Thursday 23 February 2012

ಅಶ್ವಮೇಧವೂ? ಪ್ರಜಾಪ್ರಭುತ್ವದ ಮಾರಣ ಹೋಮವೋ?




ಅಶ್ವಮೇಧವೂ? ಪ್ರಜಾಪ್ರಭುತ್ವದ ಮಾರಣ ಹೋಮವೋ?
ಹಾಸನದ ದೊಡ್ಡಪುರದಲ್ಲಿ ದಿನಾಂಕ 29/02/2012 ರಿಂದ 07/03/2012 ರವರೆಗೆ 8 ದಿನಗಳ ಕಾಲ ಸುಮಾರು 8 ಕೋಟಿಗೂ ಅಧಿಕ ಖರ್ಚು ಮಾಡಿ, 20 ಎಕರೆ ಪ್ರದೇಶದಲ್ಲಿ, 108 ಕುಂಡಗಳನ್ನು ರಚಿಸಿ 600ಮಂದಿ ಪುರೋಹಿತರಿಗೆ ದಿನಕ್ಕೆ 5ಲಕ್ಷರೂ ಸಂಭಾವನೆ ಕೊಟ್ಟು ಅಶ್ವಮೇಧ ಯಾಗ ಸಂಕಲ್ಪ ನಡೆಸಲಾಗುವುದು ಇದೇ ಸಂದರ್ಭದಲ್ಲಿ ನೂರಾರು ವಿಧದ ಪೂಜೆ, ಯಜ್ಞ, ಪಾರಾಯಣ, ಅಭಿಷೇಕ, ಕನ್ಯಾಪೂಜೆಗಳನ್ನು ಕೂಡ ನಡೆಸಲಾಗುತ್ತದೆ ಪ್ರತೀ ಪೂಜೆಗೂ ದುಬಾರಿ ದರಪಟ್ಟಿ ಇದೆ. ಇದರ ಭರದ ಸಿದ್ಧತೆ ಜೋರಗಿಯೇ ನಡೆಯುತ್ತಿದೆ. ಅಸಂಬದ್ಧ ಪ್ರಲಾಪದ ಪತ್ರಿಕಾ ಗೋಷ್ಠಿಯನ್ನೂ ಬಾರಿ ಬಾರಿ ಮಾಡಿ ಲೋಕ ಕಲ್ಯಾಣಾರ್ಥ, ಸಮೃದ್ಧಿಗಾಗಿ ಹಾಗೂ ಪರಿಸರ ಸಂರಕ್ಷಣೆಗಾಗಿ ನಡೆಸಲಾಗುತ್ತಿದೆ ಹವನದಲ್ಲಿ ಹಾಕುವ ಕೋಟ್ಯಾಂತರ ರೂಗಳ ಆಹಾರ ಧಾನ್ಯಗಳನ್ನು ಅಗ್ನಿಗೆ ಆಹುತಿ ಕೊಡುವುದರಿಂದ ಓಝೋನ್ ಶುದ್ದೀಯಾಗುತ್ತದೆಂದೂ ಏನೇನೋ ಬಡಬಡಾಯಿಸಿದ್ದಾರೆ ಆಮಾನವೀಯ ಚಿಂತನಾ ಲಹರಿಗಳನ್ನೇ ತುಂಬಿಕೊಂಡವರಿಂದ ಇನ್ನೇನನ್ನು ನಿರೀಕ್ಷಿಸಲು ಸಾಧ್ಯ. ಸಂತೋಷ ಎಂದರೆ ಮಾನವ ಪ್ರೇಮಿ ಹಾಗೂ ಪ್ರಜಾಪ್ರಭುತ್ವದ ಪ್ರಬಲ ಪ್ರತಿಪಾದಕರು ಸೂಕ್ತವಾಗೇ ಪ್ರತಿಕ್ರಿಯಿಸುತ್ತಿದ್ದಾರೆ ಆದರೂ ಹಣಬಲ, ಅಧಿಕಾರದ ಬಲ ಮತ್ತು ಮತಿಹೀನ ಪಾಳೆಗಾರ ಮನೋವೃತ್ತಿಯ ಸ್ಥಳೀಯ ರಾಜಕೀಯ ಮುಖಂಡರ ಸಹಬಲದಲ್ಲಿ ನಡೆಸುತ್ತಿರುವ ಭಾರತೀಯ ಧರ್ಮವನ್ನು ಸರ್ವನಾಶ ಮಾಡಿದ ಪರಂಪರೆಯ ಬಲದ ಮುಂದೆ ಪ್ರಜಾಪ್ರಭುತ್ವದ ಬಲ ಕ್ಷೀಣವಾಗೇ ಇದೆ.
