಾಡಲು ಸಾಧ್ಯವಾಗಿಲ್ಲ. ಚೆಯನ್ನು ಕೊಂದ ಅಮೇರಿಕದ ವಾಷಿಂಗ್ಟನ್ ಡಿಸಿಯ ರಸ್ತೆಗಳಿಂದ ಹಿಡಿದು ಯೂರೋಪ್-ಇಂಡಿಯಾದ ಬೀದಿ ಬೀದಿಗಳಲ್ಲಿ `ಚೆ' ನ ಆಕರ್ಷಕ ಮುಖಚಿತ್ರ ಹೊಂದಿದ ಅಚ್ಚೆಗಳನ್ನು, ಟೀ ಶರ್ಟಗಳನ್ನು, ಕೀ ಚೈನ್ಗಳನ್ನು ತಮ್ಮದಾಗಿಸಲು ಈಗಲೂ ಯುವ ಜನರು ಮುಗಿಬೀಳುತ್ತಾರೆ. ಬ್ರಿಟಿಷ್ ಜೈಲಿನಲ್ಲಿ ರಾಜಕೀಯ ಖೈದಿಯಾಗಿ ಬಂಧಿಸಲ್ಪಟ್ಟಿದ್ದ ರಾಜಕೀಯ ಯುವಕನೊರ್ವ ನನಗೆ `ಚೆ' ಭಾವಚಿತ್ರವಿರುವ ಟೀ ಶರ್ಟ್ ಬೇಕೆಂದು ಅಧಿಕಾರಿಗಳ ಮುಂದೆ ಬೇಡಿಕೆಯನ್ನಿಟ್ಟಿದ್ದ. ಚೆಗೆವಾರನ ಅಭಿಮಾನಿಗಳ ಯುವಕರ ದಂಡೊಂದು ಪ್ರೀತಿಯಿಂದ `ಚೆ' ನ ಟೀಶರ್ಟ್ವೂಂದನ್ನು ಮೆರವಣಿಗೆ ಮಾಡಿಕೊಂಡು ಆ ಯುವಕನಿಗೆ ನೀಡಲು ಜೈಲಿನ ಬಾಗಿಲಿಗೆ ಬಂತು. ಆದರೆ.. ಅದನ್ನು ಆ ಖೈದಿಗೆ ನೀಡಲು ಜೈಲಾಧಿಕಾರಿಗಳು ನಿರಾಕರಿಸಿದರು. ಕಾರಣವೇನು ಗೊತ್ತೇ? ಅದರಲ್ಲಿ ರಾಜಕೀಯ ಸಂದೇಶವಿದೆ ಎಂಬುದು ಅವರ ಆರೋಪ. ಅಂದರೆ ಚೆಗೆವಾರ ಈ ಜಗತ್ತಿನಿಂದ ದೂರವಾಗಿ 44 ವರ್ಷಗಳೇ ಕಳೆದರೂ ಸಾಮ್ರಾಜ್ಯಶಾಹಿಗಳಿಗೆ ಅವನ ಬಗ್ಗೆ ಇದ್ದ ನಡುಕ ಇನ್ನೂ ದೂರವಾಗಿಲ್ಲ. ಈಗ ಹೇಳಿ ಚೆಗುವಾರ ಸತ್ತಿದ್ದಾರಾ? ತನ್ನ ಅಸಂಖ್ಯಾತ ಬರಹಗಳು ಹಾಗೂ ತಾನೂ ಮಾಡಿದ ಭಾಷಣಗಳ ಮೂಲಕ ಜಗದಗಲ ಸ್ಪೂರ್ತಿ ನೀಡುತ್ತಾ  ಸರ್ವಾಂತರಗಾಮಿಯಾಗಿದ್ದಾರೆ.  ಫಿಡಲ್ಗೆ `ಚೆ' ಸಾವಿನ ಸುದ್ದಿ ಗೊತ್ತಾದಾಗ ಅವರು ನೀಡಿದ ಹೇಳಿಕೆ ಎಂದರೆ...ಚೆ ನಮ್ಮಿಂದ ದೈಹಿಕವಾಗಿ ಮಾತ್ರವೇ ದೂರವಾಗಿದ್ದಾರೆ ಆದರೆ, ಜಗತ್ತಿನ ಯಾವುದೇ ಮೂಲೆಯಲ್ಲಿ ಅನ್ಯಾಯ ನಡೆದರೆ ಅಲ್ಲಿ ಚೆ. ಇದ್ದೆ ಇರುತ್ತಾರೆ.
 ಹೌದು! ಜಗತ್ತಿನ ಮೂಲೆ ಮೂಲೆಗಳಲ್ಲಿ ನಡೆಯುವ ಹೋರಾಟಗಳಿಗೆಲ್ಲಾ `ಚೆ', ಈಗಲೂ ಸ್ಪೂರ್ತಿಯೇ .ಬಹುಶಃ ಜಗತ್ತಿನಲ್ಲಿ `ಚೆ' ಗಿರುವಷ್ಟು ಅಭಿಮಾನಿಗಳು, ಅವರ ಹೆಸರಿನಲ್ಲಿರುವಷ್ಟು ವೆಬ್ಸೈಟ್ ಹಾಗೂ ಬ್ಲಾಗ್ಗಳಿಗೆ ಲೆಕ್ಕವೇ ಇಲ್ಲ. ಅದು ಉತ್ತರ-ದಕ್ಷಿಣ ಅಮೆರಿಕಾವೇ ಇರಲಿ, ಆಫ್ರಿಕಾ-ಯುರೋಪ್ಗಳಾಗಲಿ ಅಥವಾ ಏಷ್ಯಾ- ಆಸ್ಟ್ರೇಲಿಯಾ ಖಂಡಗಳೇ ಆಗಲಿ ಯಾವುದೇ ಸಾಮ್ರಾಜ್ಯಶಾಹಿ ವಿರುದ್ದದ ಅಂತರಾಷ್ಟ್ರೀಯ ಸೆಮಿನಾರುಗಳು, ಉತ್ಸವಗಳು ಹಾಗೂ ಕಾರ್ಯ ಕ್ರಮಗಳು ಚೆ ಗೈರುಹಾಜರಿಯಲ್ಲಿ ನಡೆಯುವುದೆ ಇಲ್ಲ.! ಯಾಕ್ಕೆಂದರೆ ಸಮಾನತೆಯ ಸಮಾಜವನ್ನು ಕಟ್ಟುವ ಕನಸು ಕಾಣುತ್ತಿರುವವರಿಗೆ, ಅನ್ಯಾಯವನ್ನು ಪ್ರತಿಭಟಿಸುತ್ತಿರುವವರಿಗೆ ಹಾಗೂ ಜಗದಗಲ ನಡೆಯುವ ಶೋಷಣೆಯನ್ನು ಕೊನೆಗಾಣಿಸಬೇಕೆಂದು ಹಂಬಲಸುತ್ತಿರುವ ಎಲ್ಲರಿಗೂ...ಇಂದಿಗೂ..ಎಂದೆಂದಿಗೂ ಚೇ ಸ್ಪೂರ್ತಿ.

27 ವರ್ಷಗಳ ಸುದೀರ್ಘ ಜೈಲುವಾಸದಿಂದ ಬಿಡುಗಡೆ ಹೊಂದಿದ ನೆಲ್ಸನ್ ಮಂಡೆಲಾ ಗೆಳೆತನದ ಪದಕ ಪಡೆಯಲು ಕ್ಯೂಬಾಕ್ಕೆ ಬಂದಾಗ ಹೇಳಿದ ಮಾತಿದು.. 'ಈ ಜಗತ್ತಿನ ಯಾವ ಬಂಧಿಖಾನೆಗಳಿಗೂ, ಸೆನ್ಸಾರ್ಶಿಪ್ ಗಳಿಗೂ ಚೆಗುವಾರನನ್ನು ನಮ್ಮಿಂದ ಅಡಗಿಸಿಡಲು ಸಾಧ್ಯವಿಲ್ಲ.!

                                                                                                             - ಕೆ.ಮಹಾಂತೇಶ
                                                                                                           (ಕೃಪೆ, ವಿದ್ಯಾರ್ಥಿ ಧ್ವನಿ)

( ಚೆಗೆವಾರ ರನ್ನು ಕುರಿತು ಆಸಕ್ತಿ ಹಾಗೂ ಓದಬೇಕೆನ್ನುವವರಿಗೆ ಕನ್ನಡದಲ್ಲಿ ನವಕರ್ನಾಟಕ ಪ್ರಕಾಶನ ಪ್ರಕಟಿಸಿರುವ 'ಆರ್ನೆಸ್ಟೋ ಚೆಗೆವಾರ' ಹಾಗೂ ಬಳ್ಳಾರಿಯ ಲೋಹಿಯಾ ಪ್ರಕಾಶನದ ಜಿ.ಎನ್ ಮೋಹನ್ ಬರೆದಿರುವ ನನ್ನೊಳಗಿನ ಹಾಡು ಕ್ಯೂಬಾ' ಕೃತಿಗಳು ಲಭ್ಯ ಇವೆ. ಇಂಗ್ಲೀಷ್ ನಲ್ಲಂತೂ ಚೆ ಕುರಿತ ಸಾಹಿತ್ಯ ಅವರ ಭಾಷಣ, ಬರಹಗಳು, ಪುಸ್ತಕಗಳು ಸಾಕಷ್ಟಿವೆ. ಇನ್ನೂ ಇಂಟರ್ನೆಟ್ನಲ್ಲಿ ಗೂಗಲ್ ಡಾಟ್ ಕಾಂ ಗೆ ಹೋದರಂತೂ ಚೆ ಕುರಿತಂತೆ ರಾಶಿ ರಾಶಿ ಮಾಹಿತಿಗಳು ಫೋಟೋಗಳು ಸಿಗುತ್ತವೆ.)