ಅಶ್ವಮೇಧ ಯಾಗ ಅಂದರೇನು?
ಅಶ್ವ ಎಂದರೆ ‘ಕುದುರೆ’ ಮೇಧ ಎಂದರೆ ಬಲಿ, ಯಾಗ ಎಂದರೆ ಹವನಕುಂಡ ಅದರೊಳಗೆ ಕಟ್ಟಿಗೆ ಬೆಂಕಿ ಮತ್ತು ಇತ್ಯಾದಿ ಅಗ್ನಿಜನ್ಯ ವಸ್ತುಗಳನ್ನು ಹಾಕಿ ಉರಿಸುವ ವೈದಿಕ ಆಚರಣೆ. ಒಟ್ಟಾರೆ ಕುದುರೆಯನ್ನು ಬಲಿ ಕೊಡುವ ಯಾಗ. ರಾಜ್ಯ ತನ್ನ ಸಾಮ್ರಾಜ್ಯ ವಿಸ್ತರಣೆಗಾಗಿ, ಸಂಪನ್ಮೂಲ ವೃದ್ಧಿಗಾಗಿ ಹಾಗೂ ತನ್ನ ಶೌರ್ಯ ಪ್ರದರ್ಶನಕ್ಕಾಗಿ ನಡೆಸುತ್ತಿದ್ದ ಸಾಮ್ರಾಜ್ಯಶಾಹಿ ರಾಜಕೀಯ ಚಟುವಟಿಕೆ. ಐತಿಹಾಸಿಕವಾಗಿ ಇದಕ್ಕೆ ಯಾವುದೇ ಮಹತ್ವ ಇಲ್ಲ ಪುರಾಣ ಗ್ರಂಥಗಳಲ್ಲಿ ಮಾತ್ರ ಇದನ್ನು ವೈಭವೀಕರಿಸಿ ಚಿತ್ರಿಸಲಾಗಿದೆ. ಆ ಪುರಾಣ ಗ್ರಂಥಗಳ ಪ್ರಕಾರ ಸರ್ವಾಲಂಕೃತ ಕುದುರೆಯನ್ನು ರಾಜ ವೈದಿಕ ಪುರೋಹಿತರ ಮಂತ್ರ ಘೋಷಗಳ ಮೂಲಕ ಬ್ರಾಹ್ಮಣರ ಮತ್ತು ರಾಜಪರಿವಾರ ಹಾಗೂ ವಿ.ಐ.ಪಿಗಳ ಬೃಹತ್ ಸಮ್ಮುಖದಲ್ಲಿ ಮಹಾರಾಣಿ ಕುದುರೆಯನ್ನು ಆಲಂಗಿಸಿ, ರಮಿಸಿ ಉದ್ಘಾಟಿಸುವಳು ನಂತರ ರಾಜಪುರೋಹಿತರು ಕುದುರೆಯ ಮುಖದ ಮೇಲೆ ಯಾಗದ ಕರಾರು ಸುತ್ತೋಲೆಯನ್ನು ಅಚ್ಚಿಸಿರುವ ತಾಮ್ರದ ಫಲಕ ಲಗತ್ತಿಸಿ ಬೀಳ್ಕೊಡುತ್ತಾರೆ ಅದರ ಹಿಂದೆ ಹಿಂದೆ ಯದ್ಧ ಸನ್ನದ್ಧ ಸೈನ್ಯ, ಕಪ್ಪ ಸಂಗ್ರಾಹಕ ಅಧಿಕಾರಿಗಳು ಆಳು ಕಾಳುಗಳ ದಂಡೇ ಸಾಗುತ್ತದೆ. ಸ್ವಚ್ಛಂದವಾಗಿ ತಿರುಗಾಡಿ ಯಾವ ರಾಜನ ಪ್ರದೇಶದಲ್ಲಿ ಅದು ಹಾದು ಹೋಗುತ್ತದೋ ಆ ಪ್ರದೇಶದ ರಾಜ ಯುದ್ಧ ಮಾಡಲು ಸಿದ್ಧನಾದರೆ ಕುದುರೆ ಕಟ್ಟಿ ಹಾಕಬೇಕು ಅಥವ ವಶಪಡಿಸಿಕೊಳ್ಳಬೇಕು ಇಲ್ಲದಿದ್ದರೆ ಸೋತೆನೆಂದು ಶರಣಾಗತಿಯನ್ನು ತೋರಿಸಬೇಕು. ಆನಂತರ ಆತ ಯಾಗ ನಡೆಸಿದ ರಾಜನ ಕೇವಲ ಸಾಮಂತನಾಗುತ್ತಾನೆ ಮಾತ್ರವಲ್ಲ ಅಪಾರ ಪ್ರಮಾಣದಲ್ಲಿ ನಗ, ನಾಣ್ಯಗಳ ಕಪ್ಪ-ಕಾಣಿಕೆ ನೀಡಬೇಕು ಮತ್ತು ರಾಜನ ಬೃಹತ್ ಸೈನ್ಯವನ್ನು ಎಲ್ಲಾ ರೀತಿಯಲ್ಲೂ ತೃಪ್ತಿಪಡಿಸಬೇಕು ಇದೊಂದು ಹಗಲು ದರೋಡೆ ಮತ್ತು ಜನರ ಹಾಗೂ ಒಂದು ರಾಷ್ಟ್ರದ ಸ್ವಾತಂತ್ರವನ್ನೇ ನಾಶಮಾಡುವಂತಹುದ್ದು  ಹೀಗೆ ಯಾಗ ದುರ್ಬಲ ಸಂಸ್ತಾನಗಳನ್ನೆಲ್ಲಾ ನುಂಗಿ ನೀರುಕುಡಿದು ಏಕ ಚಕ್ರಾಧಿಪತ್ಯವನ್ನುಸ್ಥಾಪಿಸುವ ಇಂದಿನ ಅಮೇರಿಕದ ಸಾಮ್ರಾಜ್ಯಶಾಹಿ ನೀತಿ ಅಂದಿನ ವೈದಿಕ ರಾಜರದ್ದು. ಇದು ಪ್ರಜಾಪ್ರಭುತ್ವ ವ್ವಸ್ಥೆಯಲ್ಲಿ ಬೇಕಾ?
ಪಾಪ ರಾಜರ ಸಾಮ್ರಾಜ್ಯವನ್ನು ವಿಸ್ತರಿಸಲು, ಲೂಟಿ ಹೊಡೆಯಲು ತನ್ನೆಲ್ಲ ಜೀವವನ್ನು ಧಾರೆ ಎರೆದ ಅಶ್ವಮೇಧದ ಕುದುರೆ ತನ್ನ ಯಾಗ ಮುಗಿಸಿ ಬಂದನಂತರದ ಸಮಾರೋಪ ಎಷ್ಟೊಂದು ಹೃದಯ ವಿದ್ರಾವಕವಾಗಿದೆ ಎಂದರೆ ಅದನ್ನ ನೆನೆಸಿಕೊಂಡರೆ ಇಂತಹ ಸಂಸ್ಕೃತಿಯ ಭಾಗ ಎನ್ನುವುದಕ್ಕೂ ನಾವು ಹೇಸಿಗೆ ಪಡಬೇಕಾಗುತ್ತದೆ.
ಕನ್ನಡ ವಿಶ್ವಕೋಶದ ಪ್ರಕಾರ-ಅಶ್ವಮೇಧವು ವಸಂತ ಅಥವಾ ಗ್ರೀಷ್ಮಋತುಗಳಲ್ಲಿ ನಡೆಸಲ್ಪಡುತ್ತಿದ್ದ ಒಂದು ಜನಪ್ರಿಯ ರಾಜ್ಯೋತ್ಸವ. ಗಾಯನ, ವೇಣು ವಾದನ ಇತ್ಯಾದಿಗಳನ್ನೊಳಗೊಂಡ ಈ ಉತ್ಸವದಲ್ಲಿ ಉತ್ತಮ ತಳಿಯ ಕುದುರೆಯೊಂದನ್ನು, ಅದು ಸ್ವೇಚ್ಛೆಯಾಗಿ ರಾಜಕುಮಾರರ-ಅಧಿಕಾರಿಗಳ ಬೆಂಗಾವಲಿನಲ್ಲಿ ಒಂದು ವರ್ಷ ಸುತ್ತಾಡಿ ಬಂದನಂತರ , ಹೋತವೊಂದರ ಜೊತೆಯಲ್ಲಿ ಬಲಿಗಂಬಕ್ಕೆ ಕಟ್ಟಿ, ನಂತರ ಅದರ ಮೇಲೆ ಬಟ್ಟೆಯನ್ನು ಹೊದಿಸಿ ಉಸಿರುಕಟ್ಟಿಸಿ ಸಾಯಿಸಲಾಗುತ್ತಿತ್ತು. ಆಮೇಲೆ ಅದನ್ನು ಜಾಣತನದಿಂದ ಕತ್ತರಿಸಿ ವಿವಿಧ ಭಾಗಗಳನ್ನು ಒಲೆಗಳ ಮೇಲೆ ಸುಟ್ಟು ಪ್ರಜಾಪತಿಗೆ ಅರ್ಪಿಸಲಾಗುತ್ತಿತ್ತು. ಬೇರೆ ಸಾವಿರಾರು ಪ್ರಾಣಿಗಳೂ ಬಲಿಯಾಗುತ್ತಿದ್ದವು.
ಅಶ್ವಮೇಧ ಯಾಗ ನಡೆಸುವ ವಿಧಿ ವಿಧಾನಗಳು ಎಷ್ಟೊಂದು ಅಶ್ಲೀಲವಾಗಿದೆ ಎಂದರೆ ಜಗತ್ತಿನ ಯಾವ ನೀಲಿ ಚಿತ್ರಕ್ಕಿಂತಲೂ ನಿಕೃಷ್ಟವಲ್ಲದ ಆಚರಣೆಗಳು. ನಮಗೆ ಸಭ್ಯತೆ ಇರುವ ಕಾರಣ ಅದನ್ನು ಇಲ್ಲಿ ಹೇಳಲು ಸಾಧ್ಯವಿಲ್ಲ ಯಜುರ್ವೇದದ ಅಧ್ಯಾಯ 23 ರ 16 ರಿಂದ 31 ಮಂತ್ರಗಳು ಅಶ್ವಮೇಧ ಯಾಗದಲ್ಲಿ ಹೇಳುವ ಮಂತ್ರಗಳು(ಈ ಮಂತ್ರಗಳು ರತಿವಿಜ್ಞಾನದ ಪರಕಾಷ್ಟೆ) ಹಾಗೂ ಶತಪಥ ಬ್ರಾಹ್ಮಣವೂ ಇದನ್ನೇ ಪುನರಾವರ್ತಿಸಿದೆ.
ಅಶ್ವಮೇಧ ಯಾಗ ಯಾರ ಹಕ್ಕು?
ಆರ್ಯ ರಾಜರು ಮಾತ್ರ ಈ ಯಾಗ ಮಾಡಲು ಅರ್ಹರಾಗಿದ್ದರು ಅನಾರ್ಯರಿಗೆ ಹಕ್ಕಿಲ್ಲ ಅಂದರೆ ಸಾಮ್ರಾಜ್ಯ ವಿಸ್ತರಣೆ ಮತ್ತು ಲೋಕ ಕಲ್ಯಾಣ ಕೇವಲ ಆರ್ಯರ ಸ್ವತ್ತು ಅದನ್ನು ಮೀರಿ ಬಲಿಚಕ್ರವರ್ತಿ ನಡೆಸಲು ಮುಂದಾದಕ್ಕೆ ಮೋಸದಿಂದ ಪುರೋಹಿತರು ವಾಮನನ ಅವತಾರದಲ್ಲಿ ಬಂದು ಬಲಿಯನ್ನು ನಾಶ ಮಾಡಿದ್ದು ಪುರಾಣ ಇತಿಹಾಸ, ಪರೀಕ್ಷಿತನ ಮೊಮ್ಮಗ ಜನಮೇಜಯನ ಯಾಗಕ್ಕೂ ತುರಕಾಶೇಯನು ಭಂಗ ತಂದು ಋಷಿಮುನಿಗಳ ಮಾರಣಹೋಮಕ್ಕೆ ಹಾದಿ ಮಾಡಿಕೊಟ್ಟಿದ್ದು ಈ ಕುತಂತ್ರವೆ. ಪುರಾಣೇತಿಹಾಸದಲ್ಲಿ ಮಹಾಭಾರತದಲ್ಲಿ ಧರ್ಮರಾಯ ಹಾಗೂ ಮಹಾಭಾರತದಲ್ಲಿ ಶ್ರೀರಾಮ (ಇಬ್ಬರೂ ಆರ್ಯೀಕರಣಗೊಂಡ ಕ್ಷತ್ರಿಯರು) ಅಶ್ವಮೇಧ ಯಾಗ ನಡೆಸಿದ ಉಲ್ಲೇಖ ಇದೆ ಬುದ್ದನ ನಂತರದ ದಿನಗಳಲ್ಲಿ ಅಶ್ವಮೇಧ ಯಾಗ ನಡೆಸಿದ ನಿದರ್ಶನ ಯಾವ ಪುಸ್ತಕಗಳಲ್ಲೂ ಇಲ್ಲ ಕೇವಲ ಕ್ರ.ಪೂ1500 ವರ್ಷಗಳ ಹಿಂದಿನ ದ್ರಾವಿಡರನ್ನು ಆರ್ಯರು ಸರ್ವನಾಶ ಮಾಡಿದ ವಿಧಾನವನ್ನು 500ವರ್ಷಗಳ ನಂತರ ರಚಿಸಿದ ಯಜುರ್ವೇದ ಮತ್ತು ಬ್ರಾಹ್ಮಣ ದರ್ಷನಗಳಲ್ಲಿ ಮಾತ್ರ ಉಲ್ಲೇಖ ಆರ್ಯರ ಮೂಲಗ್ರಂಥ ಋಗ್ವೇದದಲ್ಲಿ ಇದರ ಎಳ್ಳಷ್ಟೂ ಇಲ್ಲ.