Thursday, 21 June 2012

English ಭಾಷೆಯಾಗಿ ಬೇಕು : ಮಾಧ್ಯಮವಾಗಿ ಅಲ್ಲ



ಭಾಷೆಯು ಒಂದು ಸಂವಹನ ಮಾಧ್ಯಮ ಮಾತ್ರವಲ್ಲ, ಅದೊಂದು ಸಾಂಸ್ಕೃತಿಕ ಸಂಸ್ಥೆ. ಅದು ತನ್ನನ್ನು ಬಳಸುವ ಜನರ ಸಾಮಾಜಿಕ, ಭಾವನಾತ್ಮಕ ಮತ್ತು ಭೌದ್ದಿಕ ಬದುಕಿನ ಅವಿಭಾಜ್ಯ ಅಂಗ. ಯಾವುದೇ ಒಂದು ಸಮಾಜದಲ್ಲಿ ಶತಮಾನಗಳ ಸಾಹಿತ್ಯಿಕ ಸಂಪ್ರದಾಯವನ್ನು ಹೊಂದಿರುವ ಜೀವಂತ ಭಾಷೆಗಳನ್ನು ಎಲ್ಲಿಂದಲೋ ಬಂದ ಇತರ ಭಾಷೆಗಳು ಅಷ್ಟು ಸುಲಭವಾಗಿ ಎರಡನೇ ದರ್ಜೆಯ ಸ್ಥಾನಮಾನಗಳಿಗೆ ತಳ್ಳಿಬಿಡಲು ಸಾಧ್ಯವಿಲ್ಲ. ಒಂದು ಭಾಷೆ ಎಷ್ಟು ಸಮರ್ಥವಾದದ್ದು ಅಥವಾ ದುರ್ಬಲವಾದದ್ದು ಎಂಬ ವಿಷಯವು ಎಷ್ಟು ವಿಭಿನ್ನ ಕ್ಷೇತ್ರಗಳಲ್ಲಿ ಪರಿಣಾಮಕಾರಿಯಾಗಿ ಬಳಸಬಹುದು ಎನ್ನುವುದರಿಂದಲೇ ತೀರ್ಮಾನವಾಗುತ್ತದೆ. ಸಮಾಜ, ಜೀವನ, ಶಿಕ್ಷಣ,  ಸರ್ಕಾರ, ನ್ಯಾಯಾಂಗ, ವಾಣಿಜ್ಯ, ಕೈಗಾರಿಕೆ, ರಕ್ಷಣೆ, ನೀತಿನಿರೂಪಕ ವಲಯಗಳಲ್ಲಿ ಸಮರ್ಥವಾಗಿ ಬಳಸಬೇಕಿದೆ, ಆಗ ಪ್ರಗತಿಯ ವೇಗವು ಹೆಚ್ಚಾಗುತ್ತದೆ. ಶೈಕ್ಷಣಿಕ ಪ್ರಗತಿಯನ್ನು ಸಾಧಿಸುವ ಕೆಲಸದಲ್ಲಿ ಭಾಷಾ ಬೆಳವಣಿಗೆಯು ಕೇಂದ್ರ ಸ್ಥಾನವನ್ನು ಹೊಂದಿರುತ್ತದೆ. ಅದೇ ರೀತಿ ಆರ್ಥಿಕ-ಸಾಂಸ್ತೃತಿಕ-ರಾಜಕೀಯಾ ಅಭಿವೃದ್ದಿಯ ತಳಹದಿಯಂತೆ ಕೆಲಮಾಡುವುದು ಶೈಕ್ಷಣಿಕ ಪ್ರಗತಿಯೇ ಆಗಿದೆ. ದೇಶದ ಪ್ರಗತಿ ಭಾಷೆಯ ಪ್ರಗತಿಯಲ್ಲಿ ಮಿಳಿತ ಗೊಂಡಿರುತ್ತೆ. 