ಇಷ್ಟೊಂದೂ ಅಮಾನವೀಯ ಯಾಗವನ್ನು ಯಾರೂ ವಿರೋಧಿಸಲಿಲ್ಲವೆ?
ಜರ್ಮನ್ ನಾಟಕಕಾರ ಮತ್ತು ಕವಿ ಬ್ರೆಕ್ಟ್ ತನ್ನ ಒಂದು ಕವನದಲ್ಲಿ ಹೀಗೆ ಹೇಳುತ್ತಾನೆ; "ನೀತಿ ಬೋಧಕರು, ಹಲವರಿಗೆ ತಿಳಿಯದ ಲ್ಯಾಟಿನ್ ಭಾಷೆಯಲ್ಲಿ ಪ್ರವಚನ ನೀಡುತ್ತಾರೆ. ನಾನು ಅದನ್ನು ಸಾಮಾನ್ಯರ ಆಡುಮಾತಿಗೆ ಅನುವಾದ ಮಾಡುತ್ತೇನೆ. ಆಗ ಅದರಲ್ಲಿ ಅಡಗಿರುವ ಮೋಸವೆಲ್ಲಾ ಬಯಲಾಗುತ್ತದೆ." ಇದೇ ಮಾತನ್ನು ಸಂಸ್ಕೃತದಲ್ಲಿರುವ ವೈದಿಕ ಸಾಹಿತ್ಯಕ್ಕೂ ಅನ್ವಯಿಸಬಹುದು. ವೇದಗಳ ಕಾಲದಲ್ಲಿ ಚಾರ್ವಾಕರು, ಲೋಕಾಯತರು ಭಾರಿ ಬಹಿರಂಗವಾಗೆ ಇವುಗಳನ್ನು ವಿರೋಧಿಸಿದ್ದಾರೆ ಅವರಿಗಳನ್ನು ನಾಶ ಮಾಡಲಾಯಿತು ಆ ಕಾಲಘಟ್ಟದ ಲೋಕಾಯತ ಚಳವಳಿ ಶೂದ್ರ ರಾಜ್ಯಗಳನ್ನು ಮತ್ತು ಗಣರಾಜ್ಯಗಳನ್ನು ಆರ್ಯರ ವಿರುದ್ಧ ಸ್ವಲ್ಪ ಕಾಲ ತಡೆಯಲು ಸಾಧ್ಯ ವಾಗಿತ್ತು ನಂತರ ಮಹಾವೀರ ಇಂತಹ ಸಿದ್ದಾಂತಕ್ಕೆ ಅಘಾತಕಾರಿ ಪೆಟ್ಟನ್ನು ಕೊಟ್ಟ ಜೈನ ಧರ್ಮ ಆರ್ಯರ ಒಂದು ವರ್ಗವನ್ನು(ವೈಶ್ಯ) ಕಿತ್ತುಕೊಂಡೇ ಬಿಟ್ಟಿತು ಹಾಗೂ ಬೌದ್ಧ ಧರ್ಮ ಈ ನೆಲದಲ್ಲಿ ಇನ್ನಿಲ್ಲದಂತೆ ಈ ಆಚರಣೆಯನ್ನು ಇಲ್ಲವಾಗಿಸಿತು ಮಾತ್ರವಲ್ಲ ಆರ್ಯ ಸಾಮ್ರಾಜ್ಯಗಳನ್ನೇ ನಿರ್ನಾಮ ಮಾಡಿತು ತದನಂತರ ದಾಸ ಚಳುವಳಿ, ಶರಣಚಳುವಳಿ ಇಂತಹ ಆಚರಣೆಗಳಿಗೆ ಮಾರಣಾಂತಿಕ ಪೆಟ್ಟು ನೀಡಿದವು. ಈ ಹಾಸನದವರಿಗೇನು ಬಂದಿದೆಯೋ ಕಾಣೆ  ಈ ಪ್ರಜಾಪ್ರಭುತ್ವ ಯುಗದಲ್ಲೂ ಈ ಸಾಮ್ರಾಜ್ಯಶಾಹಿ ಚಟುವಟಿಕೆಯನ್ನ ನಡೆಸುತ್ತಿದ್ದಾರಲ್ಲ ಇವರು ನಿಸ್ಸಂದೇಹವಾಗಿಯೂ ಪ್ರಜಾಪ್ರಭುತ್ವದ ವಿರೋಧಿಗಳು.