ಮಾತೃಭಾಷೆಯಲ್ಲಿ ಸಮಗ್ರವಾದ ತರಬೇತಿಯನ್ನು ಪಡೆದಿರುವ ವಿದ್ವಾಂಸರು ಭೌದ್ದಿಕವಾಗಿ ಅತ್ಯಂತ ಸಮರ್ಥರಾಗಿರುವರೆಂಬ ಸಂಗತಿಯನ್ನು ನಾವು ವಿಪುಲವಾದ ಅನುಭವದಿಂದ ತಿಳಿದು ಕೊಂಡಿದ್ದೆವೆ. ಪ್ರಾದೇಶಿಕ ಮಾತೃಭಾಷೆಯಲ್ಲಿಯೇ ಭದ್ರವಾದ ಅಡಿಪಾಯ ಬಿದ್ದ ನಂತರವೆ ಅನ್ಯ ಭಾಷ ಕಲಿಕೆ ಪ್ರಾರಭವಾಗಬೇಕು ಏಕೆಂದರೆ ತನ್ನ ಭಾಷೆಯನ್ನು ಸಲೀಸಾಗಿ ಉಪಯೋಗಿಸಲಾರದ ಯಾವುದೇ ಜನ ಸಮುದಾಯವು ಇನ್ನೊಂದು ಭಾಷೆಯನ್ನು ಸಮರ್ಥವಾಗಿ ಉಪಯೋಗಿಸಲಾರರು. ವಸಾಹತುಶಾಹಿಗಳು ತಮ್ಮ ಲಾಭಕ್ಕಾಗಿ ಪ್ರಾದೇಶಿಕ ಭಾಷೆಗಳನ್ನು ನಿರ್ಲಕ್ಷಿಸುತ್ತಾ ಬರುತ್ತಿದ್ದುರು. ವಿದೇಶಿ ಭಾಷೆಗಳ ಹೇರಿಕೆಯ ವಿರುದ್ದ, ದೇಶಿಯ-ಪ್ರಾದೇಶಿಕ ಭಾಷೆಗಳ ಶಿಕ್ಷಣ ಮಾಧ್ಯಮಕ್ಕಾಗಿ ಚಿಂತನೆಗಳು ಪ್ರಭಲವಾಗಿ ಬೆಳದಿದ್ದನ್ನ ನೆನೆಸಿಕೊಳ್ಳಬೇಕಿದೆ. ವಸಾಹತುಶಾಹಿಗಳ ಅಪಾಯವನ್ನು ಮನಗಂಡು 1964 ರ ಕೊಠಾರಿ ಆಯೋಗ ಮಾಧ್ಯಮದ ಪ್ರಶ್ನೆಯನ್ನು ವಿವರವಾಗಿ ಚರ್ಚಿಸಿ ಎಲ್ಲಾ ಹಂತಗಳಲ್ಲಿಯೂ ಶಿಕ್ಷಣ ಮತ್ತು ಪರೀಕ್ಷೆಗಳಿಗಾಗಿ ಮಾತೃಭಾಷೆ, ಪ್ರಾದೇಶಿಕ ಭಾಷೆಗಳನ್ನೆ ಬಳಸಬೇಕೆಂದು ಖಡಾಖಂಡಿತವಾಗಿ ಹೇಳಿತು. ಆಗ ಅನೇಕ ರಾಜ್ಯಗಳು ಹಸಿ-ಹಸಿಯಾಗಿ ಕಲೆ ಮತ್ತು ಸಮಾಜ ವಿಜ್ಞಾನಗಳಲ್ಲೂ ಇಂಗ್ಲಿಷ್ ಜೊತೆ ಪ್ರಾದೇಶಿಕ, ಮಾತೃಭಾಷೆಗಳನ್ನು ಮಾಧ್ಯಮವಾಗಿ ಜಾರಿಗೆ ತಂದವು. ಆದರೆ ವೈದ್ಯಕೀಯ, ಇಂಜಿನಿಯರಿಂಗ್, ಮುಂತಾದ ವೃತ್ತಿಪರ ವಿಷಯಗಳಲ್ಲಿ ಇಂಗ್ಲಿಷ್ ಭಾಷೆಯಲ್ಲೆ ಮಾಧ್ಯಮವಾಗಿ ಉಳಿಯಿತು. ಸಾಮಾಜಿಕ-ಆಥರ್ಿಕಸ್ಥಿತಿ ಬದಲಾವಣೆಯಾಗಬೇಕಾದರೆ ಶಿಕ್ಷಣ ಒಂದು ಪ್ರಬಲ ಅಯುಧವಾಗಬೇಕಾಗಿದೆ. ಶೋಷಿತರು ತಾವು ಯಾರು? ತಮ್ಮ ಪರಿಸ್ಥಿತಿ ಏಕೆ ಹೀಗೆದೆ? ತಾವು ಇದನ್ನು ಹೇಗೆ ಬದಲಾಯಿಸಿಕೂಳ್ಳಬೇಕು? ಎಂಬುದನ್ನು ತಿಳಿಯುವ ವಿಶ್ಲೇಷಣಾ ಜ್ಞಾನ ಸಂಪಾದಿಸಲು ಪುಷ್ಟವಾಗಿ ಬೆಳೆದ,ೆ ಸರಳವಾಗಿ ಅರ್ಥೈಸಲು ಸಹಕಾರಿಯಾದ ಭಾಷೆ ಬೇಕು. ಇದು ಮಾತೃಭಾಷಾ ಶಿಕ್ಷಣದಿಂದ ತುಂಬಾ ಸುಲಭ. ಸಾಮಾಜಿಕ ಬದಲಾವಣೆ ಅಗತ್ಯವಾದ ಎಚ್ಚರವನ್ನು ಹುಟ್ಟಿಸಲು, ಜ್ಞಾನವನ್ನು ನೀಡಲು, ಮೊದಲು ಶಿಕ್ಷಣ ಕ್ರಮದಲ್ಲಿ, ಶಿಕ್ಷಣ ಮಾಧ್ಯಮದಲ್ಲಿ ಬದಲಾವಣೆಗಳು ಉಂಟಾಗಬೇಕಿದೆ. ಭಾಷಾ ಹೇರಿಕೆಯು ಸಾಮ್ರಾಜ್ಯಶಾಹಿಯ ಪ್ರತಿ ಹೆಜ್ಜೆಯಲ್ಲಿ ಜೊತೆ ಸಾಗುತ್ತಿರುತ್ತದೆ. ಅದು ಪ್ರಾದೇಶಿಕ ಭಾಷೆಗಳನ್ನು ನಿಧಾನಗತಿಯಲ್ಲಿ  ನುಂಗಲು ಪ್ರಯುತ್ನಿಸುತ್ತಿರುತ್ತದೆ. ಸಾಮಾಜಿಕ, ಆರ್ಥಿಕ ಶಕ್ತಿ ಸಂಭದಗಳ ಸ್ವರೂಪವು ಭಾಷಾ ಬಳಕೆಯ ವಿನ್ಯಾಸವನ್ನು ನಿರ್ಧರಿಸುತ್ತದೆ. ಭಾಷೆಯ ಸಾವು, ಬಾಷೆಯ ಹತ್ಯೆ, ಭಾಷೆಯ ಪುನರುಜ್ಜೀವನಇವೆಲ್ಲ ಪ್ರಕ್ರಿಯೆಗಳೂ ತಮ್ಮಷ್ಟಕ್ಕೆ ತಾವೇ ನಡೆಯಲಾರವು. ಈ ಪ್ರಕ್ರಿಯೆ ಆರ್ಥಿಕ - ರಾಜಕೀಯ ಅಭಿವೃದ್ದಿಯಲ್ಲಿ ಆಗುವ ಎಲ್ಲಾ ಬದಲಾವಣೆಗಳೂ ಅಥವಾ ನೀಡಲಾಗುವ ಎಲ್ಲಾ ಸವಲತ್ತುಗಳು ಸಮಾಜದ ಮೆಲ್ವರ್ಗಗಳು ತಮ್ಮ ಹಿತವನ್ನು ಕಾಪಾಡಿಕೊಳ್ಳಲು ಮಾಡಿಕೊಳ್ಳುವ ಹೊದಾಣಿಕೆಗಳ ಇನ್ನೊಂದು ರೂಪವೇ ಆಗಿರುತ್ತದೆ. ಸಂವಹನ ಮಾಧ್ಯಮದ ಮೇಲೆ ಅಧಿಕಾರಕೇಂದ್ರಿಕರಿಸಲು ಭಾಷೆಯು ಮುಖ್ಯ ಉಪಕರಣವಾಗಿರುವ ಶಿಕ್ಷಣ ವ್ಯವಸ್ಥೆಯನ್ನು ತನ್ನಂತೆ ರೂಪಿಸಲು ಮುಂದಾಗುತ್ತದೆ. ಹೀಗಾಗಿ ಸಹಜವಾಗೀ ಸಾಮ್ರಾಜ್ಯಶಾಹಿಯ ಬಾಯಿಂದ ಇಂಗ್ಲಿಷ್ ಜಪ ನಡೆಯುತ್ತದೆ.

ಇದು ಜಾಗತೀಕರಣದ ಕೊಡುಗೆ : ಪ್ರಾದೇಶಿಕ, ಮಾತೃ ಭಾಷೆಗಳ ಹತ್ಯೆ ಪ್ರಕರಣದಲ್ಲಿ ಸಾಮ್ರಾಜ್ಯಶಾಹಿ ಮತ್ತು ದೇಶಿಯ ಬಂಡವಾಳಶಾಹಿ, ಪಾಳೇಗಾರಿ ಪ್ರಭುತ್ವಗಳೇ (ಕಾಂಗ್ರೇಸ್, ಬಿಜೆಪಿ ಎನ್ನಲು ಭಯಯವೇನಿಲ್ಲ) ಅಪರಾದಿಗಳು. ಏಕೆಂದರೆ ಧೇಶಿಯ ಸಂಸ್ಕೃತಿಯನ್ನು ಗುಲಾಮಗಿರಿಗೆ ತಳ್ಳಿದ ಕೀರ್ತಿ ಇವರಿಗಿದೆ. ಇವರ ಜಾಗತೀಕರಣದ ಸ್ವಾಗತದಿಂದ ದೇಶಿಯ ಭಾಷೆಗಳ ಕೊಲೆ ಪ್ರಾರಂಭವಾಗಿದ್ದು. ಶಿಕ್ಷಣ, ಉದ್ಯೋಗ, ತ್ರಂತ್ರಜ್ಞಾನದ ಹೆಸರಿನಲ್ಲಿ ಅಂಗ್ಲ ಭಾಷೆಯ ವ್ಯಾಮೋಹ ಹೆಚ್ಚಿಸಲಾಗುತ್ತಿದೆ. ಏಕಮುಖ ಸಂಸ್ಕೃತಿಯನ್ನು ಹೇರುವ ಮೂಲಕ ಮತ್ತೆ ಭಾಷಾ ಗುಲಾಮಗಿರಿಗೆ ತಳ್ಳುವ ಯತ್ನ ಇದಾಗಿದ್ದು ಇಂಗ್ಲೀಷ್ ಮಾತ್ರವೇ ಭಾಷೆ. ಅದಿಲ್ಲದೆ ಬದುಕಿಲ್ಲ ಎನ್ನುವ ಭ್ರಮೆಯನ್ನು ಸೃಷ್ಠಿಸಲಾಗುತ್ತಿದೆ. ಸಾರ್ವಜನಿಕ ರಂಗದಲೂ ಉದ್ಯೋಗಗಳು ನಾಶಗೊಳ್ಳುತ್ತಿವೆ. ಖಾಸಗಿ ರಂಗದಲ್ಲಿ ಅಭದ್ರತೆಯಲ್ಲಿ ಅರೆ ಉದ್ಯೋಗಿಗಳ ಬದುಕು ಅತಂತ್ರದಲ್ಲಿದರು ಅಲ್ಲಿ ಅನಗತ್ಯವಾಗಿ ಅಂಗ್ಲ ಭಾಷೆಯ ವ್ಯಾಮೋಹ ಸೃಷ್ಠಿಸಲಾಗುತ್ತಿದೆ. ಇಂಗ್ಲೀಷ್ ಮಾಧ್ಯಮದಲ್ಲಿ ಶಿಕ್ಷಣ ಪಡೆದರೆ ಮಾತ್ರ ಬದುಕು ಸೂಸುತ್ರ ಎಂಬ ಭ್ರಮೆ ಹುಟ್ಟಿಸಲಾಗುತ್ತಿದೆ.  ಹೀಗಾಗಿ ನಾಯಿಕೊಡೆಗಳಂತೆ ಅಂಗ್ಲ ಶಾಲೆಗಳು ಆರಂಭ. ಭಾಷೆ ಕಲಿಸುವುದಕ್ಕಿಂತ ಹಣ ಮಾಡುವುದೇ ಅವುಗಳ ಕಾಯಕ. ಅವುಗಳಿಗೆ ಸರ್ಕಾರದ ಶ್ರೀರಕ್ಷೆ. 
ಇಂಗ್ಲೀಷ್ ಓದಿದೋರೆಲ್ಲಾ ಉದ್ಯೋಗ ಪಡೆದಿಲ್ಲ. ಹಾಗೇ ಭ್ರಮೆ ಸೃಷ್ಠಿಸಲಾಗುತ್ತಿದೆ. ಕೇವಲ ಉದ್ಯೋಗ, ಸಂಪರ್ಕ ಸಂವಹನದ ಹೆಸರಿನಲ್ಲಿ ಮಾತೃಭಾಷೆ ನಿಸ್ಸಪ್ರಯೋಜಕ ಎಂಬ ಅಪಪ್ರಚಾರದ ಹಿಂದೆ ಅಳುವ ಸರ್ಕಾರಗಳ ನಿಲುವು ಯಾರ ಹಿತಕ್ಕಾಗಿ? ಎಂಬುದು ಚರ್ಚಿತವಾಗಬೇಕಿದೆ.
ಬದಲಾದ ಸನ್ನಿವೇಶ: ಸ್ವಾತಂತ್ರ್ಯ ನಂತರದ ದಿನಗಳಲ್ಲಿ ನಮ್ಮ ಸರ್ಕಾರಗಳು ಎಲ್ಲಾ ಹಂತದಲ್ಲೂ ಮಾತೃಭಾಷೆಗಳ ಪ್ರಾದಾನ್ಯತೆ ನೀಡಲಿಲ್ಲ. ಜಪಾನ್, ಚೀನಾ, ಇತರ ದೇಶಗಳು ತಮ್ಮ ದೇಶಿಯ ಭಾಷೆಯಲ್ಲಿಯೇ ಶಿಕ್ಷಣ, ಆಡಳಿತ, ತಂತ್ರ ಜ್ಞಾನಗಳ ಅಭಿವೃದ್ಧಿ ಪಡಿಸಿಕೊಂಡರೆ ನಾವಿನ್ನು ಬ್ರಿಟೀಷ್ ಗುಲಾಮಗಿರಿಯಲ್ಲಿಯೇ ಉಳಿದಿದ್ದೇವೆನ್ನುವುದಲ್ಲದೆ ನಮ್ಮದಲ್ಲದ ಭಾಷೆಯ ಮೇಲೆ ಅವಲಂಬನೆ ಅಗಿರುವುದು