ಸ್ವಾತಂತ್ರ್ಯ ವಿರೋಧಿ ಅಶ್ವಮೇಧ ಎಲ್ಲಿ, ವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿಹಿಡಿಯುವ ಪ್ರಜಾಸತ್ತೆ ಎಲ್ಲಿ ಇದು ಎಷ್ಟರ ಮಟ್ಟಿಗೆ ಪ್ರಸ್ತುತ ಅನ್ನುವುದಷ್ಟೇ ಈಗಿನ ಪ್ರಶ್ನೆ. ಆ 8ಕೋಟಿರೂಗಳಲ್ಲಿ ಹಾಸನದ 20 ಗ್ರಾಮ ಪಂಚಾಯತಿಗಳ ಮೂಲಭೂತ ಸೌಕರ್ಯಗಳನ್ನು ಭರಪೂರ ಗೊಳಿಸಬಹುದಿತ್ತು, 1000 ವಿಶಾಲವಾದ ಮನೆಗಳನ್ನು ವಸತಿಹೀನರಿಗೆ ಕಟ್ಟಿಸಿ ಕೊಡಬಹುದಿತ್ತು. ಇಡಿ ಹಾಸನ ಜಿಲ್ಲೆಯ 1ರಿಂದ 10ನೇ ಶಾಲೆವರೆಗಿನ ಮಕ್ಕಳಿಗೆ ಉಚಿತ ಶಿಕ್ಷಣ, ಸವಲತ್ತುಗಳನ್ನು ನೀಡಬಹುದಿತ್ತು ಇನ್ನು ಏನೇನೊ ಮಾಡಬಹುದಿತ್ತು.
ಪ್ರಜಾಪ್ರಭುತ್ವ ಪ್ರೀತಿಸುವವರು ಯಾರಾದರು ಇದ್ದರೆ ಯೋಚಿಸಿ.
                                                                                                                                                     -ಹೆಚ್,ಎ,ಅಹಮದ್. ಹಾಸನ

1 comment:

  1. ಪ್ರಿಯಾ ಅಹಮದ್ ರವರೆ ನಿಮ್ಮ ಲೇಖನವು ಅಂದಿನ ಆರ್ಯ ರಾಜರು ಇಂದಿನ ಪುರೋಹಿತ ಮೇಲ್ವರ್ಗಾಗಳ ಆಶ್ಲೀಲ ಆಚರಣೆಗಳ ಬಗ್ಗೆ ಒಂದಷ್ಟು ಬೆಳಕು ಚಲ್ಲಲು ಸಾಧ್ಯವಾಗಿದೆ. ನಿಮಗೆ ನಮ್ಮ ಅಭಿನಂದನೆಗಳು ಇದೇ ರೀತಿಯ ಲೇಖನಗಳಿಗಾಗಿ ನಾನು ಕಾಯುತ್ತಿರುತ್ತೇನೆ.

    ReplyDelete