ನಾಚಿಕೆಗೇಡು. ನಮ್ಮ ಉತ್ಪಾದನಾ ವ್ಯವಸ್ಥೆಯನ್ನು ಸಮರ್ಥವಾಗಿ ರೂಒಇಸಲು ಮಾತೃಭಾಷೆ ಎಲ್ಲೆಡೆ ಪರಿಣಾಮಕಾರಿಯಾಗಿ ಬಳಕೆಯಾಗಬೇಕಿತ್ತು. ಬದಲಾದ ಸನ್ನಿವೇಶಗಳಲ್ಲಿ ಜಾಗತೀಕರಣದ ದಾಳಿ, ಅದರ ವ್ಯಾಪಕ ಪ್ರವೃತ್ತಿ, ಅದಕ್ಕಾಗಿ ಅನಗತ್ಯ ಸ್ವರ್ಧೆ, ಸಿಕ್ಕಷ್ಟು ಲಪಟಾಯಿಸಬೇಕೆನ್ನುವ ತರಾತುರಿ, ಅವಕಾಶ ವಂಚಚಿತನಾಗುವೆ ಎನ್ನುವ ಅತಂಕಗಳು ಇಂದು ಅಂಗ್ಲ ಭಾಷೆಯ ವ್ಯಾಮೋಹಕ್ಕೆ ಕಾರಣಗಳು. ಅಲ್ಲದೆ ಭಾಷೆ ಕಲಿಕೆಯಲ್ಲಿ ಹಿಂದುಳಿದರೆ ಭವಿಷ್ಯ ಮುಂಕಾದಿತು ಎನ್ನುವ ಕೀಳಿರಿಮೆ. ಉದ್ಯೋಗ ವಂಚಿತನಾಗುವೆ ಎನ್ನುವ ಭಯವು ಸೇರಿಕೊಂಡತೆ ನಮ್ಮ ನ್ಯಾಯಾಂಗ, ಆಡಳಿತ, ವಿಜ್ಞಾನ, ತಂತ್ರಜ್ಞಾನ ಮತ್ತು ವೈದ್ಯಕೀಯ ಕ್ಷೇತ್ರಗಳಲ್ಲಿ ಶಿಕ್ಷಣ ಕ್ರಮ ಅಂಗ್ಲ ಭಾಷೆಯ ಕಲಿಕೆಯ ಕಡೆ ಅಕರ್ಷಿಸುತ್ತಿವೆ. ಇದನ್ನೇ ವ್ಯಾಪಾರಿ ಮನೋವೃತ್ತಿಯ ಅಂಗ್ಲ ಶಾಲೆಗಳು ಹಣ ಮಾಡುವ ದಂದೆಗೆ ಬಳಸಿಕೊಳ್ಳುತ್ತಿವೆ. ಶತಮಾನಗಳಿಂದ ಇಡೀ ಶಿಕ್ಷಣ ವ್ಯವಸ್ಥೆಯಿಂದ ವಂಚಿತರಾಗಿದ್ದ ತಳಸಮುದಾಯಗಳಿಗೆ ಇಂಗ್ಲೀಷ್ ಕಲಿಯದಿದ್ದರೆ ಮತ್ತಷ್ಟು ತುಳಿತಕೊಳ್ಳಪಡುವೇವು ಎನ್ನುವ ಆಧಾರ ರಹಿತ ಕೊರಗು. ಜನ ಭಾಷೆಯನ್ನೇ ಇಲ್ಲವಾಗಿಸುವ ಮೂಲಕ ಜನ ಸಮುದಾಯಗಳನ್ನು ತನ್ನ ಕಪಿಮುಷ್ಠಿಯಲ್ಲಿ ಹಿಡಿಯಲೆತ್ನಿಸುತ್ತಿರುವ ಶಕ್ತಿಗೆ ನಾವು ಬಲಿಯಾಗಿ ಮಾತೃ ಭಾಷೆಯಲ್ಲಿ ನಮ್ಮದೆಲ್ಲವನ್ನು ಪಡೆಯಬೇಕು ಎನ್ನುವಾಗಲು, ಸಾಮ್ರಾಜ್ಯಶಾಹಿಯ ಕುತಂತ್ರ ಅರಿಯಲಾದರು, ಸಂವಹನ ಸಾಧನವಾಗಿ ಇಂಗ್ಲಿಷ್ ಭಾಷೆಯನ್ನು ಕಲಿಯಬೇಕಾಗಿದೆ. ಅದು ಶಾಲಾ ಹಂತದಲ್ಲೇ ಪ್ರಾರಂಭವಾಗಲಿ ಅಡ್ಡಿಯಿಲ್ಲ. ಆದರೆ ಅನ್ಯಭಾಷೆ ಹೆಸರಿನಲ್ಲಿ ಹಣ ಮಾಡುವ ದಂಧೆಗೆ ಅವಕಾಶ ನಿರಾಕರಿಸಬೇಕಿದೆ. ಶಾಲೇ ಹಂತದಿಂದಲೇ ಪರಿಣಾಮಕಾರಿಯಾಗಿ ಭಾಷೆಯಾಗಿ ಅಷ್ಟೇ ಇಂಗ್ಲೀಷ್ ಕಲಿಕೆ ಅಗತ್ಯವಿದೆ. 
ಸರ್ಕಾರಿ ಇಂಗ್ಲೀಷ್ ಪ್ರೀತಿ: ಸುಮಾರು 3174 ಸಕರ್ಾರಿ ಶಾಲೆಗಳ ಮುಚ್ಚಲು ಹೊರಟಿರುವ ರಾಜ್ಯ ಸಕರ್ಾರ 341 ಅಂಗ್ಲ ಮಾಧ್ಯಮ ಶಾಲೆಗಳ ಪ್ರಾರಂಭಿಸಲು ಹೊರಟಿರುವುದು ಹಾಸ್ಯಾಸ್ಪದ ಮತ್ತು ಅನುಮಾನಾಸ್ಪದ. ಇತ್ತ ಕನ್ನಡ ಶಾಲೆಗಳಲ್ಲಿಯೂ ಗುಣ ಮಟ್ಟದ ಶಿಕ್ಷಣ ನೀಡದೆ ಅತ್ತ ಆಂಗ್ಲ ಮಾಧ್ಯಮ ಶಾಲೆಗಳಿಗೂ ಸೌಲಭ್ಯ ಕಲ್ಪಿಸದೇ ಸಹಜವಾಗಿ ಪೋಷಕರಿಗೆ ಸಕರ್ಾರಿ ಶಾಲಾ ವ್ಯವಸ್ಥೆ ಬಗ್ಗೆ ಹೇಸಿಗೆ ಹುಟ್ಟಿಸಿ ಖಾಸಗಿ ಶಾಲೆಗಳತ್ತ ಮುಖಮಾಡಲಿ ಎನ್ನುವುದೇ ಆಗಿದೆ. ಶಿಕ್ಷಣದ ವ್ಯಾಪಾರಕ್ಕೆ ದಾರಿ ಮಾಡಿಕೊಡಲಿದೆ. ಏಳೆಂಟು ರೀತಿಯ ಶ್ರೇಣೀಕೃತ ಶೈಕ್ಷಣಿಕ ಶಾಲಾ ವ್ಯವಸ್ಥೆಯ ಬದಲಾಗಿ ಸಮಾನ ಶಾಲಾ ಶಿಕ್ಷಣ ಪದ್ಧತಿಯ ಮೂಲಕ ಅತೀ ಶ್ರಿಮಂತ ಮತ್ತು ಸ್ಲಂ ನ ವಿದ್ಯಾರ್ಥಿ ಒಟ್ಟಿಗೆ ಒದುವ- ಶಿಕ್ಷಣ ಕ್ರಮ ತರದ ಹೊರತು ಭಾಷೆ ಹೆಸರಿನ ಜಗಳಕ್ಕೆ ಅರ್ಥವಿರದು.
ಖಾಸಗಿ ಅನಧಿಕೃತ ಶಾಲೆಗಳ ಪರವಾನಿಗೆ ರದ್ದುಗೊಳಿಸಲು ಸರ್ಕಾರ ಮುಂದಾಗಿ ಭಾಷಾ ನೀತಿಯನ್ನು ಜಾರಿಗೊಳಿಸಬೇಕಿದೆ. ಮಾತೃ ಭಾಷೆಯ ಶಿಕ್ಷಣ ಪಡೆದವರಿಗೆ ಬದುಕಿನ ಭರವಸೆ ಮೂಡಿಸಲು, ಶಿಕ್ಷಣ, ಉದ್ಯೋಗದಲ್ಲಿ ಪ್ರಾತಿನಿಧ್ಯ, ವಿಜ್ಞಾನ - ತಂತ್ರಜ್ಞಾನ - ವೈಧ್ಯಕೀಯ ಶಿಕ್ಷಣ ಮತ್ತು ಕಾರ್ಯಾಂಗ-ನ್ಯಾಯಾಂಗವು ಮಾತೃಭಾಷೆಗೆ ತೆರೆದುಕೊಳ್ಳುವಂತೆ ಕ್ರಮ ವಹಿಸಬೇಕಿದೆ. ಶಾಶ್ವತ ಪರಿಹಾರವಾಗಿ ಜನಪರ ಚಿಂತನೆಗಳಿಗಾಗಿ ಚಳುವಳಿ ಬಲಗೊಳ್ಳಬೇಕಿದೆ. ಆ ಮೂಲಕ ಬಾಷೆ - ಬದುಕು ಹಸನಾಗಿಸಬೇಕಿದೆ. ಇಂಗ್ಲೀಷ್ ಭಾಷೆಯಾಗಿ ಕಲಿಯೋಣ, ಮಾತೃಭಾಷಾ ಮಾಧ್ಯಮದಲ್ಲಿ ಸಾಧನೆ ಮೆರೆಯೋಣ.  

                                                                                             -. ಎನ್.ಅನಂತ್ ನಾಯ್ಕ್
                                                                                              (ಕೃಪೆ ವಿದ್ಯಾರ್ಥಿ ಧ್ವನಿ)